ಕೇಂದ್ರ ಬಜೆಟ್‌ 2024: ಬಯೋಗ್ಯಾಸ್ ತಯಾರಕರಿಗೆ ಬಂಪರ್‌

KannadaprabhaNewsNetwork |  
Published : Feb 02, 2024, 01:00 AM ISTUpdated : Feb 02, 2024, 08:23 AM IST
Union Budget 2024

ಸಾರಾಂಶ

ವಾಹನ, ಅಡುಗೆ ಅನಿಲದಲ್ಲಿ ಬಯೋಗ್ಯಾಸ್‌ ಮಿಶ್ರಣ ಕಡ್ಡಾಯ ಮಾಡಲಾಗಿದೆ. ಇಂಧನ ಭದ್ರತೆ ಸಾಧಿಸುವತ್ತ ದೇಶದ ಪಯಣ ಸಾಗಿದೆ ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಬಯೋಮಾಸ್‌ನಿಂದ ಕಂಪ್ರೆಸ್ಡ್‌ ಬಯೋಗ್ಯಾಸ್‌ ತಯಾರಿಸುವವರಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲು ಹಾಗೂ ಕ್ರಮೇಣ ಅಡುಗೆ ಅನಿಲ ಮತ್ತು ವಾಹನಗಳಿಗೆ ಬಳಸುವ ಅನಿಲದಲ್ಲಿ ಬಯೋಗ್ಯಾಸ್‌ ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಬಜೆಟ್‌ನಲ್ಲಿ ಈ ಕುರಿತು ಪ್ರಕಟಿಸಿರುವ ನಿರ್ಮಲಾ ಸೀತಾರಾಮನ್‌, ‘ಬಯೋಮಾಸ್‌ ಅನ್ನು ಕಂಪ್ರೆಸ್ಡ್‌ ಬಯೋಗ್ಯಾಸ್‌ (ಸಿಬಿಜಿ) ಆಗಿ ಪರಿವರ್ತಿಸುವ ಯಂತ್ರ ಅಳವಡಿಸಿಕೊಳ್ಳುವವರಿಗೆ ಸರ್ಕಾರದಿಂದ ನೆರವು ನೀಡಲಾಗುವುದು. 

ಹಾಗೆಯೇ, ಹಂತ ಹಂತವಾಗಿ ಅಡುಗೆ ಅನಿಲ ಮತ್ತು ವಾಹನಗಳಲ್ಲಿ ಬಳಸುವ ನೈಸರ್ಗಿಕ ಅನಿಲದಲ್ಲಿ ಬಯೋಗ್ಯಾಸ್‌ ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು. ಇಂಧನ ಭದ್ರತೆಯತ್ತ ದೇಶವನ್ನು ಕೊಂಡೊಯ್ಯಲು ಈ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

‘ಕಂಪ್ರೆಸ್ಡ್‌ ಬಯೋಗ್ಯಾಸನ್ನು ವಾಹನಗಳಲ್ಲಿ ಬಳಸುವ ಕಂಪ್ರೆಸ್ಡ್‌ ನ್ಯಾಚುರಲ್‌ ಗ್ಯಾಸ್‌ (ಸಿಎನ್‌ಜಿ)ನಲ್ಲಿ ಮತ್ತು ಅಡುಗೆ ಮನೆಯಲ್ಲಿ ಬಳಸುವ ಪೈಪ್ಡ್‌ ನ್ಯಾಚುರಲ್‌ ಗ್ಯಾಸ್‌ (ಪಿಎನ್‌ಜಿ)ನಲ್ಲಿ ಮಿಶ್ರಣ ಮಾಡುವುದನ್ನು ಹಂತ ಹಂತವಾಗಿ ಕಡ್ಡಾಯಗೊಳಿಸಲಾಗುತ್ತದೆ. 

ಅದಕ್ಕೂ ಮುನ್ನ ಬಯೋಗ್ಯಾಸ್‌ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಬಯೋಮಾಸ್‌ನಿಂದ ಬಯೋಗ್ಯಾಸ್‌ ತಯಾರಿಸುವ ಯಂತ್ರಗಳನ್ನು ಕೊಳ್ಳುವವರಿಗೆ ನೆರವು ನೀಡಲಾಗುತ್ತದೆ. 

ಹಸಿರು ಇಂಧನಗಳ ಬಳಕೆ ಹೆಚ್ಚಿಸಲು ಬಯೋ ಮ್ಯಾನ್ಯುಫ್ಯಾಕ್ಚರಿಂಗ್‌ ಮತ್ತು ಬಯೋ ಫೌಂಡ್ರಿ ಎಂಬ ಹೊಸ ಯೋಜನೆಗಳನ್ನು ಆರಂಭಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಬಯೋಗ್ಯಾಸ್‌ಗೆ ಉತ್ತೇಜನ ನೀಡಿದರೆ ಪರಿಸರಸ್ನೇಹಿ ಇಂಧನ ಉತ್ಪಾದಿಸಲು ಮತ್ತು ಜೈವಿಕ ಪಾಲಿಮರ್‌, ಬಯೋ ಪ್ಲಾಸ್ಟಿಕ್‌, ಬಯೋ ಫಾರ್ಮಾಸುಟಿಕಲ್ಸ್‌ ಹಾಗೂ ಜೈವಿಕ ಕೃಷಿ ತ್ಯಾಜ್ಯಗಳನ್ನು ಸಂಸ್ಕರಣೆ ಮಾಡಲು ಅನುಕೂಲವಾಗುತ್ತದೆ. 

ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.ಬಯೋಗ್ಯಾಸ್‌ ಉತ್ಪಾದನೆಗೆ ಉತ್ತೇಜನ ನೀಡುವ ಕೇಂದ್ರದ ನಿರ್ಧಾರವನ್ನು ಇಂಡಿಯಾ ಬಯೋಗ್ಯಾಸ್‌ ಅಸೋಸಿಯೇಷನ್‌ ಅಧ್ಯಕ್ಷ ಗೌರವ್‌ ಕೆದಿಯಾ ಸ್ವಾಗತಿಸಿದ್ದಾರೆ.

 ‘ಕೇಂದ್ರ ಬಜೆಟ್‌ನಲ್ಲಿ ಬಯೋಮಾಸ್‌ ಉತ್ಪಾದಿಸುವ ಯಂತ್ರಗಳನ್ನು ಕೊಳ್ಳಲು ಆರ್ಥಿಕ ನೆರವು ಪ್ರಕಟಿಸಲಾಗಿದೆ. ಇದರಿಂದ ಬಯೋಮಾಸ್‌ ಅನ್ನು ಬಯೋಗ್ಯಾಸ್‌ ಆಗಿ ಪರಿವರ್ತಿಸುವುದಕ್ಕೆ ಪ್ರೋತ್ಸಾಹ ಲಭಿಸಲಿದೆ. 

ಹಾಗೆಯೇ, ಹಸಿರು ಭವಿಷ್ಯಕ್ಕಾಗಿ ಹೆಚ್ಚಿನ ಸಂಶೋಧನೆಗಳಿಗೆ ಉತ್ತೇಜನ ನೀಡುವುದರಿಂದ ಸ್ವಚ್ಛ, ಹಸಿರು ಹಾಗೂ ಸಮೃದ್ಧ ಭವಿಷ್ಯ 2047ರ ವಿಕಸಿತ ಭಾರತದೊಂದಿಗೆ ಸಾಕಾರವಾಗಲಿದೆ’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ