ಮುಂಬೈ: 150 ಕೋಟಿ ರು. ಬಿಟ್ ಕಾಯಿನ್ ಹಗರಣದ ಆರೋಪ ಸಂಬಂಧ ನಟಿ ಶಿಲ್ಪಾಶೆಟ್ಟಿ ಅವರ ಪತ್ನಿ, ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಕ್ರಿಪ್ಟೋ ಹಗರಣದ ಮಾಸ್ಟರ್‌ಮೈಂಡ್ ದಿ.ಅಮಿತ್ ಭಾರದ್ವಾಜ್‌ರಿಂದ ಕುಂದ್ರಾ 150 ಕೋಟಿ ರು. ಮೌಲ್ಯದ 285 ಬಿಟ್‌ಕಾಯಿನ್‌ಗಳನ್ನು ಪಡೆದಿದ್ದರು. ಆದರೆ ಭಾರದ್ವಾಜ್ ವಿರುದ್ಧ ತನಿಖೆ ಆರಂಭವಾದ ಬಳಿಕವೂ ಆತನಿಂದ ಪಡೆದಿದ್ದ ಬಿಟ್‌ಕಾಯಿನ್‌ಗಳನ್ನು ಕುಂದ್ರಾ ತನಿಖಾ ಸಂಸ್ಥೆಗೆ ಒಪ್ಪಿಸದೇ ಮಾರೆಮಾಚಲು ಯತ್ನಿಸಿದ್ದರು ಎಂದು ಎಂದು ಚಾರ್ಜ್‌ಶೀಟ್‌ನಲ್ಲಿ ಕುಂದ್ರಾ ವಿರುದ್ಧ ಆರೋಪಿಸಲಾಗಿದೆ.
ಕುಂದ್ರಾ ಅವರಿಗೆ ಕ್ರಿಫ್ಟೋ ಹಗರಣದ ಮಾಸ್ಟರ್‌ಮೈಂಡ್ ದಿ.ಅಮಿತ್ ಭಾರದ್ವಾಜ್ ಅವರು ಈ ಬಿಟ್‌ಕಾಯಿನ್‌ಗಳನ್ನು ನೀಡಿದ್ದ. ಉಕ್ರೇನ್‌ನಲ್ಲಿ ಮೈನಿಂಗ್ ಸಂಸ್ಥೆ ಸ್ಥಾಪಿಸಲು ಇದನ್ನು ನೀಡಲಾಗಿತ್ತು. ಆದರೆ, ಆ ಯೋಜನೆಯ ಅನುಷ್ಠಾನ ವಿಫಲವಾದ ಹಿನ್ನೆಲೆಯಲ್ಲಿ ಕುಂದ್ರಾ ಅವರು ಬಿಟ್‌ಕಾಯಿನ್‌ಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಬಳಿಕ ಇ.ಡಿ. ತನಿಖೆಗೆ ಸಹಕರಿಸದೇ ಹಗರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇ.ಡಿ.ಗೆ ನೀಡಿದ ಪ್ರಾಥಮಿಕ ಹೇಳಿಕೆಯಲ್ಲಿ ಬಿಟ್‌ಕಾಯಿನ್ ಕುರಿತ ಮಾಹಿತಿ ಹೊಂದಿರುವ ಐಫೋನ್ ಹಾನಿಗೊಳಗಾಗಿದೆ ಎಂದು ಕುಂದ್ರಾ ಹೇಳಿದ್ದಾರೆ. ಆದರೆ, ಇ.ಡಿ. ಮಾತ್ರ, ‘ಇದು ಸಾಕ್ಷ್ಯಗಳನ್ನು ನಾಶ ಮಾಡಲು ನಡೆಸುತ್ತಿರುವ ಪ್ರಯತ್ನ’ ಎಂದು ಆರೋಪಿಸಿದೆ.
ಮೋದಿಯಿಂದ ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಕಾಪಿ: ಕಾಂಗ್ರೆಸ್ ವ್ಯಂಗ್ಯ
ನವದೆಹಲಿ: ‘ಕರ್ನಾಟಕದ ಗೃಹಲಕ್ಷ್ಮೀ ಯೋಜನೆಯನ್ನು ಟೀಕಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಬಿಹಾರದಲ್ಲಿ ಅಂಥದ್ದೇ ಯೋಜನೆಯನ್ನು ತಂದಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ವ್ಯಂಗ್ಯವಾಡಿದ್ದಾರೆ.ಬಿಜೆಪಿ-ಜೆಡಿಯು ಬಿಹಾರದಲ್ಲಿ 75 ಲಕ್ಷ ಮಹಿಳೆಯರಿಗೆ 10 ಸಾವಿರ ರು. ನೀಡುವ ಯೋಜನೆ ಜಾರಿಗೆ ತಂದಿವೆ. ಈ ಬಗ್ಗೆ ಮಾತನಾಡಿರುವ ಜೈರಾಂ,‘ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಳೆದ 2 ವರ್ಷಗಳಿಂದಲೂ 1.3 ಕೋಟಿ ಮಹಿಳೆಯರಿಗೆ ಮಾಸಿಕ 2500 ರು. ಕೊಡುತ್ತಿದೆ. ಇದನ್ನು ಅಂದಿನಿಂದಲೂ ಮೋದಿ ಟೀಕಿಸುತ್ತಿದ್ದರು. ಈಗ ಅವರೇ ನಮ್ಮ ಯೋಜನೆಯನ್ನು ಅನುಸರಿಸಿದ್ದಾರೆ. ಚುನಾವಣೆ ನಂತರ ಸಿಎಂ ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ ಮಾಜಿಯಾಗುತ್ತಾರೆ’ ಎಂದರು.
ಅತಿ ಹೆಚ್ಚು ಪ್ರವಾಸಿಗರ ಭೇಟಿ: ದೇಶದಲ್ಲೇ ತಾಜ್ ಮಹಲ್ ನಂ.1
ನವದೆಹಲಿ: ದೇಶದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಆಗ್ರಾದಲ್ಲಿನ ತಾಜ್ ಮಹಲ್ ಅಗ್ರಸ್ಥಾನ ಕಾಪಾಡಿಕೊಂಡಿದೆ. ತಾಜ್ ಮಹಲ್‌ಗೆ 2024-25ರಲ್ಲಿ 62 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 6.4 ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರ ನಂತರದಲ್ಲಿ ಒಡಿಶಾದ ಕೊನಾರ್ಕ್ ಸೂರ್ಯ ದೇಗುಲಕ್ಕೆ 35 ಲಕ್ಷ, ದೆಹಲಿಯ ಕುತುಬ್ ಮಿನಾರ್ 32 ಲಕ್ಷ ಜನರು ಹೋಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇನ್ನು 2024ರಲ್ಲಿ 99 ಲಕ್ಷ ವಿದೇಶಿ ಪ್ರವಾಸಿಗರ ಭಾರತಕ್ಕೆ ಆಗಮಿಸಿದ್ದರು. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.4.52ರಷ್ಟು ಹೆಚ್ಚಳವಾಗಿದೆ.
ದ.ಅಮೆರಿಕದ 4 ರಾಷ್ಟ್ರಗಳಿಗೆ ರಾಹುಲ್ ಪ್ರವಾಸ
ನವದೆಹಲಿ : ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೊಲಂಬಿಯಾ, ಬ್ರೆಜಿಲ್, ಕೊಲಂಬಿಯಾ ಸೇರಿದಂತೆ ದಕ್ಷಿಣ ಅಮೆರಿಕದ 4 ರಾಷ್ಟ್ರಗಳ ಪ್ರವಾಸ ಆರಂಭಿಸಿದ್ದಾರೆ. ತಮ್ಮ ಭೇಟಿ ವೇಳೆ ಅವರು ಅಲ್ಲಿನ ರಾಜಕೀಯ ನೇತಾರರು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಈ ಬಗ್ಗೆ ಹೇಳಿಕೆ ನೀಡಿ, ‘ಬ್ರೆಜಿಲ್, ಕೊಲಂಬಿಯಾ ಸೇರಿದಂತೆ ದ. ಅಮೆರಿಕದ ದೇಶಗಳಿಗೆ ರಾಹುಲ್ ಪ್ರವಾಸ ಆರಂಭಿಸಿದ್ದರೆ. ಅಲ್ಲಿನ ವಿವಿಗಳಲ್ಲಿ ವಿದ್ಯಾರ್ಥಿಗಳ ಜತೆ ಸಂವಹನ ಹಾಗೂ ಆ ರಾಷ್ಟ್ರಗಳ ರಾಜಕೀಯ ನಾಯಕರು, ಉದ್ಯಮಿಗಳ ಜತೆಗೆ ಸಭೆ ನಡೆಸಲಿದ್ದಾರೆ. ’ಇದು ವ್ಯಾಪಾರ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಯ ಹಾದಿಗಳನ್ನು ತೆರೆಯಲಿದೆ’ ಎಂದಿದ್ದಾರೆ.ಆದರೆ ಅವರು ಎಷ್ಟು ದಿನಗಳ ಕಾಲ ವಿದೇಶದಲ್ಲಿ ಇರಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ಈ ಹಿಂದೆ ರಾಹುಲ್ ವಿದೇಶ ಪ್ರವಾಸ ನಡೆಸಿದ ವೇಳೆ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿ ಮೋದಿ ಸರ್ಕಾರವನ್ನು ಟೀಕಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಮೋದಿ ಭಾಷಣ ಲೈವ್‌ನಲ್ಲಿ ತಾಂತ್ರಿಕ ದೋಷ: ಐಎಎಸ್ ಅಧಿಕಾರಿ ಎತ್ತಂಗಡಿ
ಜೈಪುರ: ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ನೇರಪ್ರಸಾರಕ್ಕೆ ಹಾಕಲಾಗಿದ್ದ ಬೃಹತ್ ಟೀವಿ ಪರದೆಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದಕ್ಕೆ ಮಹಿಳಾ ಐಎಎಸ್ ಅಧಿಕಾರಿ ಅರ್ಚನಾ ಸಿಂಗ್‌ರನ್ನು ಯಾವುದೇ ಹುದ್ದೆ ನೀಡದೇ ಎತ್ತಂಗಡಿ ಮಾಡಲಾಗಿದೆ.ಮೋದಿ ರಾಜಸ್ಥಾನದ ನಾಪ್ಲಾ ಗ್ರಾಮದಲ್ಲಿ 3 ದಿನ ಹಿಂದೆ ಸಭೆ ನಡೆಸಿದ್ದರು. ಈ ವೇಳೆ ನೇರಪ್ರಸಾರಕ್ಕೆ ದೊಡ್ಡ ಪರದೆ ಹಾಕಲಾಗಿತ್ತು. ಆಗ ಪದೇ ಪದೇ ಆಡಿಯೋ, ವಿಡಿಯೋ ತೊಂದರೆ ಆಗಿ ಖಾಲಿ ಪರದೆ ಕಾಣಿಸಿತ್ತು. ಪರಿಣಾಮ ಜನರಿಗೆ ಪ್ರಧಾನಿ ಮಾತು ಆಲಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಕಾರ್ಯಕ್ರಮದ ತಾಂತ್ರಿಕ ಕೆಲಸದ ಮುಂದಾಳತ್ವ ವಹಿಸಿದ್ದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಕಾರ್ಯದರ್ಶಿ ಅರ್ಚನಾ ಸಿಂಗ್‌ರನ್ನು ರಾಜ್ಯ ಸರ್ಕಾರ ಯಾವುದೇ ಹುದ್ದೆ ನೀಡದೆ ಎತ್ತಂಗಡಿ ಮಾಡಿದೆ.