ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅಫಿಡವಿಟ್‌ನಲ್ಲಿ ಸಂಪೂರ್ಣ ವಿವರವಿಲ್ಲ : ಬಿಜೆಪಿ

KannadaprabhaNewsNetwork |  
Published : Oct 27, 2024, 02:21 AM ISTUpdated : Oct 27, 2024, 05:04 AM IST
Priyanka Gandhi

ಸಾರಾಂಶ

ಕೇರಳದ ವಯನಾಡಿನಿಂದ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಹಾಗೂ ಪತಿ ರಾಬರ್ಟ್‌ ವಾದ್ರಾರ ಸಂಪೂರ್ಣ ಆಸ್ತಿ ಹಾಗೂ ಇತರ ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ನವದೆಹಲಿ: ಕೇರಳದ ವಯನಾಡಿನಿಂದ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಹಾಗೂ ಪತಿ ರಾಬರ್ಟ್‌ ವಾದ್ರಾರ ಸಂಪೂರ್ಣ ಆಸ್ತಿ ಹಾಗೂ ಇತರ ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ, ‘ಎಲ್ಲಾ ಅಭ್ಯರ್ಥಿಗಳು ತಮ್ಮ, ಸಂಗಾತಿಯ ಹಾಗೂ ಅವಲಂಬಿತರ ಕುರಿತ ಸಂಪೂರ್ಣ ಮಹಿತಿಯನ್ನು ಬಹಿರಂಗಪಡಿಸಬೇಕು ಎಂಬ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಪ್ರಿಯಾಂಕಾ ಉಲ್ಲಂಘಿಸಿದ್ದಾರೆ. ಗಾಂಧಿ ಪರಿವಾರ ಕಾನೂನಿಗಿಂತ ಉನ್ನತವಲ್ಲ. ಅಫಿಡವಿಟ್ಟಿನಲ್ಲಿ ತಪ್ಪು ಮಾಹಿತಿ ನೀಡಿದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿಲ್ಲ’ ಎಂದರು.

ನ್ಯಾಷನಲ್‌ ಹೆರಾಲ್ಡ್‌ ಆಸ್ತಿಯನ್ನು ಗಾಂಧಿ ಪರಿವಾರ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂಬ ಆರೋಪವನ್ನು ಉಲ್ಲೇಖಿಸಿದ ಅವರು, ‘ಅದರ ಷೇರುಗಳ ಮಾಲೀಕತ್ವದ ಕುರಿತು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿಲ್ಲ. ಅಂತೆಯೇ ಇನ್ನೆರಡು ಸಂಸ್ಥೆಗಳಲ್ಲಿ ಅವರು ಹೊಂದಿರುವ ಪಾಲನ್ನೂ ಬಹಿರಂಗಪಡಿಸಿಲ್ಲ. ದಾಖಲೆ ಸಹಿತ ಈ ಆರೋಪಗಳನ್ನು ಮಾಡುತ್ತಿದ್ದು, ಇದನ್ನವರು ನಿರಾಕರಿಸಲು ಸಾಧ್ಯವಿಲ್ಲ. ಇದಕ್ಕೆ ಪ್ರಿಯಾಂಕಾ ಉತ್ತರಿಸಬೇಕು’ ಎಂದರು.

ಅ.28 ನಾಮಪತ್ರ ಪರಿಶೀಲನೆಗೆ ಕೊನೆ ದಿನವಾಗಿದೆ.

ನೀವೇ ನನ್ನ ಮಾರ್ಗದರ್ಶಕರು, ಶಿಕ್ಷಕರು : ವಯನಾಡ್ ಜನತೆಗೆ ಪ್ರಿಯಾಂಕಾ ಪತ್ರ

ನವದೆಹಲಿ: ‘ವಯನಾಡಿನ ಜನರಯ ನನ್ನ ರಾಜಕೀಯ ಹಾದಿಯಲ್ಲಿ ಮಾರ್ಗದರ್ಶಕರು ಮತ್ತು ಶಿಕ್ಷಕರು. ಸಾರ್ವಜನಿಕ ಪ್ರತಿನಿಧಿಯಾಗಿ ಇದು ನನ್ನ ಮೊದಲ ಪಯಣ. ಆದರೆ ಸಾರ್ವಜನಿಕ ಹೋರಾಟಗಾರರಾಗಿ ಅಲ್ಲ’ ಎಂದು ವಯನಾಡು ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಶನಿವಾರ ಕ್ಷೇತ್ರದ ಜನತೆಗೆ ಬಹಿರಂಗ ಪತ್ರ ಬರೆದಿರುವ ಇವರು‘ ಈ ಪಯಣದಲ್ಲಿ ನೀವು ನನ್ನ ಮಾರ್ಗದರ್ಶಕರು ಮತ್ತು ಶಿಕ್ಷಕರು. ಸಾರ್ವಜನಿಕ ಪ್ರತಿನಿಧಿಯಾಗಿ ಇದು ನನ್ನ ಮೊದಲ ಪಯಣ. ಆದರೆ ಹೋರಾಟಗಾರರಾಗಿ ಅಲ್ಲ. ಪ್ರಜಾಪ್ರಭುತ್ವ, ನ್ಯಾಯ, ಸಂವಿಧಾನದ ಮೌಲ್ಯಗಳಿಗಾಗಿ ಹೋರಾಡುವುದು ನನ್ನ ಜೀವನದ ಕೇಂದ್ರವಾಗಿದೆ. 

ನಿಮ್ಮ ಬೆಂಬಲದೊಂದಿಗೆ ಭವಿಷ್ಯಕ್ಕಾಗಿ ಈ ಯುದ್ಧವನ್ನು ಮುಂದಕ್ಕೆ ಸಾಗಿಸಲು ಎದುರು ನೋಡುತ್ತಿದ್ದೇನೆ. ನೀವು ನನ್ನನ್ನು ಸಂಸದರನ್ನಾಗಿ ಆಯ್ಕೆ ಮಾಡಿದರೆ ನಿಮಗೆ ತುಂಬಾ ಕೃತಜ್ಞಳಾಗಿರುತ್ತೇನೆ’ ಎಂದಿದ್ದಾರೆ.ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನ.13ರಂದು ಉಪ ಚುನಾವಣೆ ನಡೆಯಲಿದೆ.

PREV

Recommended Stories

ಹೇಳದೆ, ಕೇಳದೆ ರಾಹುಲ್‌ ಫಾರಿನ್‌ಗೆಹೋಗುತ್ತಾರೆ: ಸಿಆರ್‌ಪಿಎಫ್‌ ದೂರು- ಭದ್ರತೆಯನ್ನು ಗಂಭೀರವಾಗಿ ಪರಿಗಣಿಸ್ತಿಲ್ಲ: ಖರ್ಗೆಗೆ ಪತ್ರ
ಮೊಬೈಲ್‌ನ ಇಎಂಐ ಕಟ್ಟಿಲ್ವಾ? ನಿಮ್ಮಫೋನ್‌ ಶೀಘ್ರವೇ ಲಾಕ್‌ ಆಗಬಹುದು!- ಸಾಲ ಕಟ್ಟದೆ ಓಡಾಡುತ್ತಿರುವವರಿಗೆ ಸದ್ಯವೇ ಆರ್‌ಬಿಐ ಶಾಕ್‌