ಚೆನ್ನೈ: ತಮಿಳುನಾಡು ಬಜೆಟ್‌ನಲ್ಲಿ ದೇಶದ ಅಧಿಕೃತ ರುಪಾಯಿ (₹) ಚಿಹ್ನೆ ಬದಲು ತಮಿಳು ಲಿಪಿಯ ''''ರು'''' ಬಳಸಿದ್ದನ್ನು ವಿರೋಧಿಸಿದ ಬಿಜೆಪಿ ಮತ್ತು ಎಐಎಡಿಎಂಕೆ ಶಾಸಕರು, ಬಜೆಟ್ ಮಂಡನೆ ವೇಳೆ ಕಲಾಪ ಬಹಷ್ಕರಿಸಿ ಸಭಾತ್ಯಾಗ ಮಾಡಿದರು.
ಪ್ರತಿಭಟನೆ ಭಾಗವಾಗಿ ಕಪ್ಪು ಸೀರೆ ಧರಿಸಿಕೊಂಡು ಕಲಾಪಕ್ಕೆ ಆಗಮಿಸಿದ್ದ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಅವರು, ರಾಜ್ಯ ಸರ್ಕಾರ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ತಮಿಳು ಮತ್ತು ತಮಿಳು ಸಂಸ್ಕೃತಿ ಹೆಸರಲ್ಲಿ ರಾಷ್ಟ್ರದ ಚಿಹ್ನೆ ವಿರುದ್ಧವೇ ತೊಡೆತಟ್ಟಲಾಗುತ್ತಿದೆ. ಇದು ಸಂವಿಧಾನ ವಿರೋಧಿ ಎಂದರು.
‘ಇದೇ ವೇಳೆ ಕಲಾವಿದ ಉದಯ್ ಕುಮಾರ್ ರಚಿಸಿದ ದೇಶದ ಅಧಿಕೃತ ರುಪಾಯಿ ಚಿಹ್ನೆಯನ್ನು ನೋಡಿ ಹಿಂದಿನ ಸಿಎಂ ಕರುಣಾನಿಧಿ ಅವರೇ ಸಂಭ್ರಮಿಸಿದ್ದರು. ಇದೀಗ ಯಾಕೆ ನೀವು ಜನರನ್ನು ಮೂರ್ಖರನ್ನಾಗಿಸುತ್ತಿದ್ದೀರಿ?’ ಎಂದು ಪ್ರಶ್ನಿಸಿದರು.
ಸ್ಟಾಲಿನ್ ತಮ್ಮ ಹೆಸರನ್ನು ತಮಿಳಿಗೆ ಬದಲಾಯಿಸಲಿ: ಬಿಜೆಪಿ ನಾಯಕಿ
ಚೆನ್ನೈ: ‘ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಹೆಸರನ್ನು ತಮಿಳು ಭಾಷೆಯ ಯಾವುದಾದರೂ ಹೆಸರಿಗೆ ಬದಲಾಯಿಸಿಕೊಳ್ಳಲಿ’ ಎಂದು ಬಿಜೆಪಿ ನಾಯಕಿ, ಮಾಜಿ ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್ ಸವಾಲೆಸೆದಿದ್ದಾರೆ.ಭಾಷೆ ಹೆಸರಿನಲ್ಲಿ ರುಪಾಯಿ (₹) ಚಿಹ್ನೆಯನ್ನು ಬಜೆಟ್‌ನಿಂದ ತೆಗೆದ ಬಗ್ಗೆ ಪ್ರತಿಕ್ರಿಯಿಸಿದ ತಮಿಳಿಸಾಯಿ, ಸಿಎಂ ಸ್ಟಾಲಿನ್ ತಮ್ಮ ಹೆಸರನ್ನು ತಮಿಳಿಗೆ ಬದಲಾಯಿಸಿಕೊಳ್ಳಲಿ. ಸ್ಟಾಲಿನ್ ತಮ್ಮ ಸರ್ಕಾರದ ವೈಫಲ್ಯಗಳನ್ನು ಅಡಗಿಸಲು, ಭಾಷೆ ಮತ್ತು ವಿಭಜನೆ ಹೆಸರಿನಲ್ಲಿ ಆಟವಾಡುತ್ತಿದ್ದಾರೆ. ಡಿಎಂಕೆ ಪಕ್ಷವು ದೇಶವಿರೋಧಿ ಮನಸ್ಥಿತಿಯಿಂದ ವಿಭಜನೆ ಬಗ್ಗೆಯೇ ಮಾತನಾಡುತ್ತದೆ. ಡಿಎಂಕೆ ರಾಷ್ಟ್ರೀಯ ಏಕತೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.
₹ ಚಿಹ್ನೆ ಕೈಬಿಟ್ಟಿದ್ದರಿಂದ ಅವಮಾನ ಆಗಿಲ್ಲ: ವಿನ್ಯಾಸಕ ಉದಯ್
ಚೆನ್ನೈ: ತಮಿಳುನಾಡು ಬಜೆಟ್‌ನ ಪ್ರಚಾರ ಪೋಸ್ಟ್‌ನಲ್ಲಿ ಅಧಿಕೃತ ರುಪಾಯಿ (₹) ಚಿಹ್ನೆ ಬದಲು ತಮಿಳು ಲಿಪಿಯಾದ ''''ರು'''' ಬಳಸಿದ್ದರಿಂದ ತಮಗೆ ಯಾವುದೇ ಅವಮಾನ ಆಗಿಲ್ಲ ಎಂದು ಅದರ ವಿನ್ಯಾಸಕ ಡಿ.ಉದಯ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಎನ್‌ಡಿಟೀವಿ ಜತೆ ಮಾತನಾಡಿದ ಅವರು, ‘ನನ್ನ ವಿನ್ಯಾಸದ ಕುರಿತು ನನಗೆ ಹೆಮ್ಮೆ ಇದೆ. ನಾನೊಬ್ಬ ವಿನ್ಯಾಸಕ.ಆದರೆ ನನ್ನ ವಿನ್ಯಾಸ ಕೆಲವರಿಗೆ ಹಿಡಿಸಬಹುದು ಅಥವಾ ಕೆಲವರಿಗೆ ಹಿಡಿಸದೇ ಇರಬಹುದು. ಎರಡನ್ನೂ ನಾನು ಸ್ವೀಕರಿಸುತ್ತೇನೆ.
ಹೀಗಾಗಿ ಈ ವಿವಾದ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸರ್ಕಾರದ ನಡೆಯಿಂದ ನನ್ನ ಕೆಲಸಕ್ಕಾಗಲಿ, ನನ್ನ ವಿನ್ಯಾಸಕ್ಕಾಗಲಿ ಅವಮಾನ ಆಗಿದೆ ಎಂದು ಭಾವಿಸುವುದಿಲ್ಲ’ ಎಂದರು.ದೇಶದ ಅಧಿಕೃತ ರುಪಾಯಿ ಚಿಹ್ನೆಯನ್ನು 2010ರಲ್ಲಿ ತಮಿಳುನಾಡು ಮೂಲದ ಉದಯ್ ಕುಮಾರ್ ಅವರೇ ರಚಿಸಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ಆ ಚಿಹ್ನೆ ಬದಲು ತಮಿಳು ಲಿಪಿಯ ''''ರು'''' ಚಿಹ್ನೆಯನ್ನು ಬಜೆಟ್ ಪ್ರಚಾರ ಪೋಸ್ಟ್‌ನಲ್ಲಿ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ.
ಉಚಿತ ಬಸ್ ಪ್ರಯಾಣ ಯೋಜನೆಗೆ ತ.ನಾಡು ಬಜೆಟಲ್ಲಿ 3600 ಕೋಟಿ ರು,
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿ ಹಲವು ಕಲ್ಯಾಣ ಕಾರ್ಯಕ್ರಮಗಳಿಗೆ ಭಾರೀ ಅನುದಾನ ಹಂಚಿಕೆ ಮಾಡಿದೆ. ಉಚಿತ ಬಸ್ ಯೋಜನೆಗಾಗಿಯೇ 2025-26 ಸಾಲಿನಲ್ಲಿ ಸರ್ಕಾರವು 3600 ಕೋಟಿ ರು. ಅನುದಾನ ತೆಗೆದಿಟ್ಟಿದೆ.ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಉಚಿತ ಘೋಷಣೆಗಳಿಗೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಿದೆ.
ಕರ್ನಾಟಕದಲ್ಲಿ ಜಾರಿಯಲ್ಲಿರುವ ಶಕ್ತಿ ಯೋಜನೆ ಮಾದರಿಯಲ್ಲೇ ತಮಿಳುನಾಡಿನಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶವಿದೆ. ಈ ಯೋಜನೆಯ ಫಲಾನುಭವಿಗಳ ಪ್ರಮಾಣ ಶೇ.40ರಿಂದ ಶೇ.65ಕ್ಕೇರಿದೆ. ಸರಿಸುಮಾರು 50 ಲಕ್ಷ ಮಹಿಳೆಯರು ನಿತ್ಯ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಸುಮಾರು 642 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ್ದಾರೆ. ಈ ಯೋಜನೆಯಿಂದ ಪ್ರತಿ ತಿಂಗಳು ಮಹಿಳೆಯರಿಗೆ ಸುಮಾರು 888 ರು. ಉಳಿತಾಯವಾಗುತ್ತದೆ ಎಂದು ಶುಕ್ರವಾರ ಬಜೆಟ್ ಮಂಡಿಸಿದ ಹಣಕಾಸು ಸಚಿವ ಥಂಗಂ ಥೇನಾರಸು ಹೇಳಿದ್ದಾರೆ.
ಮಹಿಳಾ ಮಾಸಾಶನಕ್ಕೆ 1000 ಕೋಟಿ ರು.:
ಗೃಹಲಕ್ಷ್ಮಿ ಯೋಜನೆ ರೀತಿಯಲ್ಲೇ ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರು. ನೀಡುವ ಕಲೈಗನರ್ ಮಗಳಿರ್ ಉರಿಮೈ ಯೋಜನೆಗೆ 13,807 ಕೋಟಿ ರು. ತೆಗೆದಿಡಲಾಗಿದೆ. 1.15 ಕೋಟಿ ಮಹಿಳೆಯರಿಗೆ ಈ ಯೋಜನೆ ಅನುಕೂಲ ಸಿಗುವ ನಿರೀಕ್ಷೆ ಇದೆ. ಇದೇ ವೇಳೆ ಕಲೈಗನಾರ್ ಕನವು ಇಲ್ಲಂ ವಸತಿ ಯೋಜನೆಯಡಿ 1 ಲಕ್ಷ ಹೊಸ ಮನೆಗಳ ನಿರ್ಮಾಣ ಉದ್ದೇಶವಿದ್ದು, ಇದಕ್ಕಾಗಿ 3500 ಕೋಟಿ ವಿನಿಯೋಗಿಸಲು ತೀರ್ಮಾನಿಸಲಾಗಿದೆ.
ಈ ಮೂಲಕ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದವರನ್ನು ಸೆಳೆಯಲು ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ.