ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಲಿಕಾಪ್ಟರ್ ಹಾಗೂ ಅದರೊಳಗಿದ್ದ ಬ್ಯಾಗ್‌ಗಳನ್ನು ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಪಾಲನೆ ನಿಮಿತ್ತ ಹಿಂಗೋಲಿ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲಿಸಿದರು.
ಇತ್ತೀಚೆಗೆ ಶಿವಸೇನೆ (ಯುಬಿಟಿ) ನೇತಾರ ಉದ್ಧವ ಠಾಕ್ರೆ ಅವರ ಕಾಪ್ಟರನ್ನು ಆಯೋಗ ಪರಿಶೀಲಿಸಿತ್ತು. ಇದಕ್ಕೆ ಕಿಡಿಕಾರಿದ್ದ ಠಾಕ್ರೆ, ‘ಬರೀ ನನ್ನ ಕಾಪ್ಟರ್ ಮಾತ್ರ ತಪಾಸಣೆ ಏಕೆ? ಮೋದಿ, ಶಾ ಕಾಪ್ಟರ್ ಏಕ ತಪಾಸಿಸುತ್ತಿಲ್ಲ?’ ಎಂದಿದ್ದರು.
ಇದರ ಬೆನ್ನಲ್ಲೇ ಶುಕ್ರವಾರ ಶಾ ಕಾಪ್ಟರ್ ಹಾಗೂ ಅದರಲ್ಲಿನ ಚೀಲಗಳನ್ನು ಹಿಂಗೋಲಿಯಲ್ಲಿ ಪ್ರಚಾರಕ್ಕೆ ಬಂದಾಗ ಆಯೋಗದ ಅಧಿಕಾರಿಗಳು ತಪಾಸಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಾ, ‘ಬಿಜೆಪಿ ನ್ಯಾಯಯುತ ಮತ್ತು ಆರೋಗ್ಯಕರ ಚುನಾವಣೆ ಬಯಸುತ್ತದೆ. ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಬಿಜೆಪಿ ಪಾಲಿಸುತ್ತದೆ’ ಎಂದಿದ್ದಾರೆ.
ಸತ್ತಾರ್, ಪ್ರಜ್ಜಲ್ ರೇವಣ್ಣ ಪರವಾಗಿ ಪ್ರಚಾರ ಬಿಜೆಪಿ ಸಂಸ್ಕೃತಿಯೇ : ಉದ್ಧವ್ ಕಿಡಿ
ಛತ್ರಪತಿ ಸಂಭಾಜಿನಗರ: ಎನ್‌ಸಿಪಿ (ಶರದ್) ಬಣದ ಸಂಸದೆ ಸುಪ್ರಿಯಾ ಸುಳೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ರಾಜ್ಯ ಸಚಿವ ಅಬ್ದುಲ್ ಸತ್ತಾರ್ ಪರ ಪ್ರಚಾರ ಮಾಡುವುದು ಬಿಜೆಪಿ ಸಂಸ್ಕೃತಿಯೇ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶುಕ್ರವಾರ ಪ್ರಶ್ನಿಸಿದ್ದಾರೆ. ಸತ್ತಾರ್ ಪರ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಹೆಣ್ಣುಮಕ್ಕಳನ್ನು ಲೈಂಗಿಕ ಕ್ರಿಯೆ ಬಳಸಿಕೊಂಡಿದ್ದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದರು. ಈಗ ಹೆಣ್ಣು ಮಕ್ಕಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವ ಅಬ್ದುಲ್ ಸತ್ತಾರ್ ಪರ ಪ್ರಚಾರ ಮಾಡಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿಯೇ ಎಂದು ಕಿಡಿಕಾರಿದ್ದಾರೆ.
ಮಹಾರಾಷ್ಟ್ರ: ಒಂದೇ ಕಾರಲ್ಲಿ ₹19 ಕೋಟಿ ಮೌಲ್ಯದ 19 ಕೇಜಿ ಚಿನ್ನ, 37 ಕೇಜಿ ಬೆಳ್ಳಿ ವಶ
ಛತ್ರಪತಿ ಸಂಭಾಜಿನಗರ: ವಿಧಾನಸಭೆ ಚುನಾವಣೆ ನಡೆಯುತ್ತಿರುವ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಒಂದೇ ವಾಹನದಲ್ಲಿ ಇರಿಸಲಾಗಿದ್ದ 19 ಕೋಟಿ ರು. ಮೌಲ್ಯದ 19 ಕೇಜಿ ಚಿನ್ನ ಹಾಗೂ 37 ಕೇಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.ಸಿಲೋದ್ ತಾಲೂಕಿನ ಜಲಗಾಂವ್ ಹೆದ್ದಾರಿಯಲ್ಲಿ ಚುನಾವಣೆ ನಿಮಿತ್ತ ತಪಾಸಣೆ ನಡೆದಾಗ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದನ್ನು ಜಿಎಸ್ಟಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಈ ಚಿನ್ನ ಯಾರದ್ದು, ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದು ಗೊತ್ತಾಗಿಲ್ಲ. ಮುಂದಿನ ತನಿಖೆಯನ್ನು ಜಿಎಸ್ಟಿ ಅಧಿಕಾರಿಗಳು ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.