ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದೆ. ದಿಲ್ಲಿ ಗದ್ದುಗೆ ಹಿಡಿಯಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಮೊದಲ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ, ಹಾಲಿ ಸಿಎಂ ಆತಿಷಿ ವಿರುದ್ಧ ರಮೇಶ್ ಬಿಧೂರಿ ಅವರನ್ನು ಕಣಕ್ಕಿಳಿಸಿದೆ. ವರ್ಮಾ ಮತ್ತು ಬಿಧೂರಿ ಇಬ್ಬರೂ ಮಾಜಿ ಸಂಸದರು ಎಂಬುದು ವಿಶೇಷ.
ಜೊತೆಗೆ ತನ್ನ ರಾಷ್ಟ್ರೀಯ ಪದಾಧಿಕಾರಿಗಳಾದ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಕರೋಲ್‌ಬಾಗ್, ಜನಕಪುರಿಯಿಂದ ಆಶಿಶ್ ಸೂದ್, ಗಾಂಧಿ ನಗರದಿಂದ ಅರವಿಂದರ್ ಸಿಂಗ್ ಲವ್ಲಿ ಮತ್ತು ಬಿಜ್ವಾಸ್‌ನಿಂದ ಮಾಜಿ ಎಎಪಿ ನಾಯಕ ಕೈಲಾಶ್ ಗೆಹ್ಲೋಟ್ ಅವರ ಹೆಸರು ಘೋಷಿಸಿದೆ. ಇನ್ನು ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಮಾಳವೀಯ ನಗರದಿಂದ ಸ್ಪರ್ಧಿಸಲಿದ್ದಾರೆ.