ನವದೆಹಲಿ: ಕುಸ್ತಿ ಪಟು ವಿನೇಶ್ ಪೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್ ಸೇರಿದ್ದಕ್ಕೆ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಬ್ರಿಜ್ ಭೂಷಣ್ ವಿರುದ್ಧ ಬಿಜೆಪಿ ಹೈಕಮಾಂಡ್ ಗರಂ ಆಗಿದೆ. ವಿನೇಶ್ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ ನೀಡಬಾರದು ಎಂದು ಬ್ರಿಜ್‌ಗೆ ತಾಕೀತು ಮಾಡಿದೆ.
‘ವಿನೇಶ್ ಪೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಮೋಸ ಮಾಡಿದ್ದರು. ಅದಕ್ಕೆ ದೇವರು ಶಿಕ್ಷೆ ನೀಡಿದ್ದು, ಈ ಕಾರಣದಿಂದ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ’ ಎಂದು ಬ್ರಿಜ್ ವಿವಾದಿತ ಹೇಳಿಕೆ ನೀಡಿದ್ದರು.ಹರ್ಯಾಣ ಚುನಾವಣೆ ವೇಳೆ ಇಂಥ ಹೇಳಿಕೆಗಳು ಬಿಜೆಪಿಗೆ ಮಾರಕ ಆಗಬಹುದಾಗಿದೆ. ಏಕೆಂದರೆ ವಿನೇಶ್ ರೈತರಲ್ಲಿ ಜನಪ್ರಿಯ ಮಹಿಳೆ. ಹೀಗಾಗಿ ಸದ್ಯಕ್ಕೆ ಸುಮ್ಮನಿರುವಂತೆ ಬ್ರಿಜ್‌ಗೆ ಬಿಜೆಪಿ ಸೂಚಿಸಿದೆ.
ರೈಲ್ವೆಗೆ ರಾಜೀನಾಮೆ ಅಂಗೀಕಾರ:ಈ ನಡುವೆ, ಕಾಂಗ್ರೆಸ್ ಪಕ್ಷ ಸೇರುವ ಮುನ್ನ ವಿನೇಶ್ ಪೋಗಟ್ ಮತ್ತು ಬಜರಂಗ್ ಪುನಿಯಾ ರೈಲ್ವೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ನಿಯಮದ ಪ್ರಕಾರ, ಕೆಲಸ ಬಿಡಬೇಕಾದರೆ 3 ತಿಂಗಳ ನೋಟಿಸ್ ಅವಧಿ ಪೂರ್ತಿ ಮಾಡಬೇಕು. ಈ ನಿಯಮ ಪಾಲಿಸಿದ್ದಲ್ಲಿ ವಿನೇಶ್ ಚುನಾವಣಾ ಸ್ಪರ್ಧೆ ಸಾಧ್ಯವಾಗುತ್ತಿರಲಿಲ್ಲ. ಆದರೆ ನಿಯಮ ಸಡಿಲಿಸಿರುವ ರೈಲ್ವೆ, ನೋಟಿಸ್ ಅವಧಿ ಸಡಿಲಿಸಿ ರಾಜೀನಾಮೆ ಅಂಗೀಕಾರಕ್ಕೆ ನಿರ್ಧರಿಸಿದೆ. ಹೀಗಾಗಿ ವಿನೇಶ್ ಸ್ಪರ್ಧೆ ಹಾದಿ ಸುಗಮವಾಗಿದೆ.ಹರ್ಯಾಣ ಚುನಾವಣೆ: ಪ್ರಚಾರ ಅಖಾಡಕ್ಕೆ ವಿನೇಶ್
ಚಂಡೀಗಢ: ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡು, ಹರ್ಯಾಣ ವಿಧಾನಸಭೆ ಚುನಾವಣೆಗೆ ಟಿಕೆಟ್ ಪಡೆದುಕೊಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಜುಲಾನಾ ಕ್ಷೇತ್ರದಿಂದ ವಿನೇಶ್ ಸ್ಪರ್ಧಿಸುತ್ತಿದ್ದಾರೆ.ಭಾನುವಾರ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ವಿನೇಶ್, ‘ಈ ಯುದ್ಧವನ್ನು ಜನರ ಆಶೀರ್ವಾದದಿಂದ ಗೆಲ್ಲುವ ನಿರೀಕ್ಷೆಯಿದೆ. ಜನರ ನೋವುಗಳನ್ನು ಕಡಿಮೆ ಮಾಡುವೆ. ಇದು ನನ್ನ ಜವಾಬ್ದಾರಿ’ ಎಂದರು. ಈ ವೇಖೆ ಅವರಿಗೆ ಜನರಿಂದ ಅದ್ಧೂರಿ ಸ್ವಾಗತ ದೊರೆಯಿತು.ಹರ್ಯಾಣ ಚುನಾವಣೆಗೆ ಸ್ಪರ್ಧಿಸಲಿರುವ 32 ಜನರ ಹೆಸರನ್ನು ಕಾಂಗ್ರೆಸ್ ಮೊದಲ ಹಂತದಲ್ಲಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ವಿನೇಶ್ ಪೋಗಟ್ ಹೆಸರು ಕೂಡ ಇತ್ತು.