ಬಿಜೆಪಿ ವಿರುದ್ಧ ಜೆಡಿಎಸ್‌ ಗರಂ!

KannadaprabhaNewsNetwork |  
Published : Mar 19, 2024, 01:46 AM ISTUpdated : Mar 20, 2024, 09:06 AM IST
ಮೈತ್ರಿ | Kannada Prabha

ಸಾರಾಂಶ

ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಿ ಎಂದು ಸಭೆ ಬಳಿಕ ಕುಮಾರಸ್ವಾಮಿ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಡುವೆ ಅಸಮಾಧಾನ ಹೊಗೆಯಾಡತೊಡಗಿದೆ. ‘ಬಿಜೆಪಿಯು ನಮ್ಮನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಗೌರವಯುತವಾಗಿ ನಡೆಸಿಕೊಳ್ಳಬೇಕು. ಕಡೆಗಣಿಸಬಾರದು.

ಇದರಿಂದ ಮುಂದೆ ಪೆಟ್ಟು ಬಿದ್ದರೆ ಅದರ ಸಾಧಕ-ಬಾಧಕಗಳಿಗೆ ಬಿಜೆಪಿಯೇ ಜವಾಬ್ದಾರಿಯಾಗಲಿದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ಧಾಟಿಯಲ್ಲಿ ತೀಕ್ಷ್ಣವಾಗಿ ಹೇಳಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 18 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ನಮ್ಮ ಪಕ್ಷದಿಂದ ಅನುಕೂಲ ಆಗಲಿದೆ. 

ಈ ವಿಷಯವನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ನಮ್ಮ ಶಕ್ತಿಯನ್ನು ಧಾರೆ ಎರೆದರೆ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬರುತ್ತದೆ.ಏಕೆಂದರೆ ಕರ್ನಾಟಕದ ರಾಜಕೀಯ ಬೇರೆ, ದೇಶದ ಇತರೆ ರಾಜ್ಯಗಳ ರಾಜಕೀಯವೇ ಬೇರೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತನ್ನಿ ಎಂದು ಮುಖಂಡರು ನನ್ನ ಮೇಲೆ ಒತ್ತಡ ಹಾಕಿದ್ದಾರೆ ಎಂದರು.

ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ಇದೆ ಅಂತ ಎಲ್ಲರಿಗೂ ಗೊತ್ತು. ರಾಜಕೀಯ ವಿಶ್ಲೇಷಣೆ ಮಾಡುವ ಎಲ್ಲರಿಗೂ ಈ ವಿಷಯ ಗೊತ್ತಿದೆ. ಬಿಜೆಪಿ ಅವರು ಇದನ್ನೆಲ್ಲ ಗಮನಿಸುತ್ತಾರೆ. 

ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ ಅಂತ ಹೇಳೋಕೆ ನಾವು ಸಭೆ ಮಾಡಿದ್ದು ಎಂದು ತಿಳಿಸಿದರು.ಇವತ್ತಿನ ಸಭೆಯಲ್ಲಿ ಚುನಾವಣೆ ಉಸ್ತುವಾರಿಗಳು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಭಾಗವಹಿಸಿದ್ದರು. ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. 

ಸಭೆಯಲ್ಲಿ ನಮ್ಮ ಪ್ರಮುಖರು ಅಭಿಪ್ರಾಯ ಹೇಳಿದ್ದಾರೆ. ಇದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಹಕಾರ ಇರುವ ರೀತಿಯಲ್ಲೇ ಬಿಜೆಪಿಯಿಂದಲೂ ಸಹಕಾರ ಇರಬೇಕು. 

ಅದನ್ನು ಸರಿ ಮಾಡುವ ನಿಟ್ಟಿನಲ್ಲಿ ಕೆಲವು ಸೂಚನೆಗಳನ್ನು ಬಿಜೆಪಿಯವರಿಗೆ ನೀಡಬೇಕು ಅಂತ ಕೆಲವರು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ಎರಡೂ ಪಕ್ಷದ ನಾಯಕರ ಸಭೆಗಳು, ಚುನಾವಣೆ ಪ್ರಚಾರದಲ್ಲಿ ಎರಡು ಪಕ್ಷಗಳು ಹೇಗೆ ಕೆಲಸ ಮಾಡಬೇಕು, ಬೂತ್ ಮಟ್ಟದಲ್ಲಿ ಹೇಗೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸಲಹೆ ಕೊಡಬೇಕು ಅಂತ ಸಭೆಯಲ್ಲಿ ಹೇಳಿದ್ದಾರೆ. 

ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿಯಲ್ಲಿ ಬಿಜೆಪಿಗಿಂತ ಜೆಡಿಎಸ್ ಪ್ರಬಲವಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮ ನಾಯಕರನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ಆಗಬೇಕು ಅಂತ ಪ್ರಮುಖರು ಹೇಳಿದ್ದಾರೆ ಎಂದರು.

ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಕಡೆಗಣಿಸಬಾರದು. ಅದರಿಂದ ಆಗುವ ಪರಿಣಾಮವನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಇದೆಲ್ಲವನ್ನೂ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ಮಾಡಿ ಸೌಹಾರ್ದಯುತವಾಗಿ ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ ಎಂದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ಯುವ ಜನತಾದಳದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಭಾಗವಹಿಸಿದ್ದರು.

ಜೆಡಿಎಸ್‌ ಸಿಟ್ಟಿಗೆ ಕಾರಣಗಳೇನು?

  • ದೊಡ್ಡ ಪಕ್ಷವಾಗಿರುವ ಬಿಜೆಪಿ ಮೈತ್ರಿ ಧರ್ಮ ಪಾಲಿಸದೆ ನಮ್ಮನ್ನು ಕಡೆಗಣಿಸುತ್ತಿದೆ. 
  • 20 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆಗೆ ಮುನ್ನ ಜೆಡಿಎಸ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ 
  • ಚುನಾವಣಾ ಪ್ರಚಾರ ಸಭೆಗಳಿಗೆ ಜೆಡಿಎಸ್‌ ನಾಯಕರನ್ನು ಆಹ್ವಾನಿಸುತ್ತಿಲ್ಲ ಎಂಬ ಆಕ್ರೋಶ
  •  3-4% ಜೆಡಿಎಸ್‌ನ ಮತಗಳು ಸಿಕ್ಕರೆ 18 ಕ್ಷೇತ್ರಗಳಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ 
  • ಮೋದಿ ಕಲಬುರಗಿ, ಶಿವಮೊಗ್ಗಕ್ಕೆ ಬರುವ ಬಗ್ಗೆ ಸೌಜನ್ಯಕ್ಕೂ ಜೆಡಿಎಸ್‌ಗೆ ಮಾಹಿತಿ ನೀಡಿಲ್ಲ
  • ಮೋದಿ ಸಭೆಗಳಿಗೆ ದೇವೇಗೌಡ, ಕುಮಾರಸ್ವಾಮಿ ಅವರನ್ನೂ ಕರೆದಿಲ್ಲ
  • ಜೆಡಿಎಸ್‌ ಹೇಗಿದ್ದರೂ ಗೆಲ್ಲುತ್ತಿದ್ದ 2-3 ಕ್ಷೇತ್ರಗಳನ್ನು ಪಡೆಯುವುದಕ್ಕೆ ಬಿಜೆಪಿಗೆ ತಲೆಬಾಗಬೇಕೆ?

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎತ್ತ ಸಾಗುತ್ತಿದೆ ರಾಷ್ಟ್ರದ ವಿಪಕ್ಷಗಳ ಮನೋಸ್ಥಿತಿ..?
ಅಂತರ್ಜಾತಿ ಮದ್ವೆ, ಮತಾಂತರ ಆದ್ರೂ ಜಾತಿ ಬದಲಿಲ್ಲ: ಹೈಕೋರ್ಟ್‌