ಪ.ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಶಾಸಕನ ಮೇಲೆ ಹಲ್ಲೆ

KannadaprabhaNewsNetwork |  
Published : Oct 08, 2025, 01:00 AM ISTUpdated : Oct 08, 2025, 04:08 AM IST
ದಾಳಿ | Kannada Prabha

ಸಾರಾಂಶ

ಪಶ್ಚಿಮ ಬಂಗಾಳದ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಇಬ್ಬರು ಬಿಜೆಪಿ ನಾಯಕರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ ಮರುದಿನವೇ ಮತ್ತೊಬ್ಬ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಲಾಗಿದೆ.

  ಕೋಲ್ಕತಾ : ಪಶ್ಚಿಮ ಬಂಗಾಳದ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಇಬ್ಬರು ಬಿಜೆಪಿ ನಾಯಕರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ ಮರುದಿನವೇ ಮತ್ತೊಬ್ಬ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಲಾಗಿದೆ. ಮಂಗಳವಾರ ಆಲಿಪುರದ್ವಾರದಲ್ಲಿ ಪ್ರವಾಹ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದ ಬಿಜೆಪಿ ಶಾಸಕ ಮನೋಜ್‌ ಕುಮಾರ್ ಒರಾನ್‌ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಈ ಆರೋಪವನ್ನು ಟಿಎಂಸಿ ತಳ್ಳಿಹಾಕಿದ್ದು, ಇದು ಆಧಾರರಹಿತ ಎಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಒರಾನ್‌, ‘ಪ್ರವಾಹಪೀಡಿತ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ನನ್ನನ್ನು ಸುತ್ತುವರೆದು ದಾಳಿ ಮಾಡಲಾಯಿತು. ಇದು ಟಿಎಂಸಿ ಅಡಿಯಲ್ಲಿರುವ ಪ್ರಜಾಪ್ರಭುತ್ವದ ಸ್ಥಿತಿ’ ಎಂದು ಹೇಳಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಟಿಎಂಸಿಯು ರಾಜ್ಯದಲ್ಲಿ ಭಯೋತ್ಪಾದಕ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದೆ.

ಹಲ್ಲೆಗೀಡಾದ ಬಿಜೆಪಿ ಸಂಸದ, ಶಾಸಕರ ಭೇಟಿಯಾದ ದೀದಿ 

ಕೋಲ್ಕತಾ :  ಉತ್ತರ ಬಂಗಾಳದ ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ಟಿಎಂಸಿ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆಗೊಳಗಾದರರು ಎನ್ನಲಾದ ಬಿಜೆಪಿ ಸಂಸದ ಖಗೆನ್ ಮುರ್ಮು ಹಾಗೂ ಶಾಸಕ ಶಂಕರ್‌ ಘೋಷ್‌ ಅವರನ್ನು ಟಿಎಂಸಿ ನಾಯಕಿ ಹಾಗೂ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.ಮುರ್ಮು ಮತ್ತು ಘೋಷ್‌ ಸಿಲಿಗುರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಅವರನ್ನು ದೀದಿ ಭೇಟಿಯಾದರು. ಇದೇ ವೇಳೆ, ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ ಅವರು ಚಿಕಿತ್ಸೆಗೆ ಸರ್ಕಾರ ಎಲ್ಲ ನೆರವು ನೀಡಲಿದೆ. ಅವರಿಗೆ ಶುಭ ಹಾರೈಸಿದ್ದೇನೆ ಎಂದು ತಿಳಿಸಿದರು.

ರಾಜ್ಯಪಾಲರ ಭೇಟಿ:ಈ ನಡುವೆ, ಗಾಯಾಳು ಮುರ್ಮು ಹಾಗೂ ಶಾಸಕ ಘೋಷ್‌ರನ್ನು ಬಂಗಾಳ ರಾಜ್ಯಪಾಲ ಆನಂದ ಬೋಸ್ ಮಂಗಳವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಸರ್ಜರಿ ಸಂಭವ:ಟಿಎಂಸಿ ಕಾರ್ಯಕರ್ತರಿಂದ ತೀವ್ರ ಹಲ್ಲೆಗೊಳಗಾದರು ಎನ್ನಲಾದ ಬಿಜೆಪಿ ಸಂಸದ ಖಗೇನ್ ಮುರ್ಮು ಅವರ ಕಣ್ಣಿನ ಕೆಳಗಿನ ಮೂಳೆ ಮುರಿದಿದೆ ಎಂದು ಗೊತ್ತಾಗಿದೆ. ಹೀಗಾಗಿ ಅವರ ಮುಖಕ್ಕೆ ಸರ್ಜರಿ ಮಾಡಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಜಲಪೈಗುರಿ ಜಿಲ್ಲೆಯ ನಾಗರಕಟ ಪ್ರದೇಶದಲ್ಲಿ ಪರಿಹಾರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾಗ ಮುರ್ಮು ಮತ್ತು ಸಿಲಿಗುರಿ ಶಾಸಕ ಶಂಕರ್ ಘೋಷ್ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಘಟನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿತ್ತು.

ವರದಿ ಕೇಳಿದ ಲೋಕಸಭೆ: ಸಂಸದ ಮುರ್ಮು ಮೇಲಿನ ಹಲ್ಲೆ ಬಗ್ಗೆ ಲೋಕಸಭೆ ಸಚಿವಾಲಯವು ಕೇಂದ್ರ ಗೃಹ ಸಚಿವಾಲಯದಿಂದ ವರದಿ ಕೇಳಿದೆ.

ತ್ರಿಪುರಾ ಟಿಎಂಸಿ ಕಚೇರಿ ಮೇಲೆ ಶಂಕಿತ ಬಿಜೆಪಿಗರ ದಾಳಿ

ಅಗರ್ತಲಾ: ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿನ ಟಿಎಂಸಿ ಕಚೇರಿ ಮೇಲೆ ಶಂಕಿತ ಬಿಜೆಪಿ ಕಾರ್ಯಕರ್ತರು ಮಂಗಳವಾರ ದಾಳಿ ಮಾಡಿ ಧ್ವಂಸ ಮಾಡಿದ್ದಾರೆ.ಬಂಗಾಳದಲ್ಲಿ ಒಬ್ಬ ಬಿಜೆಪಿ ಸಂಸದ ಹಾಗೂ ಇಬ್ಬರು ಶಾಸಕರ ಮೇಲೆ ಕಳೆದ 2 ದಿನದಲ್ಲಿ ದಾಳಿಗಳು ನಡೆದಿವೆ. ಇವನ್ನು ಟಿಎಂಸಿ ಕಾರ್ಯಕರ್ತರೇ ಮಾಡಿದ್ದರು ಎಂದು ಬಿಜೆಪಿ ಆರೋಪವಾಗಿದೆ. ಹೀಗಾಗಿ ಟಿಎಂಸಿ ಮೇಲಿನ ಸೇಡಿಗಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

PREV
Read more Articles on

Recommended Stories

ಸಿಜೆಐ ಮೇಲಿನ ಶೂ ದಾಳಿಗೆ ಪಶ್ಚಾತ್ತಾಪವೇನಿಲ್ಲ : ವಕೀಲ
ಹಿಮಾಚಲ: ಬಸ್‌ ಮೇಲೆ ಗುಡ್ಡ ಕುಸಿದು 18 ಸಾವು