ಬಿಜೆಪಿ ಅಭಿವೃದ್ಧಿ ಮಂತ್ರಕ್ಕೆ ಒಲಿದ ಮತದಾರ : 27 ವರ್ಷಗಳ ಬಳಿಕ ದೆಹಲಿಯಲ್ಲಿ ಕಮಲ

KannadaprabhaNewsNetwork | Updated : Feb 09 2025, 04:34 AM IST

ಸಾರಾಂಶ

 ಹಿಂದುತ್ವವನ್ನು ಕೊಂಚ ಬದಿಗಿಟ್ಟು, ಮಧ್ಯಮವರ್ಗದವರನ್ನು ಸೆಳೆದು, ಡಬಲ್‌ ಎಂಜಿನ್‌ ಸರ್ಕಾರದ ಭರವಸೆಗಳೊಂದಿಗೆ ಚುನಾವಣೆಗೆ ಹೋದ ಕಾರಣ 27 ವರ್ಷಗಳ ಬಳಿಕ ದೆಹಲಿಯಲ್ಲಿ ಕಮಲ ಅರಳುವುದು ಸಾಧ್ಯವಾಗಿದೆ.

ನವದೆಹಲಿ: ಹಿಂದುತ್ವವನ್ನು ಕೊಂಚ ಬದಿಗಿಟ್ಟು, ಮಧ್ಯಮವರ್ಗದವರನ್ನು ಸೆಳೆದು, ಡಬಲ್‌ ಎಂಜಿನ್‌ ಸರ್ಕಾರದ ಭರವಸೆಗಳೊಂದಿಗೆ ಚುನಾವಣೆಗೆ ಹೋದ ಕಾರಣ 27 ವರ್ಷಗಳ ಬಳಿಕ ದೆಹಲಿಯಲ್ಲಿ ಕಮಲ ಅರಳುವುದು ಸಾಧ್ಯವಾಗಿದೆ.

ಹತ್ತು ವರ್ಷಗಳಿಂದ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮೊದಲ ಅವಧಿಯಲ್ಲಿ ಜನಮೆಚ್ಚುಗೆ ಗಳಿಸಿದ್ದರೂ 2ನೇ ಅವಧಿಯಲ್ಲಿ ಅನೇಕ ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಯಿತು. 

 ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಕೇಂದ್ರ ಸರ್ಕಾರದೊಂದಿಗಿನ ನಿರಂತರ ಕಚ್ಚಾಟ ಅಭಿವೃದ್ಧಿಯನ್ನು ಹಳ್ಳಹಡಿಸಿತು. ಈ ನಡುವೆ, ಲಿಕ್ಕರ್‌ ಹಗರಣದಂಥ ಭ್ರಷ್ಟಾಚಾರದ ಕಳಂಕ ಹೊತ್ತು ಕೇಜ್ರಿವಾಲ್‌, ಸಿಸೋಡಿಯಾರಂಥ ಪ್ರಮುಖರೇ ಜೈಲು ಪಾಲಾಗಿದ್ದು, ಆಪ್‌ಗೆ ಮೆತ್ತಿದ ಭ್ರಷ್ಟಾಚಾರದ ಕಳಂಕ ಮತ್ತು ಆಡಳಿತ ವೈಫಲ್ಯಗಳನ್ನು ಚುನಾವಣಾ ಪ್ರಚಾರದ ವೇಳೆ ಬಿಜೆಪಿಗೆ ಪ್ರಮುಖ ಅಸ್ತ್ರವಾಗಿ ಬಳಸಿತು. ಜತೆಗೆ, ದೆಹಲಿಗರ ಜೀವನ ನರಕಮಾಡಿದ್ದ ವಾಯುಮಾಲಿನ್ಯ, ಯಮುನಾ ನದಿ ನೀರಿನ ಮಾಲಿನ್ಯ ವಿಚಾರ ಮುಂದಿಟ್ಟುಕೊಂಡು ಆಪ್‌ ಮೇಲೆ ಆಂದೋಲವನ್ನೇ ರೂಪಿಸಿದ ಬಿಜೆಪಿ, ಐದು ವರ್ಷಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸ್ಪಷ್ಟ ಭರವಸೆ ನೀಡಿದ್ದು ಮತದಾರರ ಸೆಳೆಯಲು ನೆರವಾಯಿತು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ರಾಜ್ಯದ ಗದ್ದುಗೆ ಹಿಡಿದರೆ ''''''''ಡಬಲ್‌ ಎಂಜಿನ್‌ ''''''''ಸರ್ಕಾರದಿಂದ ಅಭಿವೃದ್ಧಿ ಸುಲಭ ಎಂದು ಬಿಂಬಿಸಿದ ಬಿಜೆಪಿ, ಬಡವರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಅನೇಕ ಉಚಿತಗಳ ಕೊಡುಗೆಯನ್ನೂ ಪ್ರಣಾಳಿಕೆಯಲ್ಲಿ ಘೋಷಿಸಿತು. ಪ್ರತಿ ಚುನಾವಣೆಯಲ್ಲೂ ಹಿಂದುತ್ವವನ್ನೇ ಮುಖ್ಯವಾಗಿಟ್ಟುಕೊಂಡು ಅಖಾಡಕ್ಕಿಳಿಯುತ್ತಿದ್ದ ಕೇಸರಿಪಡೆ ಈ ಬಾರಿ ಅಭಿವೃದ್ಧಿ, ಸ್ಥಳೀಯ ಮೂಲಸೌಲಭ್ಯಗಳ ಸಮಸ್ಯೆಗಳ ಪರಿಹಾರದ ಮಂತ್ರ ಪಠಿಸಿದ್ದು ಫಲ ನೀಡಿತು.

ಆಪ್‌ ಸರ್ಕಾರ ಜಾರಿಗೆ ತಂದ ನೀರು, ವಿದ್ಯುತ್‌ನಂಥ ಉಚಿತಗಳಂಥ ಜನಪ್ರಿಯ ಸ್ಕೀಂಗಳನ್ನು ಮುಂದುವರಿಸಿಕೊಂಡು ಹೋಗುವ ಭರವಸೆ ಸ್ವತಃ ಪ್ರಧಾನಿ ಮೋದಿಯವರಿಂದಲೇ ಸಿಕ್ಕಿದ್ದು ಜನರ ವಿಶ್ವಾಸ ಹೆಚ್ಚಿಸಿತು.ಕಚ್ಚಾಟವಿಲ್ಲದೆ ಬಿಜೆಪಿ ನಾಯಕರು ಒಂದಾಗಿ ಚುನಾವಣೆ ಎದುರಿಸಿದ್ದು ಬಿಜೆಪಿಗೆ ವರವಾಗಿ ಪರಿಣಮಿಸಿತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಯಲ್ಲಿ ಹೇಳಿಕೊಳ್ಳುವಂಥ ಕಚ್ಚಾಟಗಳಿರಲಿಲ್ಲ. ಆರೆಸ್ಸೆಸ್‌ ಮತ್ತು ಬಿಜೆಪಿಯ ನಡುವಿನ ಸಮನ್ವಯವೂ ಚೆನ್ನಾಗಿಯೇ ಇತ್ತು ಎಂದು ಮುಖಂಡರು ಹೇಳುತ್ತಾರೆ. ಆರೆಸ್ಸೆಸ್‌ ನಾಯಕರ ಸಹಕಾರ, ತಳಮಟ್ಟದಲ್ಲಿ ಸಿಕ್ಕ ಸಂಘದ ಬೆಂಬಲ ಮತ್ತು ಮೋದಿ ವರ್ಚಸ್ಸಿನ ಪರಿಣಾಮ ಬಿಜೆಪಿಯು 48 ಸೀಟು ಪಡೆಯುವಲ್ಲಿ ಯಶಸ್ವಿಯಾಯಿತು.

ಬಿಜೆಪಿ ಗೆದ್ದಿದ್ದು ಯಾಕೆ?

1 ಆಮ್‌ ಆದ್ಮಿ ಪಕ್ಷದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡಿತು.

2 ತೆರಿಗೆ ವಿನಾಯ್ತಿಯಂಥ ಬಜೆಟ್‌ ಘೋಷಣೆ ಮೂಲಕ ಆಪ್‌ನಿಂದ ಬೇಸತ್ತಿದ್ದ ಮಧ್ಯಮವರ್ಗದ ಮತ ಸೆಳೆಯಿತು.

2 ದೆಹಲಿಗರ ಪಾಲಿಗೆ ತಲೆನೋವಾಗಿದ್ದ ವಾಯುಮಾಲಿನ್ಯ, ಯಮುನಾನದಿ ಮಾಲಿನ್ಯ ನಿಯಂತ್ರಣದ ಭರವಸೆ ನೀಡಿತು

3 ಆಪ್‌ ಜಾರಿಗೊಳಿಸಿದ ಉಚಿತ ಯೋಜನೆಗಳನ್ನು ಮುಂದುವರಿಸಿಕೊಂಡು, ಇನ್ನಷ್ಟು ಕೊಡುಗೆಗಳ ಭರವಸೆ ನೀಡಿತು

4 ಕೇಂದ್ರ, ರಾಜ್ಯದಲ್ಲಿ ಒಂದೇ ಪಕ್ಷದ ''''''''ಡಬಲ್‌ ಎಂಜಿನ್‌'''''''' ಸರ್ಕಾರದಿಂದ ಅಭಿವೃದ್ಧಿ ಸುಲಭ ಎಂದು ಬಿಂಬಿಸಿತು. 

5 ಹಿಂದುತ್ವವನ್ನು ಬದಿಗಿಟ್ಟು ಸ್ಥಳೀಯ ಸಮಸ್ಯೆಗಳು, ಮೂಲಸೌಕರ್ಯಗಳ ವಿಚಾರಕ್ಕೆ ಪ್ರಚಾರದಲ್ಲಿ ಆದ್ಯತೆ ನೀಡಿತು

6 ನಾಯಕತ್ವದ ಕಿತ್ತಾಟಕ್ಕೆ ಆಸ್ಪದ ನೀಡದೆ ಮೋದಿ ನೇತೃತ್ವದಲ್ಲೇ ಚುನಾವಣಾ ಪ್ರಚಾರ ಕೈಗೊಂಡಿತು

8 ಈ ಬಾರಿ ಆರೆಸ್ಸೆಸ್‌-ಬಿಜೆಪಿ ತಾಳಮೇಳ ಚೆನ್ನಾಗಿತ್ತು. ಒಮ್ಮತಾಭಿಪ್ರಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು

9 ಕೈಹಿಡಿದ ಬಿಜೆಪಿಯ ಶೇ.32ರಷ್ಟು ಸಾಂಪ್ರದಾಯಿಕ ಮತಬ್ಯಾಂಕ್‌, ಈ ಬಾರಿಯೂ ಈ ನಿಷ್ಠೆ ಮುಂದುವರೆಯಿತು

Share this article