ಕುತೂಹಲ ಮೂಡಿಸಿದ್ದ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಸತತ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷ ಸೋಲು ಕಂಡಿದ್ದರೆ, ದೇಶದ ಉದ್ದಗಲ ಗೆದ್ದರೂ ಗಗನಕುಸುಮವಾಗಿಯೇ ಉಳಿದಿದ್ದ ದೆಹಲಿ ಚುಕ್ಕಾಣಿಯನ್ನು 27 ವರ್ಷಗಳ ಬಳಿಕ ಹಿಡಿಯುವಲ್ಲಿ ಬಿಜೆಪಿ ಸಫಲವಾಗಿದೆ.
ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಸತತ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷ (ಆಪ್) ಸೋಲು ಕಂಡಿದ್ದರೆ, ದೇಶದ ಉದ್ದಗಲ ಗೆದ್ದರೂ ಗಗನಕುಸುಮವಾಗಿಯೇ ಉಳಿದಿದ್ದ ದೆಹಲಿ ಚುಕ್ಕಾಣಿಯನ್ನು 27 ವರ್ಷಗಳ ಬಳಿಕ ಹಿಡಿಯುವಲ್ಲಿ ಬಿಜೆಪಿ ಸಫಲವಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಸತತ ಮೂರನೇ ಬಾರಿ ಶೂನ್ಯ ಸಂಪಾದಿಸಿದೆ.
ಡಿ.5ರಂದು 70 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಗೆದ್ದು ಮೂರನೇ ಎರಡು ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೆ ಆಪ್ 22 ಸ್ಥಾನಕ್ಕೆ ಸೀಮಿತಗೊಂಡಿದೆ. ಕಾಂಗ್ರೆಸ್ 2015, 2020ರಂತೆ ಈ ಬಾರಿಯೂ ಶೂನ್ಯ ಸಂಪಾದಿಸುವ ಮೂಲಕ ರಾಜಧಾನಿಯಲ್ಲಿ ಅಸ್ತಿತ್ವದ ಪ್ರಶ್ನೆ ಎದುರಿಸುವ ಹಂತಕ್ಕೆ ಬಂದಿದೆ.
ಸೋಲಿನ ಜೊತೆಜೊತೆಗೇ ಆಪ್ ನಾಯಕರಾದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ಮಾಜಿ ಸಚಿವರಾದ ಸತ್ಯೇಂದ್ರ ಜೈನ್, ಸೌರಭ್ ಭಾರದ್ವಾಜ್, ಸೋಮನಾಥ್ ಭಾರ್ತಿ ಸೇರಿದಂತೆ ಹಲವು ಘಟಾನುಘಟಿ ನಾಯಕರು ಸೋತಿದ್ದು ಆಪ್‌ಗೆ ಮರ್ಮಾಘಾತ ನೀಡಿದೆ. ಜೊತೆಗೆ ಹ್ಯಾಟ್ರಿಕ್ ಸಾಧಿಸುವ ಆಪ್, ಕೇಜ್ರಿ ಕನಸಿಗೆ ಭಾರೀ ಪೆಟ್ಟುಬಿದ್ದಿದೆ. ಪ್ರಮುಖರ ಪೈಕಿ ಹಾಲಿ ಮುಖ್ಯಮಂತ್ರಿ ಆತಿಶಿ ಮಾತ್ರವೇ ಗೆಲುವು ಸಾಧಿಸಿದ್ದಾರೆ.
ಆಡಳಿತ ವಿರೋಧಿ ಅಲೆ, ನೀಡಿದ ಭರವಸೆ ಈಡೇರಿಸಲು ವಿಫಲವಾಗಿದ್ದು, ಮಾಲಿನ್ಯ ಸಮಸ್ಯೆ ಇತ್ಯರ್ಥಕ್ಕೆ ವಿಫಲ, ಸ್ವತಃ ಕೇಜ್ರಿವಾಲ್ ಸೇರಿ ಹಲವು ಸಚಿವರು, ಶಾಸಕರ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪ, ಗಂಭೀರ ಆರೋಪದ ಹೊರತಾಗಿಯೂ ಪಕ್ಷದ ನಾಯಕರನ್ನು ಕೇಜ್ರಿವಾಲ್ ಸಮರ್ಥಿಸಿಕೊಂಡಿದ್ದು, ಗವರ್ನರ್ ಮತ್ತು ಕೇಂದ್ರದ ಜೊತೆಗಿನ ಸತತ ಸಂಘರ್ಷ ಆಪ್ ಸೋಲಿಗೆ ಕಾರಣವಾಗಿದ್ದರೆ, ಆಪ್‌ನ ವೈಫಲ್ಯವನ್ನು ಪ್ರಧಾನಿ ಮೋದಿಯಾಗಿ ಬಿಜೆಪಿ ನಾಯಕರು ಜನರ ಮನಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದು ಕೂಡ ಆಪ್ ಪತನಕ್ಕೆ ಕಾರಣವಾಯ್ತು ಎಂದು ವಿಶ್ಲೇಷಿಸಲಾಗಿದೆ.
ಅಲ್ಲದೆ ಮೊದಲ ಎರಡು ಅವಧಿಗೆ ಹೋಲಿಸಿದರೆ ಆಪ್‌ಗೆ ಹೇಳಿಕೊಳ್ಳಲು ಯಾವುದೇ ದೊಡ್ಡ ಸಾಧನೆ ಮುಂದಿರಲಿಲ್ಲ. ಹಳೆಯ ಸಾಧನೆ ಮತ್ತೆ ಮತ್ತೆ ಹೇಳಿದ್ದು, ಬಿಜೆಪಿ ವಿರುದ್ಧ ಸಂಘರ್ಷಕ್ಕೆ ಮುಂದಾಗಿದ್ದು ಪಕ್ಷಕ್ಕೆ ತಿರುಗುಬಾಣವಾಗಿದೆ. ಸಿಎಂ ಕೇಜ್ರಿಗೆ ಮೆತ್ತಿದ ಕಳಂಕ ದೂರ ಮಾಡಲು ಆತಿಶಿಯನ್ನು ಸಿಎಂ ಮಾಡಿದರೂ ಅದು ಫಲ ಕೊಟ್ಟಿಲ್ಲ.
ಮತ್ತೊಂದೆಡೆ ಕಾಂಗ್ರೆಸ್ ಪಾಳಯದಿಂದ ಸ್ಪರ್ಧೆ, ಹೋರಾಟ ಸಾಂಕೇತಿಕವಾಗಿತ್ತು ಎನ್ನುವುದು ಅದು ಪಡೆದ ಶೇಕಡವಾರು ಮತಗಳೇ ಸಾರಿಹೇಳಿವೆ.
ಭರ್ಜರಿ ಜಯ: ಈ ಬಾರಿ ದೆಹಲಿಯನ್ನು ಗೆಲ್ಲಲೇಬೇಕೆಂದು ಹಠ ತೊಟ್ಟಿದ್ದ ಬಿಜೆಪಿ, ರಾಷ್ಟ್ರೀಯ ವಿಚಾರಗಳನ್ನು ಬದಿಗೊತ್ತಿ ದೆಹಲಿಯ ಸಮಸ್ಯೆಗಳನ್ನು ಪ್ರಮುಖವಾಗಿ ಚುನಾವಣೆ ಅಸ್ತ್ರ ಮಾಡಿಕೊಂಡಿತ್ತು. ಸ್ವತಃ ಪ್ರಧಾನಿ ಮೋದಿ ಅವರೇ ಆಪ್ ಆಡಳಿತವನ್ನು ಆಪ್-ದಾ(ವಿಪತ್ತು) ಎಂದು ಬಣ್ಣಿಸಿದ್ದರು. ಜೊತೆಗೆ ದಿಲ್ಲಿ ಮಾಲಿನ್ಯ ಸಮಸ್ಯೆಗೆ ವಿಫಲವಾಗಿದ್ದು, ಯುಮುನಾ ನದಿ ಸ್ವಚ್ಛಗೊಳಿಸಲು ವಿಫಲವಾಗಿದ್ದು, ಕೇಂದ್ರದ ಯೋಜನೆ ಜಾರಿಗೆ ಆಪ್ ನಿರಾಕರಣೆ, ವಿವಿಧ ಹಗರಣಗಳಲ್ಲಿ ಆಪ್ ನಾಯಕರು ಭಾಗಿಯಾಗಿದ್ದು, ಸಿಎಂ ಕೇಜ್ರಿವಾಲ್ ಐಷಾರಾಮಿ ಮನೆ ಕಟ್ಟಿಕೊಂಡಿದ್ದನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬದಲಾವಣೆಗೆ ಅನಿವಾರ್ಯತೆ ಮನವರಿಕೆ ಮಾಡಿಕೊಡುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾದರು.
ಇದರ ಜೊತೆಗೆ ಚುನಾವಣೆಗೆ ಮುನ್ನಾ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ರಚನೆ, ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ರದ್ದತಿ ಕೊಡುಗೆ ಘೋಷಿಸಿದ್ದು, ಪ್ರಣಾಳಿಕೆಯಲ್ಲಿ ಮಹಿಳೆಯರು, ಮಧ್ಯಮ ವರ್ಗದವರನ್ನು ಗುರಿಯಾಗಿಸಿ ನೀಡಿದ ಭರವಸೆಗಳು, ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಅಗತ್ಯ ಎಂದು ಹೇಳಿದ್ದು ಕೂಡಾ ಬಿಜೆಪಿಗೆ ವರವಾಗಿದೆ.
ಇನ್ನೊಂದು ವಿಶೇಷವೆಂದರೆ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಗೆದ್ದರೂ ಅದೇ ಮತಗಳು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉಳಿಯುತ್ತಿರಲಿಲ್ಲ. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳನ್ನು ಉಳಿಸಿಕೊಳ್ಳಲು ಸಫಲವಾಗಿದ್ದು ಕೂಡಾ ಬಿಜೆಪಿ ಗೆಲುವಿಗೆ ನೆರವಾಗಿದೆ. ಇದರ ಜೊತೆಗೆ ಪ್ರಧಾನಿ ಮೋದಿ ವರ್ಚಸ್ಸು, ಮಹಿಳೆಯರು, ಮಧ್ಯಮ ವರ್ಗ ಬಿಜೆಪಿ ಕೈಹಿಡಿದಿದ್ದು, ಇಂಡಿಯಾ ಕೂಟ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಬಿಜೆಪಿ ಗೆಲುವನ್ನು ಸುಲಭವಾಗಿಸಿದೆ.
ಸತತ ಇಳಿಕೆ:
2015ರಲ್ಲಿ ಮೊದಲ ಬಾರಿಗೆ ದಿಲ್ಲಿಯಲ್ಲಿ ಅಧಿಕಾರಕ್ಕೆ ಏರಿ ಸತತ 2 ಬಾರಿ ಅಧಿಕಾರ ನಡೆಸಿದ್ದ ಆಪ್‌ನ ಬಲ ಹಂತಹಂತವಾಗಿ ಕುಸಿದಿರುವುದು ಈ ಬಾರಿಯೂ ಸಾಬೀತಾಗಿದೆ. 2015ರಲ್ಲಿ 67, 2020ರಲ್ಲಿ 62 ಸ್ಥಾನ ಗೆದ್ದಿದ್ದ ಆಪ್ ಬಲ ಈ ಬಾರಿ 22ಕ್ಕೆ ಇಳಿದಿದೆ. ಜೊತೆಗೆ ಮತಗಳಿಕೆಯ ಪ್ರಮಾಣವೂ ಕ್ರಮವಾಗಿ ಶೇ.54, ಶೇ.45.56 ಮತ್ತು ಶೇ.43.57ಕ್ಕೆ ಇಳಿದಿದೆ. ಇನ್ನೊಂದೆಡೆ ಬಿಜೆಪಿಯ ಶೇಕಡವಾರು ಮತ ಪ್ರಮಾಣ ಕ್ರಮವಾಗಿ ಶೇ.32, ಶೇ.38.5 ಮತ್ತು ಶೇ.45.56ಕ್ಕೆ ಏರಿದೆ.
ಪಕ್ಷಸ್ಥಾನಶೇ.ಮತ
ಬಿಜೆಪಿ4845.56
ಆಪ್2243.57
ಕಾಂಗ್ರೆಸ್006.34