ಭೋಪಾಲ್: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯನ್ನಾಗಿ ರೇಸ್‌ನಲ್ಲೇ ಇಲ್ಲದ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಛತ್ತೀಸ್‌ಗಢ ರೀತಿಯಲ್ಲಿ ಇಲ್ಲಿಯೂ ಅಚ್ಚರಿಯ ಆಯ್ಕೆ ಮಾಡಲಾಗಿದ್ದು, 4 ಬಾರಿ ಸಿಎಂ ಆಗಿದ್ದ ಶಿವರಾಜ ಸಿಂಗ್ ಚೌಹಾಣ್ ಅವರಿಗೆ ಕೊಕ್ ನೀಡಲಾಗಿದೆ. ಇನ್ನು ಉಪಮುಖ್ಯಮಂತ್ರಿಗಳನ್ನಾಗಿ ರಾಜೇಶ್ ಶುಕ್ಲಾ ಹಾಗೂ ಜಗದೀಶ್ ದೇವಡಾ ಅವರನ್ನು ಆಯ್ಕೆ ಮಾಡಲಾಗಿದೆ.
ಸೋಮವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾದವ್ ಬಿಜೆಪಿ ನಾಯಕರಾಗಿ ಆಯ್ಕೆಯಾದರು. ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರೇ ಯಾದವ್ ಹೆಸರು ಸೂಚಿಸಿದರು. ಇದಕ್ಕೆ ಸಿಎಂ ಸ್ಥಾನಾಕಾಂಕ್ಷಿಗಳಾಗಿದ್ದ ಪ್ರಹ್ಲಾದ್ ಪಟೇಲ್, ನರೇಂದ್ರ ಸಿಂಗ್ ತೋಮರ್ ಹಾಗೂ ಕೈಲಾಶ್ ವಿಜಯವರ್ಗೀಯ ಅನುಮೋದಿಸಿದರು.ಅಚ್ಚರಿ ಆಯ್ಕೆ:
ವಿಶೇಷವೆಂದರೆ, ಮೋಹನ್ ಯಾದವ್ ಸಿಎಂ ರೇಸ್‌ನಲ್ಲಿದ್ದವರ ಪಟ್ಟಿಯಲ್ಲೇ ಇರಲಿಲ್ಲ. ಆದರೆ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹಿಂದುಳಿದ ಸಮುದಾಯಕ್ಕೆ ಸೇರಿದ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮತ್ತು ಬ್ರಾಹ್ಮಣ ಸಮುದಾಯದ ರಾಜೇಶ್ ಶುಕ್ಲಾ ಹಾಗೂ ದಲಿತ ಸಮುದಾಯದ ಜಗದೀಶ್ ದೇವಡಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.ಮೋಹನ್ ಯಾದವ್ ವಿಧಾನಸಭೆಗೆ ಆಯ್ಕೆಯಾಗಿದ್ದು ಇದು ಮೂರನೇ ಬಾರಿ. ಹಿಂದಿನ ಸರ್ಕಾರದಲ್ಲಿ ಅವರು ಶಿಕ್ಷಣ ಸಚಿವರಾಗಿದ್ದರು. ಇನ್ನು ಡಿಸಿಎಂಗಳಾದ ದೇವಡಾ ಮತ್ತು ಶುಕ್ಲಾ ಕೂಡಾ ಹಿಂದಿನ ಸಿಎಂ ಚೌಹಾಣ್ ಸಂಪುಟದಲ್ಲಿ ಸಚಿವರಾಗಿದ್ದರು.
ಇನ್ನೊಂದು ಅಚ್ಚರಿ ಎಂಬಂತೆ ಚುನಾವಣೆಗೆ ಸ್ಪರ್ಧಿಸಿದ್ದ 3 ಕೇಂದ್ರ ಸಚಿವರಲ್ಲಿ ಒಬ್ಬರಾದ ನರೇಂದ್ರ ಸಿಂಗ್ ತೋಮರ್ ಅವರನ್ನು ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಈ ಮೂಲಕ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ನಿರ್ಗಮಿತ ಕೇಂದ್ರ ಕೃಷಿ ಸಚಿವ ತೋಮರ್, ಈಗ ಸ್ಪೀಕರ್ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.ಈ ಬೆಳವಣಿಗೆ ಬೆನ್ನಲ್ಲೇ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ಮೋಹನ್ ಯಾದವ್, ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ.ಬಳಿಕ ಮಾತನಾಡಿದ ಯಾದವ್ ‘ನಾನೊಬ್ಬ ಪಕ್ಷದ ಸಣ್ಣ ಕಾರ್ಯಕರ್ತ... ಈ ಅವಕಾಶಕ್ಕಾಗಿ ಪಕ್ಷಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಜನರ ಆಶೋತ್ತರ ಈಡೇರಿಸುವ ಎಲ್ಲ ಯತ್ನ ಮಾಡುವೆ’ ಎಂದು ನುಡಿದರು.++++ಅಚ್ಚರಿ ಆಯ್ಕೆ:ರಾಜ್ಯದ ಸಂಭಾವ್ಯ ಸಿಎಂಗಳಲ್ಲಿ ಈವರೆಗೂ ಯಾದವ್ ಹೆಸರೇ ಕೇಳಿ ಬಂದಿರಲಿಲ್ಲ. ಕೇಂದ್ರ ಸಚಿವರಾಗಿದ್ದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್, ಹಾಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಸೇರಿ ಅನೇಕರ ಹೆಸರು ಪ್ರಮುಖವಾಗಿ ಕೇಳಿಬಂದಿದ್ದವು. ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೆಸರು ಕೇಳಿಬಂದರೂ ಅವರು ತಾವು ಮತ್ತೆ ಸಿಎಂ ರೇಸ್‌ನಲ್ಲಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದರು.ಇಂಥದ್ದರಲ್ಲಿ ಸಂಭಾವ್ಯರ ಪಟ್ಟಿಯಲ್ಲೇ ಇಲ್ಲದ ಯಾದವ್ ಹೆಸರು ಸೋಮವಾರ ಏಕಾಏಕಿ ಮುನ್ನೆಲೆಗೆ ಬಂದು ರಾಜಕೀಯ ಪಂಡಿತರನ್ನೇ ಚಕಿತಗೊಳಿಸಿದೆ. ಈ ಮೂಲಕ ಅಚ್ಚರಿಯ ವ್ಯಕ್ತಿಯನ್ನು ಸಿಎಂ ಮಾಡುವ ಬಿಜೆಪಿ ವರಿಷ್ಠರ ಪರಿಪಾಠ ಮುಂದುವರಿದಿದೆ.ಇನ್ನು ರಾಜಸ್ಥಾನ ಮುಖ್ಯಮಂತ್ರಿ ಆಯ್ಕೆ ಬಾಕಿ ಇದೆ. ಅದು ಸೋಮವಾರ ನಡೆಯುವ ನಿರೀಕ್ಷೆ ಇದೆ.ಒಬಿಸಿ ಮತಗಳ ಮೇಲೆ ಕಣ್ಣು:ಮಧ್ಯಪ್ರದೇಶದಲ್ಲಿ ಯಾದವ ಸಮಾಜವು ಅಷ್ಟೇನೂ ಪ್ರಭಾವಿಯಾಗಿಲ್ಲ. ಆದರೂ ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಹಿಂದುಳಿದ ವರ್ಗ (ಒಬಿಸಿ) ಜನಸಂಖ್ಯೆ ಇದೆ. ಒಬಿಸಿ ಮತಗಳ ಮೇಲೆ ಕಣ್ಣಿರಿಸಿ ಮೋಹನ್ ಯಾದವ್‌ಗೆ ಬಿಜೆಪಿ ವರಿಷ್ಠರು ಮನ್ನಣೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.