ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ 370 ಸ್ಥಾನ ಗೆಲ್ಲುವುದು ಪಕ್ಷದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ನಾವು ಸಲ್ಲಿಸುವ ಗೌರವವಾಗಲಿದೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕರೂ, ಕಾರ್ಯಕರ್ತರೂ ಶ್ರಮ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ 370 ಸ್ಥಾನ ಗೆಲ್ಲುವುದು ಪಕ್ಷದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ನಾವು ಸಲ್ಲಿಸುವ ಗೌರವವಾಗಲಿದೆ.
ಈ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬ ನಾಯಕರೂ, ಕಾರ್ಯಕರ್ತರೂ ಶ್ರಮ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಅಲ್ಲದೆ ಚುನಾವಣೆ ಗೆಲುವಿನ ಸಂಬಂಧ 370, 370, 370 ಎಂಬ ಹೊಸ ಮಂತ್ರವನ್ನೂ ಜಪಿಸಿದ್ದಾರೆ.
ಜೊತೆಗೆ, ನಮ್ಮ ಸರ್ಕಾರ ಕೈಗೊಂಡಿರುವ ಬಡವರ ಪರ ಕಾರ್ಯಕ್ರಮಗಳು, ದೇಶದ ಅಭಿವೃದ್ಧಿಯ ಸಾಧನೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಮತ್ತಷ್ಟು ಹೆಚ್ಚಿರುವ ವಿಷಯಗಳನ್ನು ಚುನಾವಣಾ ಪ್ರಚಾರದ ವಿಷಯವಾಗಿ ಬಳಸಿಕೊಳ್ಳುವಂತೆಯೂ ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.
ಶನಿವಾರ ಇಲ್ಲಿ ಆಯೋಜಿತವಾಗಿದ್ದ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ನಮ್ಮ ಸರ್ಕಾರ 370ನೇ ವಿಧಿ ರದ್ದು ಮಾಡಿದೆ. ಮುಂದಿನ 100 ದಿನಗಳಲ್ಲಿ ಲೋಕಸಭಾ ಚುನಾವಣೆಗಳು ಮುಗಿದಿರುತ್ತವೆ.
ಹೀಗಾಗಿ ತಡ ಮಾಡದೇ ಪ್ರತಿ ನಾಯಕರು, ಕಾರ್ಯಕರ್ತರು ಪಕ್ಷವು ಏಕಾಂಗಿಯಾಗಿ 370 ಸ್ಥಾನ ಗೆಲ್ಲುವುದನ್ನು ಖಾತರಿಪಡಿಸಬೇಕು. ಜೊತೆಗೆ ಪ್ರತಿ ಬೂತ್‌ನಲ್ಲೂ 2019ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಲಭ್ಯವಾಗಿದ್ದಕ್ಕಿಂತ 370 ಹೆಚ್ಚು ಮತಗಳು ಬರುವಂತೆ ನೋಡಿಕೊಳ್ಳಬೇಕು’ ಎಂದು ಕರೆ ನೀಡಿದ್ದಾರೆ.
ಪ್ರಚಾರದ ತಂತ್ರ: ಚುನಾವಣೆಯ ಪ್ರಚಾರಕ್ಕೆ ಸರ್ಕಾರ ಕೈಗೊಂಡಿರುವ ಬಡವರ ಪರವಾದ ಕಾರ್ಯಕ್ರಮ, ಭಾರತದ ಅಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಗೌರವದ ವಿಷಯವನ್ನೇ ಪ್ರಚಾರಕ್ಕೆ ಬಳಸಿ ಎಂದು ಮೋದಿ ಕರೆ ನೀಡಿದ್ದಾರೆ.
ಕಮಲವೇ ಅಭ್ಯರ್ಥಿ: ಅಲ್ಲದೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಾದ ‘ಕಮಲ’ವೇ ಅಭ್ಯರ್ಥಿಯಾಗಿರಲಿದೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಎಲ್ಲಾ ಪದಾಧಿಕಾರಿಗಳು ಖಾತ್ರಿಪಡಿಸಬೇಕು ಎಂದು ಮೋದಿ ಹೇಳಿದ್ದಾರೆ ಎಂದು ಸಭೆಯ ಬಳಿಕ ಬಿಜೆಪಿ ನಾಯಕ ವಿನೋದ್ ತಾವ್ಡೆ ಮಾಹಿತಿ ನೀಡಿದ್ದಾರೆ.
11500 ಪದಾಧಿಕಾರಿಗಳು ಭಾಗಿ: ಮುಂದಿನ ಚುನಾವಣೆಯ ರೂಪುರೇಷೆಗಳನ್ನು ನಿರ್ಧರಿಸಲು ದೆಹಲಿಯ ಭಾರತ ಮಂಟಪದಲ್ಲಿ ಬಿಜೆಪಿ 2 ದಿನಗಳ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಿದೆ.
ಶನಿವಾರವೇ ಈ ಸಭೆ ಆರಂಭವಾಗಿದ್ದು, ಇದರಲ್ಲಿ ಸುಮಾರು 11500 ಮಂದಿ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು, ಬಿಜೆಪಿ ಅಧ್ಯಕ್ಷರು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.
ಭಾರತದ ಗೌರವ ಹೆಚ್ಚಳ ವಿಷಯ ಪ್ರಚಾರಕ್ಕೆ ಬಳಸಿ: ನಮ್ಮ ಸರ್ಕಾರ ಕೈಗೊಂಡಿರುವ ಬಡವರ ಪರ ಕಾರ್ಯಕ್ರಮಗಳು, ದೇಶದ ಅಭಿವೃದ್ಧಿಯ ಸಾಧನೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಮತ್ತಷ್ಟು ಹೆಚ್ಚಿರುವ ವಿಷಯಗಳನ್ನು ಚುನಾವಣಾ ಪ್ರಚಾರದ ವಿಷಯವಾಗಿ ಕಾರ್ಯಕರ್ತರು ಬಳಸಿಕೊಳ್ಳಬೇಕು - ನರೇಂದ್ರ ಮೋದಿ ಪ್ರಧಾನ ಮಂತ್ರಿ