ಮಹಾಕುಂಭ ನಗರ: ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಬುಧವಾರ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಬುಧವಾರ ಪುಣ್ಯಸ್ನಾನ ಮಾಡಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಮೋದಿ, ‘ಸಂಗಮದಲ್ಲಿ ಸ್ನಾನ ಮಾಡುವುದು ದೈವಿಕ ಅನುಭೂತಿಯಾಗಿತ್ತು. ಕೋಟ್ಯಂತರ ಭಕ್ತರಂತೆ ನನ್ನಲ್ಲೂ ಭಕ್ತ ಭಾವ ತುಂಬಿತ್ತು. ಗಂಗಾ ಮಾತೆ ಎಲ್ಲರಿಗೂ ಶಾಂತಿ, ಬುದ್ಧಿ, ಆರೋಗ್ಯ, ಸಾಮರಸ್ಯ ಕರುಣಿಸಲಿ’ ಎಂದು ಪ್ರಾರ್ಥಿಸಿದ್ದಾರೆ.
ಅರೈಲ್ ಘಾಟ್‌ನಿಂದ ಸಂಗಮದ ವರೆಗೆ ದೋಣಿಯಲ್ಲಿ ತೆರಳಿದ ಮೋದಿಯವರನ್ನು ನೋಡಲು ಜನ ನದಿಯ ಎರಡೂ ದಡಗಳಲ್ಲಿ ಕಾದಿದ್ದರು. ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಕೆಲ ಭಾಗಗಳಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.