ಕಾಶ್ಮೀರ ಅಭಿವೃದ್ಧಿ ಸಹಿಸದೆ ದಾಳಿ : ಮನ್‌ ಕೀ ಬಾತ್‌ನಲ್ಲಿ ಮೋದಿ ಕಿಡಿ

KannadaprabhaNewsNetwork | Updated : Apr 28 2025, 06:05 AM IST

ಸಾರಾಂಶ

ಮತ್ತೊಮ್ಮೆ ಹೇಳುತ್ತೇನೆ, ಪಹಲ್ಗಾಂ ಉಗ್ರ ದಾಳಿ ಸಂತ್ರಸ್ತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. 26 ಮಂದಿಯನ್ನು ಬಲಿ ಪಡೆದ ಭಯೋತ್ಪಾದಕರು ಮತ್ತು ದಾಳಿ ಹಿಂದಿನ ರೂವಾರಿಗಳಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ನವದೆಹಲಿ: ಮತ್ತೊಮ್ಮೆ ಹೇಳುತ್ತೇನೆ, ಪಹಲ್ಗಾಂ ಉಗ್ರ ದಾಳಿ ಸಂತ್ರಸ್ತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. 26 ಮಂದಿಯನ್ನು ಬಲಿ ಪಡೆದ ಭಯೋತ್ಪಾದಕರು ಮತ್ತು ದಾಳಿ ಹಿಂದಿನ ರೂವಾರಿಗಳಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಉಗ್ರರು ಮತ್ತು ಉಗ್ರರ ಪೋಷಕ ರಾಷ್ಟ್ರ ಪಾಕಿಸ್ತಾನಕ್ಕೆ ಕಠಿಣ ಶಿಕ್ಷೆ ಕಾದಿದೆ ಎಂಬ ಸ್ಪಷ್ಟ ಸಂದೇಶವನ್ನು ಮತ್ತೊಮ್ಮೆ ರವಾನಿಸಿದ್ದಾರೆ..

ಭಾನುವಾರ ಪ್ರಸಾರಗೊಂಡ ಮಾಸಿಕ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಪಹಲ್ಗಾಂ ದಾಳಿ ಕುರಿತು ಪ್ರಸ್ತಾಪಿಸಿದ ಅವರು, ‘ಈ ದಾಳಿಯ ಚಿತ್ರಗಳನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕೊತಕೊತ ಕುದಿಯುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಡೀ ವಿಶ್ವವೇ ಭಾರತದ ಬೆನ್ನಿಗೆ ನಿಂತಿದೆ. ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸುತ್ತಿರುವಾಗ ಮತ್ತು ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವಾಗ ಪ್ರವಾಸಿ ತಾಣದ ಮೇಲಿನ ಈ ದಾಳಿಯು ಪಾಕಿಸ್ತಾನ ಬೆಂಬಲಿತ ಉಗ್ರರ ಹತಾಶೆ ಮತ್ತು ಹೇಡಿತನವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಕಾಶ್ಮೀರ ಕಣಿವೆಯಲ್ಲಿ ಮೂಲಸೌಲರ್ಯ ನಿರ್ಮಾಣ ಕಾರ್ಯವು ತೀವ್ರ ಸ್ವರೂಪದಲ್ಲಿ ಪ್ರಗತಿಯಲ್ಲಿತ್ತು. ಪ್ರಜಾಪ್ರಭುತ್ವವು ಗಟ್ಟಿಯಾಗುತ್ತಿತ್ತು, ಪ್ರವಾಸಿಗರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿತ್ತು, ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿತ್ತು. ಆದರೆ, ದೇಶದ, ಜಮ್ಮು ಮತ್ತು ಕಾಶ್ಮೀರದ ಶತ್ರುಗಳಿಗೆ ಇದು ಇಷ್ಟವಾಗಲಿಲ್ಲ. ಭಯೋತ್ಪಾದಕರು ಮತ್ತು ಅದರ ಸೂತ್ರಧಾರರು ಕಾಶ್ಮೀರವನ್ನು ಮತ್ತೆ ವಿನಾಶದತ್ತ ಕೊಂಡೊಯ್ಯುವ ಉದ್ದೇಶ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ಪಹಲ್ಗಾಂನಂಥ ಬಹುದೊಡ್ಡ ಷಡ್ಯಂತ್ರ ರೂಪಿಸಿದರು ಎಂದು ಮೋದಿ ಆರೋಪಿಸಿದರು.

ತುಂಬಾ ಸಮಯದ ಬಳಿಕ ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ ಈ ಭಾರೀ ಭಯೋತ್ಪಾದನಾ ದಾಳಿಯಿಂದ ನನ್ನ ಹೃದಯ ನೋವಿನಲ್ಲಿ ಮುಳುಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ 140 ಕೋಟಿ ಜನರ ಒಗ್ಗಟ್ಟು ದೇಶದ ಅತಿದೊಡ್ಡ ಶಕ್ತಿ ಎಂದ ಮೋದಿ, ಈ ಅಂತಃಶಕ್ತಿಯೇ ಭಯೋತ್ಪಾದನೆಯ ವಿರುದ್ಧದ ನಮ್ಮ ನಿರ್ಣಾಯಕ ಹೋರಾಟಕ್ಕೆ ಆಧಾರವಾಗಿದೆ ಎಂದರು.

ಉಗ್ರರ ದಾಳಿಯ ಫೋಟೋಗಳನ್ನು ನೋಡಿದಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿರುವುದನ್ನು ನೋಡುತ್ತಿದ್ದೇನೆ. ನಾನು ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಕ್ಕೆ ಮತ್ತೊಮ್ಮೆ ಭರವಸೆ ನೀಡುತ್ತೇನೆ, ನಿಮಗೆ ಖಂಡಿತ ನ್ಯಾಯ ಸಿಕ್ಕೇ ಸಿಗುತ್ತದೆ. ಈ ದಾಳಿಯಲ್ಲಿ ಪಾಲ್ಗೊಂಡವರು ಮತ್ತು ಸಂಚುಕೋರರು ಖಂಡಿತಾ ಕಠಿಣ ಶಿಕ್ಷೆ ಅನುಭವಿಸಲಿದ್ದಾರೆ ಎಂದು ಪುನರುಚ್ಚರಿಸಿದರು.

ಈ ಉಗ್ರ ದಾಳಿಯ ಬಳಿಕ ಇಡೀ ದೇಶ ಒಂದೇ ದನಿಯಲ್ಲಿ ಮಾತನಾಡುತ್ತಿದೆ. ಈ ದಾಳಿಗೆ ಇಡೀ ವಿಶ್ವದಿಂದ ಖಂಡನೆ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ನಾಯಕರು ಕರೆ ಮಾಡಿದ್ದಾರೆ. ಪತ್ರ ಬರೆದಿದ್ದಾರೆ ಮತ್ತು ಸಂದೇಶ ಕಳುಹಿಸಿದ್ದಾರೆ. ಪ್ರತಿಯೊಬ್ಬರೂ ಈ ಹೀನಾಯ ಉಗ್ರ ದಾಳಿಯನ್ನು ಖಂಡಿಸಿದ್ದಾರೆ. ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ ಎಂದು ತಿಳಿಸಿದ ಪ್ರಧಾನಿ, ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟದಲ್ಲಿ ಇಡೀ ವಿಶ್ವ ದೇಶದ 140 ಕೋಟಿ ಭಾರತೀಯರ ಜತೆಗೆ ನಿಂತಿದೆ ಎಂದು ಹೇಳಿದರು.

Share this article