35 ವರ್ಷ ಬಳಿಕ ಬಾಂಗ್ಲಾದೇಶಕ್ಕೆ ಮೊದಲ ಪುರುಷ ಪ್ರಧಾನಮಂತ್ರಿ!

KannadaprabhaNewsNetwork |  
Published : Feb 14, 2026, 02:00 AM ISTUpdated : Feb 14, 2026, 05:22 AM IST
bangladesh

ಸಾರಾಂಶ

  ಬಾಂಗ್ಲಾದೇಶದಲ್ಲಿ ನಡೆದ ಸಂಸತ್‌ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ನಿರೀಕ್ಷೆಯಂತೆಯೇ ಮಾಜಿ ಪ್ರಧಾನಿ ದಿ.ಖಲೀದಾ ಜಿಯಾ ಅವರ ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಕ್ಷ  ಅಭೂತಪೂರ್ವ ಗೆಲುವು ಸಾಧಿಸಿ, 2 ದಶಕಗಳ ಬಳಿಕ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.

 ಢಾಕಾ: ಶೇಖ್‌ ಹಸೀನಾ ಪದಚ್ಯುತಿಯಾದ ಒಂದೂವರೆ ವರ್ಷದ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಸಂಸತ್‌ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ನಿರೀಕ್ಷೆಯಂತೆಯೇ ಮಾಜಿ ಪ್ರಧಾನಿ ದಿ.ಖಲೀದಾ ಜಿಯಾ ಅವರ ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಕ್ಷ (ಬಿಎನ್‌ಪಿ) ಅಭೂತಪೂರ್ವ ಗೆಲುವು ಸಾಧಿಸಿ, 2 ದಶಕಗಳ ಬಳಿಕ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಖಲೀದಾ ಅವರ ಪುತ್ರ ತಾರೀಖ್‌ ರೆಹಮಾನ್‌ ಪ್ರಧಾನಿ ಹುದ್ದೆ ಅಲಂಕರಿಸುವುದು ಖಚಿತವಾಗಿದ್ದು, ಇದರೊಂದಿಗೆ 1991ರ ಬಳಿಕ ಅಂದರೆ 35 ವರ್ಷಗಳ ನಂತರ ಬಾಂಗ್ಲಾದೇಶ ಮತ್ತೆ ಪುರುಷ ಪ್ರಧಾನಿಯನ್ನು ಕಾಣಲಿದೆ.

ಚುನಾವಣೆ ನಡೆದ 330 ಕ್ಷೇತ್ರಗಳ ಪೈಕಿ 297ರ ಫಲಿತಾಂಶ ಪ್ರಕಟವಾಗಿದ್ದು ಬಿಎನ್‌ಪಿ 209, ಜಮಾತ್‌ ಎ ಇಸ್ಲಾಮಿ 68 ಸ್ಥಾನ ಮತ್ತು ಖಲೀದಾ ಪದಚ್ಯುತಿಗೆ ಕಾರಣವಾಗಿದ್ದ ವಿದ್ಯಾರ್ಥಿಗಳ ಎನ್‌ಸಿಪಿ 6 ಸ್ಥಾನ ಗೆದ್ದಿವೆ. ವಿಜಯದ ಬೆನ್ನಲ್ಲೇ, ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಭಾರತದಿಂದ ಗಡೀಪಾರು ಮಾಡಬೇಕು ಎಂದು ಬಿಎನ್‌ಪಿ ಆಗ್ರಹ ಮಾಡಿದೆ. ಇದೆಲ್ಲದರ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ, ಬಿಎನ್‌ಪಿ ಅಧ್ಯಕ್ಷ ತಾರೀಖ್‌ ರೆಹಮಾನ್‌ಗೆ ಕರೆ ಮಾಡಿ ಶುಭ ಕೋರಿದ್ದಾರೆ.

ದಂಗೆ ಬಳಿಕ ಚುನಾವಣೆ:

2024ರ ಆಗಸ್ಟ್‌ನಲ್ಲಿ ಜೆನ್‌ಝೀಗಳು ನಡೆಸಿದ ದಂಗೆಯ ಪರಿಣಾಮ 2014ರಿಂದಲೂ ಅಧಿಕಾರದಲ್ಲಿದ್ದ ಶೇಖ್ ಹಸೀನಾ ಸರ್ಕಾರ ಪತನಗೊಂಡಿತ್ತು. ಈ ವೇಳೆ ಹಸೀನಾ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಹಿಂದೂಗಳನ್ನು ಗುರಿಯಾಗಿಸಿ ಭಾರೀ ಪ್ರಮಾಣದ ಹಿಂಸಾಚಾರ, ನರಮೇಧ ನಡೆಸಲಾಗಿತ್ತು. ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಖಂಡನೆಗೂ ಕಾರಣವಾಗಿತ್ತು. ಬಳಿಕ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನಸ್‌ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚಿಸಲಾಗಿತ್ತು. ಮಧ್ಯಂತರ ಸರ್ಕಾರದ ನೇತೃತ್ವದಲ್ಲಿ ಸಂಸತ್‌ಗೆ ಚುನಾವಣೆ ನಡೆಸಲಾಗಿತ್ತು. ದೇಶವಿರೋಧಿ ಕೃತ್ಯಗಳ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಅವರ ಪಕ್ಷವನ್ನು ಹೊರಗಿಡಲಾಗಿತ್ತು. ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಬಿಎನ್‌ಪಿ 209 ಸ್ಥಾನಗಳಲ್ಲಿ ಜಯ ಸಾಧಿಸಿ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.

ಮೂಲಭೂತವಾದಿ ಜಮಾತ್‌ಗೆ ಹಿನ್ನಡೆ:

ಹಿಂದೂ ವಿರೋಧಿ ಮೂಲಭೂತವಾದಿ ಪಕ್ಷ ಜಮಾತ್‌-ಎ-ಇಸ್ಲಾಮಿ ಈ ಬಾರಿಯ ಚುನಾವಣೆಯಲ್ಲಿ ಭಾರೀ ಗೆಲುವಿನ ಉಮೇದಿನಲ್ಲಿತ್ತು. ಹಿಂದೂ ವಿರೋಧಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದ ಈ ಪಕ್ಷ, ಅನ್ಯ ಪಕ್ಷಕ್ಕೆ ಮತ ಹಾಕಿದರೆ ಬಹಿರಂಗವಾಗಿಯೇ ಹಿಂದೂಗಳನ್ನೆಲ್ಲ ಭಾರತಕ್ಕೆ ಕಳುಹಿಸುವ ಬೆದರಿಕೆಯನ್ನೂ ಒಡ್ಡಿತ್ತು. ಆದರೆ, ಈ ಚುನಾವಣೆಯಲ್ಲಿ ಪಕ್ಷಕ್ಕೆ ಕೇವಲ 68 ಸೀಟು ಅಷ್ಟೇ ದಕ್ಕಿದೆ. ಈ ಮೂಲಕ ರಾಜಕೀಯ ಅಸ್ಥಿರತೆಯ ಲಾಭ ಪಡೆದು ಅಧಿಕಾರಕ್ಕೇರುವ ಜಮಾತ್‌ ಕನಸು ಕಮರಿದಂತಾಗಿದೆ.

35 ವರ್ಷಗಳ ಬಳಿಕ ಪುರುಷ ಪಿಎಂ:

1989-90ರಲ್ಲಿ ಖಾಜಿ ಜಫರ್‌ ಅಹಮದ್‌ ಕಡೆಯ ಬಾರಿಗೆ ಪ್ರಧಾನಿಯಾಗಿದ್ದು ಬಿಟ್ಟರೆ ಬಳಿಕ ಖಲಿದಾ ಜಿಯಾ ಮತ್ತು ಶೇಖ್‌ ಹಸೀನಾ ಅವರೇ ಆಡಳಿತ ನಡೆಸುವ ಮೂಲಕ ದೇಶ ಬೇಗಂಗಳ ಜಟಾಪಟಿಯ ಕಣವಾಗಿ ಮಾರ್ಪಟ್ಟಿತ್ತು.

ಒಟ್ಟು ಕ್ಷೇತ್ರ 300

ಫಲಿತಾಂಶ ಪ್ರಕಟ 297 ಬಿಎನ್‌ಪಿ 209

ಜಮಾತ್‌ 68

ಇತರೆ 20

ತಾರೀಖ್‌ಗೆ ಕರೆ ಮಾಡಿ ಅಭಿನಂದಿಸಿದ ಮೋದಿ

ತಾರೀಖ್‌ ಅವರ ನಾಯಕತ್ವ ಮೇಲೆ ಬಾಂಗ್ಲನ್ನರಿಗೆ ಇರುವ ವಿಶ್ವಾಸವನ್ನು ಫಲಿತಾಂಶ ಪ್ರತಿಬಿಂಬಿಸಿದೆ. ಪ್ರಜಾಸತ್ತಾತ್ಮಕ, ಪ್ರಗತಿಪರ, ಸರ್ವರ ಒಳಗೊಂಡ ಬಾಂಗ್ಲಾಕ್ಕೆ ಭಾರತದ ಬೆಂಬಲ ಮುಂದುವರಿಯುತ್ತೆ. ಸಂಬಂಧ ಬಲಪಡಿಸಿ, ಅಭಿವೃದ್ಧಿಯತ್ತ ಸಾಗಲು ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. - ನರೇಂದ್ರ ಮೋದಿ, ಪ್ರಧಾನಿ

ಹಸೀನಾ ಕಳುಹಿಸಿ: ಭಾರತಕ್ಕೆ ಬಿಎನ್‌ಪಿ ಮೊದಲ ಬೇಡಿಕೆ!

ಬಾಂಗ್ಲಾದೇಶ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಬಿಎನ್‌ಪಿ ಭಾರತಕ್ಕೆ ಮೊದಲ ಬೇಡಿಕೆ ಇಟ್ಟಿದೆ. ಪದಚ್ಯುತಿ ಬಳಿಕ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್‌ ಹಸೀನಾರನ್ನು ಗಡೀಪಾರು ಮಾಡುವಂತೆ ಕೇಳಿದೆ.--

ಹಸೀನಾ ಕೆಳಗಿಳಿಸಿದಬಾಂಗ್ಲಾ ಜೆನ್‌ಝೀಗೆ ಹೀನಾಯ ಸೋಲು!ಶೇಖ್‌ ಹಸೀನಾ ವಿರುದ್ಧ ಹೋರಾಟ ಸಂಘಟಿಸಿ, ಅವರ ಪದಚ್ಯುತಿಗೆ ಕಾರಣರಾದ ಹಾಗೂ ಅವರು ದೇಶ ತೊರೆಯುವಂತೆ ಮಾಡಿದ ಜೆನ್‌ಝೀ ಹೋರಾಟಗಾರರು ಬಾಂಗ್ಲಾದೇಶ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. 30 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜೆನ್‌ಝೀ ಹೋರಾಟಗಾರರು 6 ಸ್ಥಾನ ಮಾತ್ರ ಗೆದ್ದಿದ್ದಾರೆ. 

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಾಲ್ಡಾ ದಿಗ್ಬಂದನ ಸಂಚುಕೋರ ಬೆಂಗಳೂರಿಗೆ ಪರಾರಿ ವೇಳೆ ಸೆರೆ
ಅಣ್ವಸ್ತ್ರ ಹೊತ್ತೊಯ್ಯಬಲ್ಲ ಅರಿದಮನ್‌ ಸೇನೆಗೆ