ಹೈದರಾಬಾದ್: ಭಾರತವು ಸ್ವದೇಶಿ ಶಸ್ತ್ರಾಸ್ತ್ರಗಳ ಉತ್ಪಾದನೆ ಕಡೆ ಗಮನಹರಿಸುತ್ತಿರುವ ಹೊತ್ತಿನಲ್ಲಿ, ಹೈದರಾಬಾದ್‌ನ 20 ವರ್ಷದ ಹುಡುಗರಿಬ್ಬರು ಹಾಸ್ಟೆಲ್‌ನಲ್ಲಿ ಕುಳಿತು, ರಡಾರ್ ಕಣ್ತಪ್ಪಿಸಬಲ್ಲ ಡ್ರೋನ್‌ಗಳನ್ನು ತಯಾರಿಸಿದ್ದಲ್ಲದೆ, ಸೇನೆಗೂ ಅದನ್ನು ಮಾರಾಟ ಮಾಡಿದ್ದಾರೆ.
ರಾಜಸ್ಥಾನದ ಅಜ್ಮೇರ್‌ನವರಾದ ಮೆಕ್ಯಾನಿಕಲ್ ಎಂಜಿನಿಯರ್ ಜಯಂತ್ ಖತ್ರಿ ಮತ್ತು ಕೋಲ್ಕತಾದ ಎಲೆಕ್ಟ್ರಿಕಲ್ ಎಂಜಿನಿಯರ್ ಸೌರ್ಯ ಚೌಧರಿ ಸೇರಿಕೊಂಡು ಅಪೋಲಿಯನ್ ಡೈನಾಮಿಕ್ಸ್ ಎಂಬ ಸ್ಟಾರ್ಟ್‌ಅಪ್ ಆರಂಭಿಸಿದ ಎರಡೇ ತಿಂಗಳಲ್ಲಿ ಗಂಟೆಗೆ 300 ಕಿ.ಮೀ. ಚಲಿಸಬಲ್ಲ ಕ್ಯಾಮಿಕಾಜೆ ಡ್ರೋನ್‌ಗಳನ್ನು ಸಿದ್ಧಪಡಿಸಿದ್ದಲ್ಲದೆ, ಅದನ್ನು ಭಾರತೀಯ ಸೇನೆಗೂ ಮಾರಾಟ ಮಾಡಿದ್ದಾರೆ. ವಿಶೇಷವೆಂದರೆ, ಅವರಿಬ್ಬರು ಡ್ರೋನ್‌ಗಳನ್ನು ತಯಾರಿಸಿದ್ದು ಹೈದರಾಬಾದ್‌ನ ಬಿಐಟಿಎಸ್ ಪಿಲಾನಿಯ ಹಾಸ್ಟೆಲ್‌ನಲ್ಲಿ ಕುಳಿತು.
ಲಿಂಕ್ಡ್‌ಇನ್ ಮೂಲಕ ಕರ್ನಲ್ ಒಬ್ಬರನ್ನು ಸಂಪರ್ಕಿಸಿದ್ದ ವಿದ್ಯಾರ್ಥಿಗಳು, ತಮ್ಮ ಡ್ರೋನ್‌ಗಳ ಬಾಂಬ್ ಹಾಕುವ ಮತ್ತು ರೇಸಿಂಗ್ ಸಾಮರ್ಥ್ಯವನ್ನು ಚಂಡೀಗಢದಲ್ಲಿ ಪ್ರದರ್ಶಿಸಿದ್ದಾರೆ. ರಡಾರ್‌ಗಳ ಕಣ್ಣಿಗೆ ಬೀಳದೆ ಚಲಿಸಬಲ್ಲ ಈ ಡ್ರೋನ್‌ಗಳು 1 ಕೆ.ಜಿ. ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಇವುಗಳನ್ನು ಜಮ್ಮು, ಹರಿಯಾಣದ ಚಂಡಿಮಂದಿರ್, ಪಶ್ಚಿಮ ಬಂಗಾಳದ ಪನಗಢ ಮತ್ತು ಅರುಣಾಚಲ ಪ್ರದೇಶದ ಸೇನಾ ಘಟಕಗಳಲ್ಲಿ ನಿಯೋಜಿಸಲಾಗುವುದು.
ಈ ಬಗ್ಗೆ ಮಾತನಾಡಿರುವ ಜಯಂತ್, ‘ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳನ್ನು ನೋಡಿ, ಡ್ರೋನ್‌ಗಳ ಮಹತ್ವದ ಅರಿವಾಯಿತು. ಪರಿಣಾಮವಾಗಿ ಡ್ರೋನ್ ತಯಾರಿಸಿ, ಸಿಕ್ಕಿದವರಿಗೆಲ್ಲಾ ಇ-ಮೇಲ್ ಕಳಿಸತೊಡಗಿದೆವು. ಅದೇಷ್ಟವಶಾತ್ ಕರ್ನಲ್ ಒಬ್ಬರು ಪ್ರತಿಕ್ರಿಯಿಸಿ, ಅವುಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರು’ ಎಂದು ಹೇಳಿದ್ದಾರೆ.
ಪ್ರಸ್ತುತ ಇವರ ತಂಡದಲ್ಲಿ 10 ಜನರಿದ್ದು, ಮುಂದಿನ ಪೀಳಿಗೆಯ ವರ್ಟಿಕಲ್ ಟೇಕ್-ಆಫ್ ಆಗುವ, ಸ್ಥಿರ ರೆಕ್ಕೆ ಹೊಂದಿರುವ ಡ್ರೋನ್‌ಗಳ ತಯಾರಿ ಇವರ ಗುರಿ.