ಲೇಹ್: ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ಇಲ್ಲಿನ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಒಂದೆಡೆ ಮುಂಗಡವಾಗಿ ಹೋಟೆಲ್ ಬುಕ್ಕಿಂಗ್ ಮಾಡಿದ್ದವರು ರದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಇದನ್ನೇ ನಂಬಿ ಬದುಕಿದ್ದ ನೂರಾರು ಕುಟುಂಬಗಳು ಅತಂತ್ರವಾಗಿವೆ.
ಏ.22ರಂದು ಪಹಲ್ಗಾಂನಲ್ಲಿ ನಡೆದ ನರಮೇಧದಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿತ್ತು. ಮೂರು ತಿಂಗಳ ಬಳಿಕ ನಿಧಾನಕ್ಕೆ ಕಾಶ್ಮೀರ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲಿಯೇ ಮತ್ತೊಂದು ಕೇಂದ್ರಾಡಳಿತ ಪ್ರದೇಶ ಪ್ರವಾಸಿಗರಲಿಲ್ಲದೆ ಬಣಗುಟ್ಟುತ್ತಿದೆ.
‘ಮುಂಗಡ ಹೋಟೆಲ್ ಕೊಠಡಿ ಬುಕ್ಕಿಂಗ್ ಮಾಡಿದ್ದವರು ನಿರಂತರವಾಗಿ ಕಳೆದೊಂದು ವಾರದಿಂದ ರದ್ದು ಮಾಡುತ್ತಿದ್ದಾರೆ’ ಎನ್ನುವುದು ಹೋಟೆಲ್ ಉದ್ಯಮಿಗಳ ಅಳಲು. ಅಲ್ಲದೇ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ನೂರಾರು ಕುಟುಂಬಗಳು ಇದರಿಂದಾಗಿ ಬೀದಿಗೆ ಬಂದಿದ್ದು,‘ ಹಿಂದೆಂದೂ ಇಂತಹ ಪರಿಸ್ಥಿತಿ ನೋಡಿರಲಿಲ್ಲ’ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಇವುಗಳ ಮಾಹಿತಿ ಇಲ್ಲದೆ ಬಂದಿದ್ದ ವಿದೇಶಿ ಪ್ರವಾಸಿಗರು, ಪ್ರವಾಸಿ ತಾಣಗಳು ಓಪನ್ ಇರದೆ, ಕರೆನ್ಸಿ ವಿನಿಮಯವೂ ಸಾಧ್ಯವಾಗದೆ ನಿರಾಸೆಯಲ್ಲಿ ಹಿಂದಿರುಗುತ್ತಿರುವ ದೃಶ್ಯಗಳು ಸಾಮಾನ್ಯ ಎನ್ನುವಂತಾಗಿದೆ.
ಲಡಾಖ್ ಮಾತುಕತೆಗೆ ಸಂಘಟನೆಗಳ ನಕಾರ
ಲೇಹ್: ರಾಜ್ಯಸ್ಥಾನ ಮಾನಕ್ಕೆ ಆಗ್ರಹಿಸಿ ಲಡಾಖ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ 4 ಮಂದಿಯ ಸಾವಿಗೆ ಕಾರಣವಾದ ಬೆನ್ನಲ್ಲೇ, ಪ್ರತಿಭಟನೆಯ ನೇತೃತ್ವ ವಹಿಸಿದ ಸಂಘಟನೆ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ)ಯು, ಕೇಂದ್ರ ಗೃಹ ಸಚಿವಾಲಯದ ಉನ್ನತಾಧಿಕಾರ ಸಮಿತಿಯೊಂದಿಗಿನ ಮಾತುಕತೆಯಿಂದ ದೂರವಿರುವುದಾಗಿ ಘೋಷಿಸಿದೆ. ಎಲ್‌ಎಬಿ ಅಧ್ಯಕ್ಷ ಥುಪ್ಸ್ಟಾನ್ ಚೆವಾಂಗ್, ‘ಲಡಾಖ್‌ನಲ್ಲಿ ಶಾಂತಿ ಮತ್ತು ಸೌಹಾರ್ದ ವಾತಾವರಣ ಮರಳುವವರೆಗೆ ಮಾತುಕತೆ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೆವಾಂಗ್, ‘ಲಡಾಖ್‌ನ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಶಾಂತಿಯನ್ನು ಪುನಃಸ್ಥಾಪಿಸದ ಹೊರತು ಮತ್ತು ಅನುಕೂಲಕರ ವಾತಾವರಣ ಸೃಷ್ಟಿಯಾಗದ ಹೊರತು, ನಾವು ಗೃಹ ಸಚಿವಾಲಯದೊಂದಿಗೆ ಯಾವುದೇ ಮಾತುಕತೆಗಳಲ್ಲಿ ಭಾಗವಹಿಸುವುದಿಲ್ಲ. ಇಲ್ಲಿನ ಭಯ, ದುಃಖ ಮತ್ತು ಆಕ್ರೋಶದ ವಾತಾವರಣವನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯ ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತವನ್ನು ಒತ್ತಾಯಿಸುತ್ತೇವೆ’ ಎಂದಿದ್ದಾರೆ.
ಖಲಿಸ್ತಾನಿ ವಿರೋಧಿ ಬಿಷ್ಣೋಯಿ ಗ್ಯಾಂಗ್‌ಗೆ ಕೆನಡಾದಲ್ಲಿ ಉಗ್ರ ಪಟ್ಟ
ಒಟ್ಟಾವಾ: ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಗೆ ಕೆನಡಾ ಸರ್ಕಾರ ಉಗ್ರ ಸಂಘಟನೆ ಎಂಬ ಪಟ್ಟಕಟ್ಟಿದೆ. ಈ ಸಂಘಟನೆಯು ಕೆನಡಾದಲ್ಲಿ ಭಯ ಮತ್ತು ಬೆದರಿಕೆಗಳಿಂದ ಆತಂಕದ ವಾತಾವರಣ ಸೃಷ್ಟಿಸಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ತ್ತೀಚೆಗೆ ಕೆನಡಾದ ಭದ್ರತಾ ಸಲಹೆಗಾರ ನ್ಯಾಥೆಲೈ ಡ್ರೌಲಿನ್ ಮತ್ತು ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ದೆಹಲಿಯಲ್ಲಿ ಸಭೆ ನಡೆಸಿದ ಬಳಿಕ ಈ ಬೆಳವಣಿಗೆಯಾಗಿದೆ. ಇದರಿಂದಾಗಿ ಕೆನಡಾದಲ್ಲಿ ಒಟ್ಟು 88 ಸಂಘಟನೆಗೆ ಉಗ್ರ ಪಟ್ಟ ಲಭಿಸಿದಂತಾಗಿದೆ. ಲಾರೆನ್ಸ್ ಬಿಷ್ಣೋಯಿ ಇದರ ಮುಖ್ಯಸ್ಥನಾಗಿದ್ದು, ಈತನ ಭಾರತದ ಜೈಲಿನಲ್ಲಿದ್ದಾನೆ. ಬಿಷ್ಣೋಯಿ ಗ್ಯಾಂಗ್ ಖಲಿಸ್ತಾನ ಬೇಡಿಕೆಗೆ ವಿರುದ್ಧವಾಗಿದೆ.