ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರನ್ನು ದ್ರೋಹಿ ಎಮದಿದ್ದ ವಿದೂಷಕ ಕುನಾಲ್ ಕಾಮ್ರಾ ಅವರನ್ನು ಆನ್‌ಲೈನ್ ವೇದಿಕೆ ‘ಬುಕ್‌ಮೈ ಶೋ’ ಕಲಾವಿದರ ಪಟ್ಟಿಯಿಂದ ಕೈ ಬಿಟ್ಟಿದೆ ಎಂದು ಶಿವಸೇನಾ ನಾಯಕ ರಾಹುಲ್ ಕನಾಲ್ ಹೇಳಿದ್ದಾರೆ.
‘ತಮ್ಮ ವೇದಿಕೆಯನ್ನು ಸ್ವಚ್ಛವಾಗಿಟ್ಟುಕೊಂಡು ಮನೋರಂಜನಾ ಪಟ್ಟಿಯಿಂದ ಇಂತಹ ಕಲಾವಿದರನ್ನು ಹೊರಗಿಟ್ಟಿರುವುದಕ್ಕೆ ಬುಕ್ ಮೈ ಶೋನ ಸಿಇಒ ಆಶಿಶ್ ಹೇಮರಾಜನಿ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ. ಆದರೆ ಈ ಬಗ್ಗೆ ಬುಕ್‌ಮೈ ಶೋ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬುಕ್ ಮೈ ಶೋ ಪ್ರತಿಕ್ರಿಯೆ ನೀಡಲಿ ಎಂದು ಕಾಮ್ರಾ ಆಗ್ರಹಿಸಿದ್ದಾರೆ.
ದಿಲ್ಲಿಯಲ್ಲಿ ಇದೇ ಮೊದಲ ಬಾರಿಗೆ ಆಯುಷ್ಮಾನ್ ಯೋಜನೆ ಜಾರಿ
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಆಯುಷ್ಮಾನ್ ಭಾರತ್ ಯೋಜನೆ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಜಾರಿಗೆ ಬರಲಿದ್ದು. ರಾಜ್ಯ ಸರ್ಕಾರ ಕೇಂದ್ರದ ಜೊತೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಈ ಹಿಂದೆ ಆಪ್ ಸರ್ಕಾರ ಆಯುಷ್ಮಾನ್ ಜಾರಿ ಮಾಡಿರಲಿಲ್ಲ,ಈ ಯೋಜನೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯ ಅರ್ಹ ಕುಟುಂಬಗಳ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ 5 ಲಕ್ಷ ರು. ಭರಿಸಲಿದೆ, ಇದರ ಜೊತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರವು 5 ಲಕ್ಷ ರು. ಭರಿಸಲಿದೆ.ಆಯುಷ್ಮಾನ್ ಯೋಜನೆ ಜಾರಿಗೆ ತಂದ ದೇಶದ 35ನೇ ರಾಜ್ಯ/ ಕೇಂದ್ರಾಡಳಿತ ಪ್ರದೇಶ ದೆಹಲಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಮಾತ್ರ ಈ ಯೋಜನೆ ಜಾರಿ ಬಾಕಿಯಿದೆ.--ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ದೆಹಲಿ ಸಿಎಂ ರೇಖಾ ಮತ್ತು ಇತರರ ಸಮ್ಮುಖದಲ್ಲಿ ದೆಹಲಿ ಸರ್ಕಾರ ಮತ್ತು ರಾಷ್ಟ್ರಯ ಆರೋಗ್ಯ ಪ್ರಾಧಿಕಾರ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.---ಈ ಹಿಂದೆ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಇದೊಂದು ದೇಶದ ದೊಡ್ಡ ಹಗರಣ ಎಂದು ಅರವಿಂದ್ ಕೇಜ್ರಿವಾಲ್ ಕರೆದಿದ್ದರು.
ಕಂತೆ ಹಣ: ನ್ಯಾ. ವರ್ಮಾ ಅಲಹಾಬಾದ್ ಹೈಕೋರ್ಟ್ ಜಡ್ಜ್ ಆಗಿ ಪ್ರಮಾಣ
ಪ್ರಯಾಗ್‌ರಾಜ್: ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಗೊಂಡ ನ್ಯಾ. ಯಶವಂತ ವರ್ಮಾ ಶನಿವಾರ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ವರ್ಮಾ ಅವರು ಅಧಿಕಾರ ವಹಿಸಿಕೊಂಡ ನಂತರ ಅವರಿಗೆ ಯಾವುದೇ ನ್ಯಾಯಾಂಗ ಕಾರ್ಯವನ್ನು ನಿಯೋಜಿಸಬೇಡಿ ಎಂದು ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ತಿಳಿಸಿತ್ತು. ಆ ಪ್ರಕಾರ ಅವರಿಗೆ ಯಾವುದೇ ಕೆಲವ ವಹಿಸುವುದಿಲ್ಲ.
‘ನ್ಯಾ. ಯಶವಂತ್ ವರ್ಮಾ ಅವರು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರಿಗೆ ಯಾವುದೇ ನ್ಯಾಯಾಂಗ ಕೆಲಸವನ್ನು ನಿಯೋಜಿಸದಂತೆ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ತಿಳಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
2034ರ ಬಳಿಕವಷ್ಟೇ ‘ಏಕ ದೇಶ, ಏಕ ಚುನಾವಣೆ’ ಜಾರಿ: ನಿರ್ಮಲಾ
ಚೆನ್ನೈ: ‘ಒಂದು ರಾಷ್ಟ್ರ, ಒಂದು ಚುನಾವಣೆ’ 2029ರಿಂದಲೇ ಜಾರಿಯಾಗಲಿದೆ ಎಂಬ ಊಹಾಪೋಹ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದು, 2034ರ ನಂತರ ಇದು ಜಾರಿಗೆ ಬರಲಿದೆ. ಮುಂದಿನ ಚುನಾವನೆಯಲ್ಲಿ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಈ ಯೋಜನೆಯನ್ನು ಪರಿಚಯಿಸುತ್ತಿರುವುದು ಪ್ರಧಾನಿ ಮೋದಿಯವರಲ್ಲ. 1960ರಿಂದಲೇ ಇದರ ಚರ್ಚೆ ನಡೆಯುತ್ತಿದೆ. ಈ ಯೋಜನೆಯಿಂದ ದೇಶದ ಆರ್ಥಿಕತೆಗೆ ಅಪಾರ ಲಾಭವಾಗಲಿದೆ. ಆದರೆ ಕೆಲವರು ಅಂಧವಾಗಿ ಇದನ್ನು ವಿರೋಧಿಸುತ್ತಿದ್ದಾರೆ. 2034ರ ನಂತರವೇ ಯೋಜನೆಯನ್ನು ಜಾರಿಗೆ ತರಲಾಗುವುದು’ ಎಂದು ತಿಳಿಸಿದರು.
ಮ.ಪ್ರ.ದಲ್ಲಿ ಗ್ಯಾಂಗ್‌ರೇಪ್: ಕರ್ನಾಟಕ ವ್ಯಕ್ತಿ ಸೇರಿ ಐವರ ಬಂಧನ
ಸಿಧಿ (ಮ.ಪ್ರ): ಕಳೆದ ವರ್ಷದ ಜುಲೈನಲ್ಲಿ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಮತ್ತು ಘಟನೆಯ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೂಲದ ವ್ಯಕ್ತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.ಮಗಳನ್ನು ಮನೆಗೆ ಬಿಡಲು ಬಾಲಕಿ ತಾಯಿ ತನ್ನ ಪರಿಚಯಸ್ಥ ಇಬ್ಬರಲ್ಲಿ ಕೇಳಿದ್ದಳು. ಆದರೆ ಅವರು ಅಪ್ರಾಪ್ತೆಯನ್ನು ಬಮುರಿ ಗ್ರಾಮದಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಅಲ್ಲಿದ್ದ ಐವರು ನಾಲ್ವರು ಸೇರಿ ಅತ್ಯಾಚಾರವೆಸಗಿದ್ದರು.
ಬಂಧನಕ್ಕೊಳಗಾಗಿರುವ ಐವರಲ್ಲಿ, ಮೂವರು ಮಹಾರಾಷ್ಟ್ರ ಮೂಲದವರಾಗಿದ್ದರು ಉಳಿದವರಲ್ಲಿ ಓರ್ವ ಆಂಧ್ರಪ್ರದೇಶ, ಮತ್ತೋರ್ವ ಕರ್ನಾಟಕ ಮೂಲದವರು. ಘಟನೆಯನ್ನು ಆರೋಪಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳ ಮೊಬೈಲ್ ವಶಪಡಿಸಿಕೊಂಡು ತನಿಖೆ ಮಂದುವರೆಸಿದ್ದಾರೆ.