ಖನಿಜಗಳ ಮೇಲಿನ ತೆರಿಗೆ, ರಾಯಲ್ಟಿ ಹೇರುವ ಶಾಸನಾತ್ಮಕ ಅಧಿಕಾರ ರಾಜ್ಯಗಳಿಗೆ ಮಾತ್ರ ಇದೆ ಎಂದು ಇತ್ತೀಚೆಗೆ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ‘ಕೇಂದ್ರ ಸರ್ಕಾರ 2005ರಿಂದ ಈಚೆಗೆ ಸಂಗ್ರಹಿಸಿದ್ದ ತಮ್ಮ ಪಾಲಿನ ತೆರಿಗೆಯನ್ನು ತಮಗೆ ಮರಳಿಸುವಂತೆ ರಾಜ್ಯಗಳು ಕೇಳಬಹುದು’ ಎಂದು ತೀರ್ಪು ನೀಡಿದೆ.
ನವದೆಹಲಿ : ಖನಿಜಗಳ ಮೇಲಿನ ತೆರಿಗೆ ಹಾಗೂ ರಾಯಲ್ಟಿ ಹೇರುವ ಶಾಸನಾತ್ಮಕ ಅಧಿಕಾರ ರಾಜ್ಯಗಳಿಗೆ ಮಾತ್ರ ಇದೆ ಎಂದು ಇತ್ತೀಚೆಗೆ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ, ‘ಕೇಂದ್ರ ಸರ್ಕಾರ 2005ರಿಂದ ಈಚೆಗೆ ಸಂಗ್ರಹಿಸಿದ್ದ ತಮ್ಮ ಪಾಲಿನ ತೆರಿಗೆಯನ್ನು ತಮಗೆ ಮರಳಿಸುವಂತೆ ರಾಜ್ಯಗಳು ಕೇಳಬಹುದು’ ಎಂಬ ಮತ್ತೊಂದು ಮಹತ್ವದ ತೀರ್ಪು ನೀಡಿದೆ.
ಹೀಗಾಗಿ 2005ರ ಬಳಿಕ ಕೇಂದ್ರ ಸರ್ಕಾರ ಅಥವಾ ಅದರ ಅಧೀನದ ಸಂಸ್ಥೆಗಳು ಸಂಗ್ರಹಿಸಿರುವ ತೆರಿಗೆಯನ್ನು ಮರಳಿ ಪಡೆಯಲು ಖನಿಜ ಸಂಪದ್ಭರಿತ ರಾಜ್ಯಗಳಾದ ಕರ್ನಾಟಕ, ಒಡಿಶಾ, ಜಾರ್ಖಂಡ್ ಸೇರಿದಂತೆ ಖನಿಜ ಸಂಪತ್ತು ಹೊಂದಿರುವ ರಾಜ್ಯಗಳಿಗೆ ಅವಕಾಶ ಸಿಕ್ಕಂತಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದ್ದು, ಒಂದೇ ಏಟಿಗೆ ಹಣ ಮರಳಿಸುವುದು ಕೇಂದ್ರ ಸರ್ಕಾರಕ್ಕೆ ಕಷ್ಟ ಆಗುವ ಕಾರಣ 12 ವರ್ಷಗಳ ಕಾಲಾವಕಾಶವನ್ನು ನೀಡಿದೆ. ಅಂದರೆ, ‘2026ರ ಏ.1ರಿಂದ ಆರಂಭವಾಗಿ ನಂತರದ 12 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಸಾವಿರಾರು ಕೋಟಿ ರು. ಹಣ ಮರಳಿಸಬೇಕು’ ಎಂದು ಅದು ತಿಳಿಸಿದೆ.
ಏನಿದು ಪ್ರಕರಣ:?‘ ಖನಿಜಗಳ ಮೇಲಿನ ರಾಯಧನ ಎಂಬುದು ತೆರಿಗೆಯೇ? ಖನಿಜಗಳನ್ನು ಹೊರತೆಗೆಯುವುದಕ್ಕೆ ತೆರಿಗೆ ಹೇರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆಯೇ? ಅಥವಾ ರಾಜ್ಯಗಳೂ ಅದರಲ್ಲಿ ಅಧಿಕಾರ ಹೊಂದಿವೆಯೇ? ಅಥವಾ ತಮ್ಮ ವ್ಯಾಪ್ತಿಯಲ್ಲಿ ಖನಿಜ ಹೊಂದಿರುವ ಭೂಮಿಗಳ ಮೇಲೆ ತೆರಿಗೆ ಹೇರುವ ಅಧಿಕಾರ ರಾಜ್ಯಗಳಿಗೆ ಇದೆಯೇ?’ ಎಂಬುದು ಬಹಳ ಬಿಕ್ಕಟ್ಟಿನ ವಿಷಯವಾಗಿತ್ತು.
ಈ ಕುರಿತು ಕಳೆದ ಜು.25ರಂದು ತೀರ್ಪು ನೀಡಿದ್ದ ನ್ಯಾಯಾಲಯ ‘ಗಣಿಗಳು ಹಾಗೂ ಖನಿಜ ಅಭಿವೃದ್ಧಿ ನಿಯಂತ್ರಣ ಕುರಿತ ಸಂವಿಧಾನದ 1ನೇ ಪಟ್ಟಿಯಲ್ಲಿರುವ 54ನೇ ನಮೂದಿನ ಪ್ರಕಾರ, ಖನಿಜ ಹಕ್ಕಿನ ಮೇಲೆ ತೆರಿಗೆ ಹೇರುವ ಶಾಸನಾತ್ಮಕ ಅಧಿಕಾರ ಸಂಸತ್ತಿಗೆ ಇಲ್ಲ. ರಾಜ್ಯಗಳಿಗೆ ಮಾತ್ರವೇ ಖನಿಜಗಳ ಮೇಲೆ ತೆರಿಗೆ ಹೇರುವ ಅಧಿಕಾರ ಇದೆ. ಆದರೆ, ಖನಿಜ ಹಕ್ಕುಗಳ ಮೇಲೆ ತೆರಿಗೆ ಹೇರುವ ರಾಜ್ಯಗಳ ಅಧಿಕಾರದ ಮೇಲೆ ಯಾವುದೇ ಮಿತಿಯನ್ನು ಹೇರುವ ಶಾಸನಾತ್ಮಕ ಅಧಿಕಾರ ಸಂಸತ್ತಿಗೆ ಇದೆ’ ಎಂದು ಹೇಳಿತ್ತು.
ಈ ಹಿನ್ನೆಲೆಯಲ್ಲಿ ಈವರೆಗೂ ಕೇಂದ್ರ ಸರ್ಕಾರ ಗಣಿ ಮತ್ತು ಖನಿಜಗಳ ಮೇಲೆ ವಿಧಿಸಿರುವ ಸಹಸ್ರಾರು ಕೋಟಿ ರು. ಹಣವನ್ನು ವಸೂಲಿ ಮಾಡಿ ತಮಗೆ ಹಂಚಬೇಕು ಎಂದು ಕೆಲವು ಬಿಜೆಪಿಯೇತರ ಸರ್ಕಾರದ ರಾಜ್ಯಗಳು ಮನವಿ ಮಾಡಿದ್ದವು. ಆದರೆ ‘ಹಳೆಯ ಬಾಕಿ (ಅರಿಅರ್ಸ್) ಪಾವತಿ ಪ್ರಸ್ತಾಪ ಬಿಡಬೇಕು. ಒಂದು ವೇಳೆ ಇಂಥ ಪ್ರಸ್ತಾಪ ಒಪ್ಪಿಕೊಂಡರೆ 1989ರಿಂದ ವಿಧಿಸುತ್ತಿರುವ 70 ಸಾವಿರ ಕೋಟಿ ರು. ತೆರಿಗೆಯನ್ನು ಕೇಂದ್ರ ಸರ್ಕಾರದ ಕಂಪನಿಗಳು ಕಟ್ಟಬೇಕಾಗಿ ಬರುತ್ತದೆ. ಇದರಿಂದ ಅವುಗಳ ಬೊಕ್ಕಸ ಬರಿದಾಗುತ್ತದೆ’ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.
ಈ ಕುರಿತು ಇದೀಗ ತೀರ್ಪು ನೀಡಿರುವ ನ್ಯಾಯಾಲಯ, ‘ರಾಜ್ಯಗಳು ಕೇಂದ್ರದಿಂದ 2005ರ ಏ.1ರ ಬಳಿಕ ವಿಧಿಸಿದ ರಾಯಧನವನ್ನು ಮರಳಿ ಕೇಳಬಹುದು. ಈ ಹಣವನ್ನು ಕೇಂದ್ರ ಸರ್ಕಾರ 2026ರ ಏ.1ರಿಂದ ನಂತರದ 12 ವರ್ಷಗಳಲ್ಲಿ ಹಂತಹಂತವಾಗಿ ಪಾವತಿಸಬೇಕು ಎಂದು ಹೇಳಿದೆ. ಜೊತೆಗೆ ಈ ಹಣಕ್ಕೆ ಕೇಂದ್ರ ಸರ್ಕಾರವಾಗಲೀ ಅಥವಾ ಅದರ ಅಧೀನ ಕಂಪನಿಗಳಾಗಲೀ ಯಾವುದೇ ಬಡ್ಡಿ, ದಂಡ ಕಟ್ಟಬೇಕಿಲ್ಲ ಎಂದು ಹೇಳಿದೆ.
ಏನಿದು ಪ್ರಕರಣ?
- ಖನಿಜಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ಇತ್ತೀಚೆಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್
- ಅದರ ಬೆನ್ನಲ್ಲೇ, ಇಷ್ಟು ವರ್ಷ ಕೇಂದ್ರ ಸರ್ಕಾರ ಸಂಗ್ರಹಿಸಿದ್ದ ತೆರಿಗೆ ಹಣ ಮರಳಿ ಕೊಡಿಸುವಂತೆ ಕೇಳಿದ್ದ ರಾಜ್ಯಗಳು
- ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನಿಂದ ಬುಧವಾರ ರಾಜ್ಯಗಳ ಪರ ಆದೇಶ: ಕೇಂದ್ರ ಸರ್ಕಾರಕ್ಕೆ ದೊಡ್ಡ ಶಾಕ್
- 2026ರ ಏಪ್ರಿಲ್ 1ರಿಂದ ಆರಂಭಿಸಿ 12 ವರ್ಷಗಳ ಅವಧಿಯಲ್ಲಿ ರಾಜ್ಯಗಳಿಗೆ ಹಣ ಮರಳಿಸಲು ಕೇಂದ್ರಕ್ಕೆ ಅವಕಾಶ
- ಸುಪ್ರೀಂಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ಎಷ್ಟು ನಷ್ಟವಾಗಲಿದೆ ಎಂಬ ನಿಖರ ಅಂಕಿಅಂಶ ಇನ್ನೂ ಅಲಭ್ಯ