ಭಾರತದ 3 ಕಳವಳ ಪರಿಹಾರಕುರಿತು ಚೀನಾದಿಂದ ಭರವಸೆ

KannadaprabhaNewsNetwork |  
Published : Aug 20, 2025, 01:30 AM IST
ಮೋದಿ  | Kannada Prabha

ಸಾರಾಂಶ

ಗಲ್ವಾನ್ ಸಂಘರ್ಷದ ಬಳಿಕ ಸಂಪೂರ್ಣ ಹದಗೆಟ್ಟಿದ್ದ ಭಾರತ ಮತ್ತು ಚೀನಾ ಸಂಬಂಧ ಸುಧಾರಿಸುತ್ತಿರುವ ಹೊತ್ತಿನಲ್ಲೇ, ಸೋಮವಾರ ಉಭಯ ದೇಶಗಳ ವಿದೇಶಾಂಗ ಸಚಿವರೊಂದಿಗೆ ನಡೆದ ಸಭೆ ಯಶಸ್ವಿಯಾಗಿದೆ.

ರಸಗೊಬ್ಬರ, ಅಪರೂಪದ ಲೋಹ, ಸುರಂಗ ಯಂತ್ರ ಪೂರೈಕೆ ಭರವಸೆ

ಜೈಶಂಕರ್‌ ಜೊತೆಗಿನ ಭೇಟಿ ವೇಳೆ ಚೀನಾ ವಿದೇಶಾಂಗ ಸಚಿವ ಆಶ್ವಾಸನೆ

ನವದೆಹಲಿ: ಗಲ್ವಾನ್ ಸಂಘರ್ಷದ ಬಳಿಕ ಸಂಪೂರ್ಣ ಹದಗೆಟ್ಟಿದ್ದ ಭಾರತ ಮತ್ತು ಚೀನಾ ಸಂಬಂಧ ಸುಧಾರಿಸುತ್ತಿರುವ ಹೊತ್ತಿನಲ್ಲೇ, ಸೋಮವಾರ ಉಭಯ ದೇಶಗಳ ವಿದೇಶಾಂಗ ಸಚಿವರೊಂದಿಗೆ ನಡೆದ ಸಭೆ ಯಶಸ್ವಿಯಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಚೀನಾದ ವಾಂಗ್‌ ಯಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತಕ್ಕೆ ಲಾಭದಾಯಕವಾದ ಕೆಲ ಹೆಜ್ಜೆಗಳನ್ನು ಇಡಲಾಗಿದೆ.

ಭಾರತಕ್ಕೆ ಅತಿದೊಡ್ಡ ರಸಗೊಬ್ಬರ ರಫ್ತುದಾರನಾಗಿದ್ದ ಚೀನಾ, ಇದೀಗ ಅದರ ಪೂರೈಕೆಯ ನಿಯಮಗಳನ್ನು ಸರಳಿಸಲು ಒಪ್ಪಿಕೊಂಡಿದೆ. ಅಂತೆಯೇ, ಭೂಮಿಯಡಿ ಸಿಗುವ ದುರ್ಲಭ ಖನಿಜ ಮತ್ತು ಸುರಂಗ ಕೊರೆಯುವ ಯಂತ್ರಗಳ ಬೇಡಿಕೆಗೂ ಸ್ಪಂದಿಸಲು ಒಪ್ಪಿಕೊಂಡಿದೆ.

ಭಾರತದ ರೈತರು ಬಳಸುವ ರಸಗೊಬ್ಬರದಲ್ಲಿ ಶೇ.30ರಷ್ಟುಪಾಮದಾಗುತ್ತಿರುವುದು ಚೀನಾದಿಂದ. ಹೀಗಿರುವಾಗ, ಇದರ ರಫ್ತಿನ ಮೇಲೆ ವರ್ಷದ ಹಿಂದೆ ಹೇರಲಾಗಿದ್ದ ನಿರ್ಬಂಧವನ್ನು ಸಡಿಲಿಸಲಾಗಿದೆ. ಅತ್ತ ವಿದ್ಯುತ್‌ ಚಾಲಿತ ವಾಹನಗಳು, ಡ್ರೋನ್‌, ಬ್ಯಾಟರಿ ಸೇರಿದಂತೆ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಬಳಸಲಾಗುವ ಕೆಲ ಉಪಕರಣಗಳ ತಯಾರಿಗೆ ಈ ಅಪರೂಪದ ಖನಿಜಗಳು ಅಗತ್ಯ. ಇದು ಚೀನಾದಲ್ಲಿ ಹೇರಳವಾಗಿದೆ. ಈಗ ಅವುಗಳ ಪೂರೈಕೆಗೆ ಚೀನಾ ಒಪ್ಪಿಕೊಂಡಿರುವುದರಿಂದ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯ ಬಲವರ್ಧನೆಯಾಗಲಿದೆ.

ಅಂತೆಯೇ, ಸುರಂಗ ಕೊರೆಯುವ ಭಾರೀ ಯಂತ್ರವನ್ನೂ ಚೀನಾದಿಂದ ಆಮದು ಮಾಡಿಕೊಳ್ಳಲು ಅನುಕೂಲವಾಗುವ ಕಾರಣ, ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳಲಿವೆ.

ದೋವಲ್‌ ಭೇಟಿ:

2 ದಿನಗಳ ಭಾರತ ಪ್ರವಾಸದಲ್ಲಿರುವ ವಾಂಗ್‌ ಯಿ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆ ಸಭೆ ಬಗ್ಗೆ ಮಾಹಿತಿ ನೀಡಿದ ದೋವಲ್‌, ‘ಕಳೆದ 9 ತಿಂಗಳಿಂದ ವಾಸ್ತವ ಗಡಿ ರೇಖೆ(ಎಲ್‌ಎಸಿ)ಯಲ್ಲಿ ಶಾಂತಿ ಸ್ಥಾಪನೆಯಾಗುತ್ತಿದ್ದು, ಉಭಯ ದೇಶಗಳ ಸಂಬಂಧ ಉತ್ತಮಗೊಳ್ಳುತ್ತಿದೆ. ಆ.31 ಮತ್ತು ಏ.1ರಂದು ಪ್ರಧಾನಿ ಮೋದಿ ಅವರು ಚೀನಾ ಭೇಟಿ ಕೈಗೊಳ್ಳುತ್ತಿರುವ ಹೊತ್ತಿನಲ್ಲಿ ಈ ಭೇಟಿ ಅತಿ ಮಹತ್ವಪೂರ್ಣ’ ಎಂದರು.

PREV

Recommended Stories

ಗುಂಡಿ ಬಿದ್ದ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಇಲ್ಲ: ಸುಪ್ರೀಂ ತೀರ್ಪು
ಆರೋಗ್ಯ, ಜೀವ ವಿಮೆಗೆ ಶೂನ್ಯ ಜಿಎಸ್‌ಟಿಗೆ ಸರ್ಕಾರದ ಒಲವು