ಸೋದರಿ ಮೇಲೆಯೇ 13 ವರ್ಷದ ಬಾಲಕನಿಂದ ಅತ್ಯಾಚಾರ, ಹತ್ಯೆ : ಮುಚ್ಚಿಹಾಕಲು ತಾಯಿಯ ನೆರವು !

KannadaprabhaNewsNetwork | Updated : Jul 28 2024, 04:54 AM IST

ಸಾರಾಂಶ

ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ 13 ವರ್ಷದ ಬಾಲಕ ತನ್ನ 9 ವರ್ಷದ ತಂಗಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಭೀಕರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರೇವಾ(ಮ.ಪ್ರ.): ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ 13 ವರ್ಷದ ಬಾಲಕ ತನ್ನ 9 ವರ್ಷದ ತಂಗಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಭೀಕರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದಕ್ಕಿಂತ ಘೋರವೆಂದರೆ ಈ ಪ್ರಕರಣ ಮುಚ್ಚಿಹಾಕಲು ಬಾಲಕನಿಗೆ ಸ್ವತಃ ಆತನ ತಾಯಿ ಮತ್ತು ಹಿರಿಯ ಸೋದರಿಯೇ ನೆರವು ನೀಡಿದ್ದಾರೆ.

ಘಟನೆ ಬೆಳಕಿಗೆ ಬಂದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜೊತೆಗೆ ತಾಂತ್ರಿಕ ಪುರಾವೆ ಆಧರಿಸಿ 50 ಜನರ ವಿಚಾರಣೆ ನಡೆಸಿದ್ದು, ಆರೋಪಿ, ಆತನ ತಾಯಿ ಹಾಗೂ 17 ಮತ್ತು 18 ವರ್ಷದ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ನಾಪತ್ತೆ?: ಏ24ರಂದು ಬಾಲಕಿಯೊಬ್ಬಳ ಶವ ಪತ್ತೆಯಾಗಿತ್ತು. ಅದಾದ ಬೆನ್ನಲ್ಲೇ ಕಾಣೆಯಾಗಿದ್ದ ತಮ್ಮ ಪುತ್ರಿ ವಿಷಪೂರಿತ ಕೀಟ ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದರು. ಆದರೆ ಬಾಲಕಿ ಶವ ಪರೀಕ್ಷೆ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು ಕಂಡುಬಂದಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬ ಸದಸ್ಯರನ್ನು ಪ್ರಶ್ನಿಸಿದಾಗ, ಘಟನೆ ನಡೆದ ಹಿಂದಿನ ದಿನ ಆಕೆಯ ಸೋದರನೇ ಆಕೆಯ ಪಕ್ಕ ಮಲಗಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನ ಮೊಬೈಲ್‌ ಪರಿಶೀಲಿಸಿದಾಗ ಅದರಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆಯ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆದ ಭೀಕರ ಘಟನೆಯನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಘಟನೆ ನಡೆದಿದ್ದು ಹೇಗೆ?:

ಏ.23ರಂದು ಬಾಲಕ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಳಿಕ ಸೋದರಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆಕೆ ಇದನ್ನು ತನ್ನ ತಂದೆಗೆ ಹೇಳುವುದಾಗಿ ಬೆದರಿಸಿದ ಬಳಿಕ ಬಾಲಕ, ಸೋದರಿಯ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿದ್ದಾನೆ. ಆಕೆ ಪ್ರಜ್ಞೆ ತಪ್ಪಿಬಿದ್ದಿದ್ದಾಳೆ. ಬಳಿಕ ಆರೋಪಿ ತನ್ನ ತಾಯಿ ಮತ್ತು ಇಬ್ಬರು ಹಿರಿಯ ಸೋದರರಿಗೆ ಮಾಹಿತಿ ನೀಡಿದ್ದಾನೆ. ಅವರೆಲ್ಲಾ ಎದ್ದುಬಂದ ವೇಳೆ ವೇಳೆ ಸಂತ್ರಸ್ತ ಬಾಲಕಿಗೆ ಇನ್ನೂ ಜೀವ ಇದ್ದಿದ್ದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲೇ ಆತ ಮತ್ತೊಮ್ಮೆ ಸೋದರಿ ಕತ್ತುಹಿಸುಕಿ ಆಕೆಯನ್ನು ಹತ್ಯೆಗೈದಿದ್ದಾನೆ. ಬಳಿಕ ಏನೂ ಗೊತ್ತಿಲ್ಲದವರಂತೆ ಬಂದು ಮಲಗಿದ್ದಾರೆ.

Share this article