ರಷ್ಯಾ ತೈಲ ಖರೀದಿಯಿಂದ ಭಾರತದ ಬ್ರಾಹ್ಮಣರಿಗೆ ಭಾರೀ ಲಾಭ : ಟ್ರಂಪ್‌ ಆಪ್ತ

KannadaprabhaNewsNetwork |  
Published : Sep 02, 2025, 01:00 AM ISTUpdated : Sep 02, 2025, 05:51 AM IST
Peter Navarro

ಸಾರಾಂಶ

  ಟ್ರಂಪ್‌ರ ವ್ಯಾಪಾರ ನೀತಿ ಸಲಹೆಗಾರ ಪೀಟರ್‌ ನವರೋ ಅವರು ಮತ್ತೆ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಾರಿ ಅವರು ರಷ್ಯಾ ತೈಲ ಖರೀದಿಯಿಂದ ಇಡೀ ದೇಶ ನಷ್ಟ ಅನುಭವಿಸುತ್ತಿದ್ದರೆ, ಬ್ರಾಹ್ಮಣ ರಷ್ಟೇ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದ್ದಾರೆ.

 ನ್ಯೂಯಾರ್ಕ್‌: ರಷ್ಯಾ ತೈಲ ಖರೀದಿ ವಿಚಾರ ಮುಂದಿಟ್ಟುಕೊಂಡು ಅಮೆರಿಕ ಅಧ್ಯಕ್ಷ ಟ್ರಂಪ್‌ರ ವ್ಯಾಪಾರ ನೀತಿ ಸಲಹೆಗಾರ ಪೀಟರ್‌ ನವರೋ ಅವರು ಮತ್ತೆ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಾರಿ ಅವರು ರಷ್ಯಾ ತೈಲ ಖರೀದಿಯಿಂದ ಇಡೀ ದೇಶ ನಷ್ಟ ಅನುಭವಿಸುತ್ತಿದ್ದರೆ, ಬ್ರಾಹ್ಮಣ (ಶ್ರೀಮಂತ ವ್ಯಕ್ತಿಗಳಷ್ಟೇ) ರಷ್ಟೇ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಶಾಂಘೈ ಶೃಂಗದಲ್ಲಿ ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ಪುಟಿನ್‌ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬೆನ್ನಲ್ಲೇ ಇಂಥದ್ದೊಂದು ಹೇಳಿಕೆ ಹೊರಬಿದ್ದಿದೆ. ಈ ನಡುವೆ ಪೀಟರ್‌ ಹೇಳಿಕೆಗೆ ಭಾರತದಲ್ಲಿ ಪಕ್ಷಾತೀತ ಖಂಡನೆ ವ್ಯಕ್ತವಾಗಿದೆ.

ನವರೋ ಹೇಳಿದ್ದೇನು?:

ನರೇಂದ್ರ ಮೋದಿ ಮಹಾನ್‌ ನಾಯಕ. ಭಾರತವು ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಹೀಗಿದ್ದರೂ ಮೋದಿ ಅವರು ಅದು ಹೇಗೆ ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್‌ ಅವರ ಜತೆ ಸೇರುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ. ರಷ್ಯಾ ತೈಲ ವಿಚಾರದಲ್ಲಿ ಭಾರತೀಯರು ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು. ಭಾರತದ ಜನಸಾಮಾನ್ಯರಿಗೆ ನಷ್ಟವಾಗುತ್ತಿದ್ದರೆ, ಬ್ರಾಹ್ಮಣರು ಮಾತ್ರ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾವು ಕಡಿವಾಣ ಹಾಕಬೇಕಿದೆ ಎಂದು ನವರೋ ಹೇಳಿದ್ದಾರೆ.

ವ್ಯಾಪಾರ ಒಪ್ಪಂದ ವಿಚಾರವಾಗಿ ನವಾರೋ ಅವರು ಕಳೆದ ಕೆಲ ದಿನಗಳಿಂದ ಭಾರತ ಹಾಗೂ ಪ್ರಧಾನಿ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಒಮ್ಮೆ ಭಾರತವು ರಷ್ಯಾ ತೈಲವನ್ನು ಬೇರೆ ದೇಶಗಳಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರೆ, ಇನ್ನೊಮ್ಮೆ ಉಕ್ರೇನ್‌ ಯುದ್ಧವನ್ನು ‘ಮೋದಿ ಅವರ ಯುದ್ಧ’ ಎಂದು ಕರೆದಿದ್ದರು.

ಹೇಳಿಕೆಗೆ ಕಿಡಿ:

ಈ ನಡುವೆ ಪೀಟರ್ ನವರೋ ಹೇಳಿಕೆಯನ್ನು ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್‌, ಶಿವಸೇನೆ ಸಂಸದರು ಸೇರಿ ಹಲವರು ಇದು ಜಾತೀಯ, ದುರುದ್ದೇಶದ, ಹಿಂದೂ ವಿರೋಧಿ ಹಾಗೂ ಭಾರತ ವಿರೋಧಿ ಹೇಳಿಕೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ತೀವ್ರ ಅಸಮಾಧಾನ ಹೊರಹಾಕಿದ್ದು, ಇದು ನಾಚಿಗೆಗೇಡಿನ ಮತ್ತು ದುರುದ್ದೇಶದ ಹೇಳಿಕೆ ಎಂದಿದ್ದಾರೆ. ಅಮೆರಿಕದಲ್ಲಿ ಶ್ರೀಮಂತ ವರ್ಗಕ್ಕೆ ಈ ರೀತಿ ಕರೆಯುವ ಪರಿಪಾಠವಿದೆ ಎಂದು ಒಪ್ಪಿಕೊಂಡಿರುವ ಚತುರ್ವೇದಿ ಅ‍ವರು, ಆದರೆ ಇಲ್ಲಿ ಟ್ರಂಪ್‌ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಉದ್ದೇಶಪೂರ್ವಕವಾಗಿ ಈ ಪದ ಬಳಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಕೂಡ ನವರೋ ಹೇಳಿಕೆ ಖಂಡಿಸಿದ್ದಾರೆ. ಅಮೆರಿಕವು ಆ ರೀತಿಯ ಆಧಾರರಹಿತ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರೆ, ತೃಣಮೂಲ ಕಾಂಗ್ರೆಸ್‌ ಸಂಸದೆ ಸಾಗರಿಕಾ ಘೋಶ್‌ ಅವರು, ಅಮೆರಿಕದಲ್ಲಿ ‘ಬೋಸ್ಟನ್‌ ಬ್ರಾಹ್ಮಿನ್‌’ ಎಂಬ ಪದವನ್ನು ಅಮೆರಿಕದ ನವ ಬ್ರಿಟಿಷ್‌ ಶ್ರೀಮಂತರನ್ನು ಕರೆಯಲಾಗುತ್ತಿತ್ತು. ಬ್ರಾಹ್ಮಿನ್‌ ಎಂಬುದು ಇಂಗ್ಲಿಷ್‌ ಮಾತನಾಡುವವರರಲ್ಲಿ ಸಾಮಾಜಿಕ ಅಥವಾ ಆರ್ಥಿಕವಾಗಿ ಉನ್ನತ ವರ್ಗದಲ್ಲಿರುವವರಿಗೆ ಬಳಸುವ ಪದ ಎಂದು ಹೇಳಿಕೊಂಡಿದ್ದಾರೆ.

ಅದೇ ರೀತಿ ಮೋದಿ ಅವರ ಆರ್ಥಿಕ ಸಲಹಾ ಸಮಿತಿ ಸದಸ್ಯ ಸಂಜೀವ್‌ ಸನ್ಯಾಲ್‌, ಈ ಹೇಳಿಕೆಯು ಅಮೆರಿಕದಲ್ಲಿ ಭಾರತ, ಹಿಂದೂಗಳ ಕುರಿತ ಅಭಿಪ್ರಾಯವನ್ನು ಯಾರು ನಿಯಂತ್ರಿಸುತ್ತಾರೆ ಎಂಬುದು ಬಹಿರಂಗಪಡಿಸುತ್ತದೆ. ಬ್ರಾಹ್ಮಿನ್‌ ಎಂಬುದು ಜೇಮ್ಸ್‌ ಮಿಲ್‌ ಕಾಲದ 19ನೇ ಶತಮಾನದ ವಸಾಹತುಶಾಹಿ ವಿಡಂಬನೆ ಎಂದು ಹೇಳಿದ್ದಾರೆ.

ನವರೋ ಹೇಳಿಕೆಗೆ ಸ್ವಾಗತ:

ಈ ನಡುವೆ ನವರೋ ಹೇಳಿಕೆಯನ್ನು ವಿವಾದಿತ ಕಾಂಗ್ರೆಸ್‌ ನಾಯಕ ಉದಿತ್‌ ರಾಜ್ ಸಮರ್ಥಿಸಿಕೊಂಡಿದ್ದಾರೆ.‘

ನವರೋ ಅವರ ಹೇಳಿಕೆಗೆ ನನ್ನ ಸಹಮತ ಇದೆ. ಭಾರತದಲ್ಲಿ ಕಾರ್ಪೊರೇಟ್‌ ಕಂಪನಿಗಳಲ್ಲಿ ಹೆಚ್ಚಿನವು ಮೇಲ್ವರ್ಗದವರಿಂದ ನಡೆಸಲ್ಪಡುತ್ತವೆ. ಅವರು ರಷ್ಯಾದಿಂದ ತೈಲ ಖರೀದಿ ಮಾಡಿ ಸಂಸ್ಕರಿಸುತ್ತಾರೆ. ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಜನಸಾಮಾನ್ಯ ಭಾರತೀಯರಿಗೆ ಇದರಿಂದ ಯಾವುದೇ ಲಾಭ ಆಗುತ್ತಿಲ್ಲ ಎಂದು ಉದಿತ್‌ ರಾಜ್‌ ಹೇಳಿದ್ದಾರೆ.

PREV
Read more Articles on

Recommended Stories

ಮೋದಿ-ಪುಟಿನ್‌ ಎದುರು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಮೂಕ ಪ್ರೇಕ್ಷಕ
ಅಮೆರಿಕ ಬೆದರಿಕೆ ವರ್ತನೆಗೆ ಚೀನಾ ಖಂಡನೆ