ನವದೆಹಲಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಅತ್ಯಾಧುನಿಕ ಸೂಪರ್‌ಸಾನಿಕ್ ಕ್ಷಿಪಣಿಯಾದ ಬ್ರಹ್ಮೋಸ್ ಅನ್ನು ಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಭಾರತ ಬಳಸಿದೆ ಎಂಬ ಮಾಹಿತಿ ಹೊರಬಿದ್ದಿದೆ. 2001ರಲ್ಲಿ ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ನಡೆದು, 2005ರಲ್ಲೇ ಅದನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತಾದರೂ, ಅದನ್ನು ಯುದ್ಧವೊಂದರಲ್ಲಿ ಬಳಸಿದ್ದು ಇದೇ ಮೊದಲು.
ವಿಶ್ವದ ಯಾವುದೇ ದೇಶದ ರಾಡಾರ್‌ಗಳ ಕಣ್ತಪ್ಪಿಸುವ ಈ ‘ಸ್ಟೆಲ್ತ್’ ಕ್ಷಿಪಣಿ ಏಕಕಾಲಕ್ಕೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಬಲ್ಲದಾಗಿದ್ದು, ಇದನ್ನು ಬಳಸಿಯೇ ಭಾರತೀಯ ಸೇನೆ ಗುರುವಾರ ರಾತ್ರಿ ಪಾಕಿಸ್ತಾನದ 8 ವಾಯುನೆಲೆ, ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಕೇಂದ್ರ ಕಚೇರಿ ಸೇರಿದಂತೆ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ ಭೀಕರ ದಾಳಿ ನಡೆಸಿದೆ. ಇದರ ತೀವ್ರತೆಗೆ ಪಾಕಿಸ್ತಾನದ ಹಲವು ವಾಯುನೆಲೆಗಳು ಛಿದ್ರಗೊಂಡಿವೆ ಎಂದು ಮೂಲಗಳು ಹೇಳಿವೆ.
ಭಾರತ ಸರ್ಕಾರ ಅಥವಾ ಭಾರತೀಯ ಸೇನೆ ಬ್ರಹ್ಮೋಸ್ ಬಳಕೆ ಖಚಿತಪಡಿಸಿಲ್ಲವಾದರೂ, ದಾಳಿ ಸ್ಥಳದಲ್ಲಿ ಸಿಕ್ಕ ಅವಶೇಷಗಳು ಇದನ್ನು ಖಚಿತಪಡಿಸಿವೆ. ಮತ್ತೊಂದೆಡೆ ಭಾನುವಾರ ಬ್ರಹ್ಮೋಸ್ ಹೊಸ ಉತ್ಪಾದನಾ ಘಟಕ ಆರಂಭವಾದ ವೆಳೆ ಮಾತನಾಡಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬ್ರಹ್ಮೋಸ್ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಪಾಕಿಸ್ತಾನವನ್ನು ಕೇಳಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇದನ್ನು ಒಪ್ಪಿದ್ದಾರೆ.
ಯಾವ ಪ್ರದೇಶಗಳ ಮೇಲೆ ದಾಳಿ?:
ರಫಿಕಿ, ಮುರಿದ್, ಚಕ್ಲಾಲಾ, ರಹೀಂ ಯಾರ್ ಖಾನ್, ಸುಕ್ಕೂರ್, ಚುನಿಯನ್, ಸ್ಕರ್ದು, ಜಕೋದಾಬಾದ್ ವಾಯುನೆಲೆ, ಪಸ್ರೂರ್‌ನಲ್ಲಿರುವ ರೇಡಾರ್ ಕೇಂದ್ರ ಮತ್ತು ಸಿಯಾಲ್‌ಕೋಟ್‌ನ ವೈಮಾನಿಕ ನೆಲೆ ಮೇಲೆ ದಾಳಿಗೆ ಬ್ರಹ್ಮೋಸ್ ಬಳಸಿರುವ ಸಾಧ್ಯತೆ ಇದೆ.
--ಬ್ರಹ್ಮೋಸ್ ಸಾಮರ್ಥ್ಯ
800 ಕಿ.ಮೀ: ಕ್ಷಿಪಣಿಯ ಸಂಚಾರ ಸಾಮರ್ಥ್ಯ
300 ಕೆಜಿ: ಕ್ಷಿಪಣಿ ಹೊತ್ತೊಯ್ಯಬಲ್ಲ ಸಿಡಿತಲೆ ತೂಕ
35 ಕೋಟಿ: ಒಂದು ಬ್ರಹ್ಮೋಸ್ ಕ್ಷಿಪಣಿ ಅಂದಾಜು ವೆಚ್ಚ
4 ಮಾದರಿಭೂಮಿ, ಆಗಸ, ಹಡಗು, ಸಬ್‌ಮರೀನ್‌ನಿಂದ ಹಾರಿಸಬಹುದು
ಬ್ರಹ್ಮೋಸ್ ಏಕೆ?- ಇದೊಂದು ಸ್ಟೆಲ್ತ್ ಕ್ಷಿಪಣಿ. ಅಂದರೆ ಶತ್ರು ದೇಶದ ರಾಡಾರ್ ಕಣ್ತಪ್ಪಿಸಿ ದೇಶದೊಳಗೆ ನುಗ್ಗಿ ದಾಳಿ ನಡೆಸಬಲ್ಲದು- ಇದನ್ನು ಪತ್ತೆ ಹಚ್ಚಲು ಅಥವಾ ತಡೆಗಟ್ಟಲು ವಿಶ್ವದ ಯಾವುದೇ ರಾಡರ್, ವಾಯುರಕ್ಷಣಾ ವ್ಯವಸ್ಥೆಗೂ ಅಸಾಧ್ಯ- ಬ್ರಹ್ಮೋಸ್ ಬಳಸಿ ಅತ್ಯಂತ ನಿಖರ ಪ್ರದೇಶಗಳ ಮೇಲೆ ದಾಳಿ ಸಾಧ್ಯ. ಜನರಿಗೆ ಹಾನಿ ತಡೆಯಲು ಇದರ ಬಳಕೆ- ಈ ಕ್ಷಿಪಣಿ ಶಬ್ದಕ್ಕಿಂತ 2.8 ಪಟ್ಟು ವೇಗದಲ್ಲಿ 290-800 ಕಿ.ಮೀ ದೂರಸಾಗಬಲ್ಲದು. ಒಳ ಪ್ರದೇಶಗಳ ದಾಳಿಗೆ ಸೂಕ್ತ- ಒಮ್ಮೆ ಗುರಿ ತೋರಿಸಿ ಬಿಟ್ಟರೆ ತಾನೇ ಹುಡುಕಿಕೊಂಡು ಹೋಗಿ ದಾಳಿ ನಡೆಸಬಲ್ಲ ಸಾಮರ್ಥ್ಯ ಇದಕ್ಕಿದೆ- ಅತ್ಯಂತ ಕೆಳಮಟ್ಟದಲ್ಲಿ ಸಾಗುವ, ಅಗತ್ಯವಿದ್ದರೆ ಬಹುಎತ್ತರದಲ್ಲೂ ಹಾರಿ ಗುರಿಯ ಮೇಲೆ ದಾಳಿಯ ಅಪಾರ ಶಕ್ತಿ
ಬ್ರಹ್ಮೋಸ್ ಕ್ಷಿಪಣಿ ಪತ್ತೆ, ಧ್ವಂಸದ ಶಕ್ತಿ ವಿಶ್ವದ ಯಾವ ದೇಶಕ್ಕೂ ಇಲ್ಲ
ನವದೆಹಲಿ: ‘ಆಪರೇಷನ್ ಸಿಂದೂರ’ ವೇಳೆ ಪಾಕಿಸ್ತಾನದ ಮೇಲೆ ಬಳಸಲಾದ ಬ್ರಹ್ಮೋಸ್ ಕ್ಷಿಪಣಿಯನ್ನು ದಾಳಿ ವೇಳೆ ಪತ್ತೆ ಮಾಡುವ ಮತ್ತು ಅದನ್ನು ಹೊಡೆದುರುಳಿಸುವ ಸಾಮರ್ಥ್ಯ ವಿಶ್ವದ ಯಾವುದೇ ರಾಡಾರ್ ಮತ್ತು ಯಾವುದೇ ವಾಯುರಕ್ಷಣಾ ವ್ಯವಸ್ಥೆಗೂ ಇಲ್ಲ. ಅಷ್ಟೇ ಏಕೆ ರಷ್ಯಾದಿಂದ ಭಾರತ ಖರೀದಿಸಿರುವ ಎಸ್ 400 ಟ್ರಯಂಫ್ ವಾಯುರಕ್ಷಣಾ ವ್ಯವಸ್ಥೆಗೆ ಕೂಡ ಭಾರತ- ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿ ಪತ್ತೆ ಮತ್ತು ಧ್ವಂಸ ಸಾಮರ್ಥ್ಯ ಇಲ್ಲ ಎಂಬುದು ರಕ್ಷಣಾ ತಜ್ಞರ ಅಭಿಪ್ರಾಯ.