ತೆರಿಗೆ ಕಡಿತಕ್ಕೆ ಪ್ರಧಾನಿ ಮೋದಿ ಅವರ ಪೂರ್ಣ ಬೆಂಬಲ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌

KannadaprabhaNewsNetwork |  
Published : Feb 02, 2025, 11:47 PM ISTUpdated : Feb 03, 2025, 04:52 AM IST
ನಿರ್ಮಲಾ | Kannada Prabha

ಸಾರಾಂಶ

ಇದು ''ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ''ದ ಬಜೆಟ್‌. ಜನರು ಬಯಸಿದ ಬಜೆಟ್‌! ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಕೇಂದ್ರ ಬಜೆಟ್‌ ಅನ್ನು ಬಣ್ಣಿಸಿದ್ದು ಹೀಗೆ.

ನವದೆಹಲಿ: ಇದು ''ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ''ದ ಬಜೆಟ್‌. ಜನರು ಬಯಸಿದ ಬಜೆಟ್‌!

ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಕೇಂದ್ರ ಬಜೆಟ್‌ ಅನ್ನು ಬಣ್ಣಿಸಿದ್ದು ಹೀಗೆ.

ಬಜೆಟ್‌ ವಿಚಾರವಾಗಿ ಭಾನುವಾರ ನೀಡಿದ ಸಂದರ್ಶನವೊಂದರಲ್ಲಿ ಅವರು, ನಾವು ಮಧ್ಯಮವರ್ಗದವರ ಧ್ವನಿ ಆಲಿಸಿದ್ದೇವೆ ಎಂದರು.

ಮಧ್ಯಮವರ್ಗಕ್ಕೆ ಆದಾಯ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ಕಡಿತ ಮಾಡುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ತಕ್ಷಣ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಆದರೆ, ಈ ವಿಚಾರದಲ್ಲಿ ಅಧಿಕಾರಿ ವರ್ಗವನ್ನು ಒಪ್ಪಿಸಲು ಮಾತ್ರ ಕೆಲ ಸಮಯಹಿಡಿಯಿತು ಎಂದು ಹೇಳಿದರು.

ನಿರ್ವಂಚನೆಯಿಂದ ತೆರಿಗೆ ಪಾವತಿಸಿದ ಹೊರತಾಗಿಯೂ ತಮ್ಮ ಆಕಾಂಕ್ಷೆಗಳು ಈಡೇರದ ಕುರಿತು ಮಧ್ಯಮವರ್ಗದವರು ದೂರುತ್ತಿದ್ದರು. ಕಳೆದ ಜುಲೈ ಬಜೆಟ್‌ ಬಳಿಕ ಮಧ್ಯಮವರ್ಗದಿಂದ ಈ ಅಪಸ್ವರ ಕೇಳಿಬಂದಿತ್ತು. ನಿಷ್ಠೆಯಿಂದ ತೆರಿಗೆ ಪಾವತಿಸಿದರೂ ನಾವು ಎದುರಿಸುತ್ತಿರುವ ಸಮಸ್ಯೆಗೆ ಮಾತ್ರ ಪರಿಹಾರ ಸಿಗುತ್ತಿಲ್ಲ ಎಂಬ ಅಸಮಾಧಾನ ಅವರಲ್ಲಿತ್ತು.

ಈ ವಿಚಾರವನ್ನು ಪ್ರಧಾನಿ ಮೋದಿ ಅವರ ಜತೆಗೂ ನಾನು ಚರ್ಚಿಸಿದ್ದೆ. ಆಗ ಅವರು ನನಗೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿರ್ದಿಷ್ಟ ಜವಾಬ್ದಾರಿ ನೀಡಿದ್ದರು. ಅಂಕಿ-ಸಂಖ್ಯೆಗಳೆಲ್ಲ ಹೊಂದಾಣಿಕೆಯಾದ ಮೇಲೆ ಪ್ರಧಾನಿ ಅವರ ಮುಂದೆ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸುವ ಪ್ರಸ್ತಾಪ ಇಟ್ಟೆವು. ಅವರು ತಕ್ಷಣ ಒಪ್ಪಿಗೆ ನೀಡಿದರು. ಅವರ ಮಾರ್ಗದರ್ಶನದಂತೆ ಈ ಬಾರಿಯ ಬಜೆಟ್‌ ಮಂಡಿಸಲಾಯಿತು ಎಂದು ವಿತ್ತ ಸಚಿವೆ ಹೇಳಿದರು.

ನಾವು ಅವರ ಧ್ವನಿಯನ್ನು ಆಲಿಸಿದೆವು. ಮಧ್ಯಮವರ್ಗದ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸುವ ನಿರ್ಧಾರಕ್ಕೆ ಮೋದಿ ತಕ್ಷಣಕ್ಕೆ ಒಪ್ಪಿಕೊಂಡರು. ಯಾಕೆಂದರೆ ಮಧ್ಯಮವರ್ಗಕ್ಕೆ ಏನಾದರೂ ಮಾಡಬೇಕೆಂಬ ವಿಚಾರದಲ್ಲಿ ಅವರು ಸ್ಪಷ್ಟವಾಗಿದ್ದರು. ಆದರೆ ಸಿಬಿಡಿಟಿ ಅಧಿಕಾರಿಗಳನ್ನು ಒಪ್ಪಿಸುವುದು ಮಾತ್ರ ಸ್ವಲ್ಪ ವಿಳಂಬವಾಯಿತು. ಯಾಕೆಂದರೆ ಅವರಿಗೆ ಆದಾಯ ಸೃಷ್ಟಿಯ ಭರವಸೆ ಬೇಕಿತ್ತು. ಹಾಗಾಗಿ ಅವರು ಕಾಲಕಾಲಕ್ಕೆ ತೆರಿಗೆ ಮಿತಿ ಹೆಚ್ಚಳ ಕುರಿತ ನಿರ್ಧಾರ ವಿಚಾರವಾಗಿ ಪ್ರಶ್ನಿಸುತ್ತಿದ್ದರು. ಕೊನೆಗೆ ಎಲ್ಲರೂ ಈ ನಿರ್ಧಾರಕ್ಕೆ ಒಪ್ಪಿಕೊಂಡರು ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

ರುಪಾಯಿ ಕುಸಿತವಾಗಿದ್ದು ಡಾಲರ್‌ ಎದುರು ಮಾತ್ರ

ಭಾರತದ ಕರೆನ್ಸಿಯಾದ ರುಪಾಯಿ ಕುಸಿತದ ಕುರಿತು ಕೇಳಿ ಬರುತ್ತಿರುವ ಟೀಕೆಗಳಿಗೆ ನಿರ್ಮಲಾ ಸೀತಾರಾಮನ್‌ ಅವರು ತಿರುಗೇಟು ನೀಡಿದ್ದಾರೆ.

ಡಾಲರ್‌ ಬಲಿಷ್ಠವಾಗುತ್ತಿರುವ ಕಾರಣ ಅದರ ಎದುರು ರುಪಾಯಿ ಕುಸಿಯುತ್ತಿದೆ ಅಷ್ಟೆ. ಆದರೆ ಬಲಿಷ್ಠ ಮ್ಯಾಕ್ರೋ ಆರ್ಥಿಕ ಮೂಲ ಅಂಶಗಳಿಂದಾಗಿ ಉಳಿದ ಎಲ್ಲ ಕರೆನ್ಸಿಗಳ ಎದುರು ರುಪಾಯಿ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಡಾಲರ್‌ ಎದುರು ರುಪಾಯಿ ಮೌಲ್ಯ ಶೇ.3ರಷ್ಟು ಕುಸಿದಿರುವುದು ಕಳವಳಕಾರಿ ವಿಚಾರ. ಯಾಕೆಂದರೆ ಇದು ಆಮದನ್ನು ದುಬಾರಿಗೊಳಿಸುತ್ತದೆ. ಆದರೆ ರುಪಾಯಿಯು ಸಂಪೂರ್ಣವಾಗಿ ದುರ್ಬಲಗೊಂಡಿದೆ ಎಂಬ ಟೀಕೆಗಳನ್ನು ತಿರಸ್ಕರಿಸಿದರು. ನಮ್ಮ ಮ್ಯಾಕ್ರೋ ಆರ್ಥಿಕ ಮೂಲಭೂತ ಅಂಶಗಳು ಬಲಿಷ್ಠವಾಗಿವೆ. ಒಂದು ವೇಳೆ ಈ ಮೂಲಭೂತ ಅಂಶಗಳು ದುರ್ಬಲವಾಗಿದ್ದರೆ ಉಳಿದ ಕರೆನ್ಸಿಗಳ ಎದುರು ರುಪಾಯಿ ಸ್ಥಿರವಾಗಿರುತ್ತಿರಲಿಲ್ಲ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ