ಬೇಕೆಂದೇ ಜನಪ್ರಿಯ ಘೋಷಣೆಗಳ ಕೈ ಬಿಟ್ಟೆ : ಮೋದಿ ನೇರಮಾತು

KannadaprabhaNewsNetwork |  
Published : Feb 16, 2026, 04:00 AM ISTUpdated : Feb 16, 2026, 04:15 AM IST
Narendra Modi

ಸಾರಾಂಶ

 ಬಜೆಟ್‌ನಲ್ಲಿ ಜನಪ್ರಿಯ ಘೋಷಣೆ ಮಾಡಲಿಲ್ಲ. ಬದಲಿಗೆ ನಮ್ಮ ಗಮನ ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಬೆಳವಣಿಗೆಗೆ ಮೂಲಸೌಕರ್ಯ ಅಭಿವೃದ್ಧಿಯತ್ತ ಕೇಂದ್ರೀಕೃತವಾಗಿತ್ತು. ಇದು ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣದ ಬುನಾದಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

 ನವದೆಹಲಿ: ‘ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಜನಪ್ರಿಯ ಘೋಷಣೆಗಳನ್ನು ಮಾಡಲಿಲ್ಲ. ಬದಲಿಗೆ ನಮ್ಮ ಗಮನ ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಬೆಳವಣಿಗೆಗೆ ಮೂಲಸೌಕರ್ಯ ಅಭಿವೃದ್ಧಿಯತ್ತ ಕೇಂದ್ರೀಕೃತವಾಗಿತ್ತು. ಇದು ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣದ ಬುನಾದಿಯಾಗಿದೆ. ಇದು ನಮ್ಮ ಆಡಳಿತ ಶೈಲಿ ಮತ್ತು ಆದ್ಯತೆಗಳ ಪ್ರತೀಕ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

‘ಪಿಟಿಐ’ ಸುದ್ದಿಸಂಸ್ಥೆಗೆ ಭಾನುವಾರ ವಿಶೇಷ ಸಂದರ್ಶನ ನೀಡಿರುವ ಪ್ರಧಾನಿ ಅದರಲ್ಲಿ, ಇತ್ತೀಚಿಗೆ ಮಂಡಿಸಿದ ಬಜೆಟ್‌ನ ಉದ್ದೇಶ ಮತ್ತು ಗುರಿಯ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಇದರ ಜೊತೆಗೆ ಅಮೆರಿಕ ಸೇರಿ ವಿವಿಧ ದೇಶಗಳ ಜೊತೆ ಮಾಡಿಕೊಂಡ ವ್ಯಾಪಾರ ಒಪ್ಪಂದ, ಈ ಹಿಂದೆ ಇಂಥ ಒಪ್ಪಂದ ಆಗದ್ದಕ್ಕೆ ಯುಪಿಎ ಸರ್ಕಾರದ ವೈಫಲ್ಯ, ದೇಶದ ರಕ್ಷಣಾ ವಲಯದ ಸುಧಾರಣೆ, ವಿಕಸಿತ ಭಾರತ ನಿರ್ಮಾಣದಲ್ಲಿ ಖಾಸಗಿ ವಲಯ ಮತ್ತು ಮಹಿಳೆಯರ ಪಾತ್ರ ಮೊದಲಾದ ವಿಷಯಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.

ಅಲ್ಲದೆ, ‘ದೇಶವನ್ನು ಮುನ್ನಡೆಸುವ ವಿಷಯದಲ್ಲಿ ಇದುವರೆಗೂ ನಾನು ಮಾಡಿದ ಕೆಲಸಗಳು ನನಗೆ ತೃಪ್ತಿ ಮಾಡಿಲ್ಲ. ನನಗೆ ತೃಪ್ತಿ ಎಂಬುದೇ ಇಲ್ಲ’ ಎಂದಿದ್ದಾರೆ.

ಈ ನಡುವೆ ಸಂದರ್ಶನದ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್‌, ‘ಮೋದಿ ಅವರು ಸಂದರ್ಶನ ನೀಡಲಿಲ್ಲ. ಬದಲಿಗೆ ಹತಾಶೆ, ಎಚ್ಚರಿಕೆಯಿಂದ ನೀಡಿದ ಪಿಆರ್‌ ತಂತ್ರವಾಗಿತ್ತು’ ಎಂದಿದೆ.

ಬಜೆಟ್‌ ಗುರಿ:

‘2026ರ ಬಜೆಟ್‌ ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ ಎಂಬಂತೆ ಆಕರ್ಷಕವಾಗಿ ಇರಲಿಲ್ಲ. ಬದಲಿಗೆ, 2047ರ ಹೊತ್ತಿಗೆ ವಿಕಸಿತ ಭಾರತವಾಗಲು ಸಿದ್ಧ ಎಂಬುದನ್ನು ತೋರಿಸುತ್ತದೆ. ಬಂಡವಾಳ ವೆಚ್ಚವು ನಮ್ಮ ಸರ್ಕಾರದ ವಿಶೇಷತೆಯಾಗಿದೆ. ಇದು, ಉತ್ಪಾದಕತೆ, ಉದ್ಯೋಗ ಮತ್ತು ಭವಿಷ್ಯದ ಆರ್ಥಿಕ ಸಾಮರ್ಥ್ಯವನ್ನು ಸೃಷ್ಟಿಸುವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಪ್ರಜ್ಞಾಪೂರ್ವಕ ಕಾರ್ಯತಂತ್ರದ ಆಯ್ಕೆಯನ್ನು ಪ್ರತಿಬಿಂಬಿಸುತ್ತದೆ. ಜನರ ಜೀವನ ಮಟ್ಟ ಸುಧಾರಣೆ, ಯುವಕರಿಗಾಗಿ ಉದ್ಯೋಗ ಸೃಷ್ಟಿ ನಮ್ಮ ಪ್ರಮುಖ ಗುರಿ’ ಎಂದರು. ಜತೆಗೆ, ‘ಈ ಬಜೆಟ್‌ನಲ್ಲಿ 2014ರಿಂದ ಗಳಿಸಿದ ಲಾಭಗಳನ್ನು ಕ್ರೋಡೀಕರಿಸಿ, ಅದರ ಆಧಾರದಲ್ಲಿ ಮುಂದಿನ ಕಾಲು ಶತಮಾನಕ್ಕೆ ವೇಗವನ್ನು ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

ಮೂಲಸೌಕರ್ಯಗಳ ಬಗ್ಗೆ ವಿವರಿಸುತ್ತಾ, ‘ಇಷ್ಟು ಕಾಲ ಅವುಗಳ ಗುಣಮಟ್ಟವನ್ನು ಕಡೆಗಣಿಸಲಾಗಿತ್ತು. ಆದರೆ ನಾವೀಗ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುತ್ತಾ, ಮುಂದಿನ ಪೀಳಿಗೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ. ಹೈ-ಸ್ಪೀಡ್‌ ಸಂಪರ್ಕ, ಸರಕು ಸಾಗಣೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಆದ್ಯತೆಯಾಗಿಟ್ಟುಕೊಂಡು ರೈಲ್ವೆ ಇಲಾಖೆಗೆ 3 ಲಕ್ಷ ಕೋಟಿ ರು. ಮೀಸಲಿಡಲಾಗಿದೆ. ಕರ್ನಾಟಕದ ಸೇರಿ ಇತರೆ ರಾಜ್ಯಗಳಿಗೆ ಉಪಯುಕ್ತವಾಗುವಂತೆ 7 ಹೈಸ್ಪೀಡ್‌ ರೈಲು ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು. ಕಳೆದ ದಶಕಕ್ಕೆ ಹೋಲಿಸಿದರೆ, ರಾಷ್ಟ್ರೀಯ ಹೆದ್ದಾರಿಗಳಿಗಾಗಿ ಎತ್ತಿಡಲಾಗಿರುವ ಮೊತ್ತದಲ್ಲಿ ಶೇ.500ರಷ್ಟು ಏರಿಕೆಯಾಗಿದೆ’ ಎಂದು ಮೋದಿ ಹೇಳಿದರು.

3 ಆದ್ಯತೆ:

ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳು ಜನರ ಜೀವನ ಗುಣಮಟ್ಟ ಸುಧಾರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿವೆ ಎಂದಿರುವ ಪ್ರಧಾನಿ ಮೋದಿ, ರಚನಾತ್ಮಕ ಸುಧಾರಣೆ, ಇನ್ನಷ್ಟು ಆಳವಾದ ನಾವೀನ್ಯತೆ ಮತ್ತು ಮತ್ತು ಆಡಳಿತವನ್ನು ಮತ್ತಷ್ಟು ಸರಳಗೊಳಿಸುವುದು ಮುಂದಿನ ದಶಕದಲ್ಲಿ ಸರ್ಕಾರದ ಆದ್ಯತೆಯಾಗಿರಲಿದೆ ಎಂದರು.

ರಕ್ಷಣಾ ಸಾಮರ್ಥ್ಯಕ್ಕೆ ಸಿಂದೂರ ಉದಾಹರಣೆ:

ದೇಶದ ರಕ್ಷಣಾ ವಲಯವು ದಶಕಗಳ ಕಾಲ ನಡೆಸಿದ ಸುಧಾರಣೆಯು ಆಪರೇಷನ್‌ ಸಿಂದೂರದ ಮೂಲಕ ಫಲ ನೀಡಿತು. ಭಾರತ ಭದ್ರತಾ ಸವಾಲುಗಳನ್ನು ಎದುರಿಸಲು ಎಲ್ಲ ಪರಿಸ್ಥಿತಿಯಲ್ಲಿಯೂ ಸಿದ್ಧವಾಗಿರಬೇಕು. ಕಳೆದ 11 ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಈ ವಲಯದಲ್ಲಿ ಆಧುನೀಕರಣ ಮತ್ತು ಸ್ವಾವಲಂಬನೆಯ ಮೇಲೆ ಕೆಲಸ ಮಾಡುತ್ತಿದೆ. ಈ ಸುಧಾರಣೆಗಳ ಫಲ ಆಪರೇಷನ್‌ ಸಿಂದೂರ ಸಂದರ್ಭದಲ್ಲಿ ಫಲ ನೀಡಿತು ಎಂದು ಮೋದಿ ಹೇಳಿದರು.

ಡೀಲ್‌ ವಿಳಂಬಕ್ಕೆ ಯುಪಿಎ ಕಾರಣ:

ಯುಪಿಎ ಸರ್ಕಾರದ ಆರ್ಥಿಕ ದುರಾಡಳಿತದ ಕಾರಣದಿಂದ ವಿವಿಧ ದೇಶಗಳ ನಡುವೆ ವ್ಯಾಪಾರ ಒಪ್ಪಂದ ನಡೆಯುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದು ಮೋದಿ ಯುಪಿಎ ಅವಧಿಯ ವ್ಯಾಪಾರ ಮಾತುಕತೆಗಳನ್ನು ಟೀಕಿಸಿದರು.

ಭಾರತ ಇದೀಗ ಹಲವು ದೇಶಗಳ ಜೊತೆಗೆ ಮಾಡಿಕೊಂಡ ವ್ಯಾಪಾರ ಒಪ್ಪಂದಗಳು ಎಂಎಸ್‌ಎಂಇಗಳು ವಿಶೇಷವಾಗಿ ಕಾರ್ಮಿಕ ವಲಯಗಳಿಗೆ ಶೂನ್ಯ ತೆರಿಗೆ, ಕಡಿಮೆ ಸುಂಕದ ಮುಕ್ತ ಅವಕಾಶ ನೀಡಿದೆ. ಯುಪಿಎ ಅವಧಿಯಲ್ಲಿ ಕೆಲವು ವ್ಯಾಪಾರ ಒಪ್ಪಂದ ಮಾಡಲು ಪ್ರಯತ್ನಿಸಿದರು. ಆದರೆ ದೇಶದ ಅರ್ಥ ವ್ಯವಸ್ಥೆ ಅನಿಶ್ಚಿತತೆಯಿಂದ ಕೂಡಿತ್ತು. ಮುಕ್ತ ಮಾತುಕತೆಗೆ ಅವಕಾಶ ಸೃಷ್ಟಿಸಲಿಲ್ಲ. ಇದರಿಂದ ಮಾತುಕತೆಗಳು ಪ್ರಾರಂಭವಾಗಿ ನಂತರ ಮುರಿದು ಬೀಳುತ್ತಿದ್ದವು ಎಂದರು.

ಖಾಸಗಿ ವಲಯಕ್ಕೆ ಮನ್ನಣೆ:

‘ಇಷ್ಟು ವರ್ಷ ಉತ್ಪಾದನಾ ಕ್ಷೇತ್ರದಲ್ಲಿದ್ದ ಅಸಮಾನತೆಗಳನ್ನು ಸರಿದೂಗಿಸಲು ನಮ್ಮ ಸರ್ಕಾರ ಸಾಕಷ್ಟು ಹೂಡಿಕೆ ಮಾಡಿದೆ. ಇನ್ನೇನಿದ್ದರೂ ಇದು ಖಾಸಗಿ ವಲಯದ ಕೆಲಸ. ಅವರು ನಾವೀನ್ಯತೆ ಆಧರಿತ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಬೆಳವಣಿಗೆಯನ್ನು ಸಾಧಿಸುವ ಸಲುವಾಗಿ ಧೈರ್ಯದಿಂದ ಹೂಡಿಕೆ ಮಾಡಲು ಮುಂದಾಗಬೇಕು’ ಎಂದು ಮೋದಿ ಕರೆ ನೀಡಿದರು.

ಮಹಿಳೆಯರದ್ದೇ ಪ್ರಮುಖ ಪಾತ್ರ:

ವಿಕಸಿತ ಭಾರತ ನಿರ್ಮಾಣದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ಅವರನ್ನು ಸಬಲೀಕರಣಗೊಳಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ವಲಯಗಳಲ್ಲಿ ಮಹಿಳೆಯರ ಸಾಧನೆ ದೇಶದ ಪಾಲಿಗೆ ಹೆಮ್ಮೆಯ ವಿಷಯ. ಅದು ಬಾಹ್ಯಾಕಾಶವಾಗಿರಬಹುದು ಅಥವಾ ಸ್ಟಾರ್ಟಪ್‌ ವಲಯವೇ ಇರಬಹುದು. ಎಲ್ಲೆಡೆಯೂ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ ಎಂದರು.

ನನಗೆಂದೂ ತೃಪ್ತಿ ಇಲ್ಲ:

ತಮ್ಮ ಕಾರ್ಯವೈಖರಿಯ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ‘ನಾನು ಎಂದೂ ಸಂಪೂರ್ಣ ತೃಪ್ತನಾಗುವುದೇ ಇಲ್ಲ. ಇನ್ನೂ ಹೆಚ್ಚು ಸಾಧಿಸುವ ಮತ್ತು ದೇಶವನ್ನು ಮುನ್ನಡೆಸುವ ತೀವ್ರ ಬಯಕೆ ನನ್ನಲ್ಲಿದೆ. ಈ ನಿಟ್ಟಿನಲ್ಲಿ ಇಷ್ಟು ಕಾಲ ಕೆಲಸ ಮಾಡಿರುವೆನಾದರೂ ನನಗೆ ಅದರಿಂದ ಪೂರ್ಣ ತೃಪ್ತಿ ದೊರಕಿಲ್ಲ. ಕಾರಣ, ಸಾಮಾಜಿಕ ಜೀವನದಲ್ಲಿರುವಾಗ ರಚನಾತ್ಮಕವಾದ ತುಡಿತ, ಹೆಚ್ಚನ್ನು ಸಾಧಿಸುವ ಬಯಕೆ, ವೇಗವಾದ ಸುಧಾರಣೆ ಮತ್ತು ಉತ್ತಮವಾದ ಸೇವೆ ಸಲ್ಲಿಸುವುದು ಅತ್ಯಗತ್ಯ’ ಎಂದು ಹೇಳಿದರು.

ಮೋದಿ ಹೇಳಿದ್ದೇನು?

ಕಾಂಗ್ರೆಸ್‌ ಪಕ್ಷ ಅಭಿವೃದ್ಧಿ, ವಿದೇಶಿ ಒಪ್ಪಂದಗಳನ್ನು ನಿರ್ಲಕ್ಷಿಸಿತ್ತು

ಜೀವನಮಟ್ಟ ಸುಧಾರಣೆ, ಉದ್ಯೋಗ ಸೃಷ್ಟಿಯೇ ನಮ್ಮ ಗುರಿ

ಜನಪ್ರಿಯ ಅಂಶಗಳ ಕೈಬಿಟ್ಟಿದ್ದು ಉದ್ದೇಶಪೂರ್ವಕ ನಿರ್ಧಾರ

ಇಷ್ಟು ವರ್ಷ ಕೆಲಸ ಮಾಡಿದರೂ ನನಗಿನ್ನೂ ತೃಪ್ತಿ ಸಿಕ್ಕಿಲ್ಲ

2047ಕ್ಕೆ ದೇಶ ವಿಕಸಿತ ಮಾಡುವತ್ತ ದೂರದೃಷ್ಟಿ ಯೋಜನೆ

ವಿಕಸಿತ ಭಾರತ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಹಿರಿದು

ರಕ್ಷಣಾ ವಲಯದ ಸುಧಾರಣೆಗೆ ಸಿಂದೂರವೇ ಉದಾಹರಣೆ

ಹತಾಶ ನುಡಿ

ಈ ವರ್ಷದ ಬಜೆಟ್‌ ಕಳಪೆ ಎನ್ನುವುದು ಮೋದಿಗೆ ತಿಳಿದಿದೆ. ಆದ್ದರಿಂದ ಬಜೆಟ್‌ ಮಂಡಿಸಿದ 15 ದಿನಗಳ ಬಳಿಕ, ಸಂಸತ್‌ನಲ್ಲಿ ವಿಪಕ್ಷಗಳು ಅದನ್ನು ತಿರಸ್ಕರಿಸಿದ ಬಳಿಕ ಈ ಬಗ್ಗೆ ಸಂದರ್ಶನ ನೀಡಿದ್ದಾರೆ. ಇದು ಅವರ ಸಂದರ್ಶನವಲ್ಲ. ಬದಲಿಗೆ ಎಚ್ಚರಿಕೆಯಿಂದ ಮತ್ತು ಹತಾಶೆಯಿಂದ ರೂಪಿತವಾದ ಪಿಆರ್‌ ತಂತ್ರ. ಪ್ರಧಾನಿಯವರು ಬಗ್ಗಿದ್ದಾರೆ ಮತ್ತು ದಣಿದಿದ್ದಾರೆ.

ಜೈರಾಂ ರಮೇಶ್, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಮೆರಿಕ ಡೀಲ್‌ ಹೆಸರಿನಲ್ಲಿರೈತರಿಗೆ ದ್ರೋಹ: ರಾಗಾ
ಟಿಪ್ಪು ಜತೆ ಶಿವಾಜಿ ಹೋಲಿಕೆಮಾಡಿದ್ದಕ್ಕೆ ಪುಣೆಯಲ್ಲಿ ಹಿಂಸೆ