ಮುಂಬೈ: ಜನವರಿಯಲ್ಲಿ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ 18 ಹಳ್ಳಿಗರ ಜನರಲ್ಲಿ ಹಠಾತ್ ಕೂದಲು ಉದುರುವಿಕೆ ಸಮಸ್ಯೆ ಆರಂಭವಾಗಿತ್ತು. ಅದರ ಅಧ್ಯಯನದ ಬಳಿಕ ಈಗ ಪಂಜಾಬ್ ಮತ್ತು ಹರ್ಯಾಣದಿಂದ ಆಮದಾದ ರೇಷನ್ ಗೋಧಿಯೇ ಸಮಸ್ಯೆಗೆ ಕಾರಣ ಎಂಬ ಅಚ್ಚರಿಯ ಅಂಶ ಹೊರಬಂದಿದೆ.
ಆಗಿದ್ದೇನು?:
2024ರ ಡಿಸೆಂಬರ್‌ನಿಂದ ಜನವರಿ ಅವಧಿಯಲ್ಲಿ ಬುಲ್ಧಾನಾ ಜಿಲ್ಲೆಯ 18 ಹಳ್ಳಿಗಳ 279 ಜನರಲ್ಲಿ ದಿಢೀರ್ ಕೂದಲು ಉದುರುವಿಕೆ ಸಮಸ್ಯೆ (ಅಲೋಪೆಸಿಯಾ ಟೋಟಲಿಸ್) ಆರಂಭವಾಗಿತ್ತು. ಯುವಕರು, ವೃದ್ಧರು ಎನ್ನದೆ ಎಲ್ಲ ವಯೋಮಾನದವರಿಗೂ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಮಕ್ಕಳು ಶಾಲೆ, ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದರು, ನಿಗದಿಯಾಗಿದ್ದ ವಿವಾಹಗಳು ಸಹ ನಿಂತು ಹೋಗಿದ್ದವು. ಇದರ ಬೆನ್ನಲ್ಲೆ ತಜ್ಞರು ಹಾಗೂ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದರು.‘ಸ್ಥಳೀಯ ಗೋಧಿಗಿಂತ ಪಂಜಾಬ್, ಹರ್ಯಾಣದಿಂದ ತರಿಸಿದ ಗೋಧಿಯಲ್ಲಿ ಸೆಲೆನಿಯಂ ಅಂಶ 600 ಪಟ್ಟು ಅಧಿಕವಾಗಿದೆ. ಜನರ ರಕ್ತ, ಮೂತ್ರ ಮತ್ತು ಕೂದಲಿನ ಮಾದರಿಗಳಲ್ಲಿ ಸೆಲೆನಿಯಂ ಅಂಶ ಕ್ರಮವಾಗಿ 35, 60 ಮತ್ತು 150 ಪಟ್ಟು ಹೆಚ್ಚಾಗಿದೆ. ಇದೇ ಈ ಸಮಸ್ಯೆಗೆ ಕಾರಣವಾಗಿದೆ’ ಎಂದು ತಜ್ಞ ಡಾ. ಹಿಮ್ಮತ್ರಾವ್ ಬವಾಸ್ಕರ್ ತಿಳಿಸಿದ್ದಾರೆ.