;Resize=(412,232))
ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಹೋಗುತ್ತಿದ್ದ ಎಸಿ ಸ್ಲೀಪರ್ ಬಸ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು 20 ಪ್ರಯಾಣಿಕರು ಸಜೀವ ದಹನವಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಬಸ್ಸಿನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ.
57 ಜನರನ್ನು ಹೊತ್ತು ಮಧ್ಯಾಹ್ನ 3:30ರ ಸುಮಾರಿಗೆ ರಾಜಸ್ಥಾನದ ಥೈಯಟ್ ಗ್ರಾಮದಲ್ಲಿ ಸಾಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬಸ್‌ನ ಹಿಂಬಾಗದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಬಳಿಕ ದೊಡ್ಡಮಟ್ಟದಲ್ಲಿ ಬೆಂಕಿ ಆವರಿಸಿಕೊಂಡಿತು. ಕೆಲವರು ಕಿಟಗಿಗಳಿಂದ ಹೊರಗೆ ಹಾರುವ ಯತ್ನವನ್ನೂ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಡುರಸ್ತೆಯಲ್ಲಿ ಬಸ್ ಧಗಧಗಿಸುತ್ತಿದ್ದುದನ್ನು ಕಂಡು ಸ್ಥಳೀಯರು ಪ್ರಯಾಣಿಕರ ನೆರವಿಗೆ ಧಾವಿಸಿದ್ದು, ಅಗ್ನಿಶಾಮಕ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಜೈಸಲ್ಮೇರ್‌ನ ಜವಾಹಾರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ, ಪಟನಾದಲ್ಲಿ ನಡೆಯಬೇಕಿದ್ದ ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸಿದ ಸಿಎಂ ಭಜನ್‌ಲಾಲ್ ಶರ್ಮಾ, ವಿಶೇಷ ವಿಮಾನದ ಮೂಲಕ ಜೈಸಲ್ಮೇರ್‌ಗೆ ಆಗಮಿಸಿ ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಪೋಕರನ್ ಶಾಸಕ ಪ್ರತಾಪ್ ಪುರಿ, ಶಾಸಕ ಸಂಘ ಸಿಂಗ್ ಭಾಟಿ ಮತ್ತು ಇತರ ಜಿಲ್ಲಾಡಳಿತ ಅಧಿಕಾರಿಗಳು ಅವರೊಂದಿಗಿದ್ದರು. ನಂತರ ಸಿಎಂ ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು.
ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗುತ್ತಿದ್ದರೂ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದೆ.