;Resize=(412,232))
ನವದೆಹಲಿ: ಕೃಷಿ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಸರ್ಕಾರವು ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಸಲಹೆಯೊಂದನ್ನು ನೀಡಿದ್ದು, ‘ ರೈತರ ಆದಾಯ ಹೆಚ್ಚಿಸಲು ಅವರಿಂದಲೇ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ. ಮಧ್ಯವರ್ತಿಗಳಿಂದ ಖರೀದಿಸಬೇಡಿ’ ಎಂದಿದೆ.
ಕೃಷಿ ಇಲಾಖೆಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ’ ಬೆಳೆಗಾರರ ಆದಾಯ ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳಿಂದ (ಎಫ್‌ಪಿಒ) ನೇರವಾಗಿ ಉತ್ಪನ್ನಗಳನ್ನು ಖರೀದಿಸಿ. ದೇಶಾದ್ಯಂತ ಸಾಕಷ್ಟು ಸಂಖ್ಯೆಯ ಹೋಟೆಲ್, ರೆಸ್ಟೋರೆಂಟ್‌ಗಳಿವೆ. ಸಾಧ್ಯವಾದರೆ ಆಹಾರ, ತರಕಾರಿಗಳು, ಮಸಾಲೆಗಳು ಮತ್ತು ಇತರ ವಸ್ತುಗಳನ್ನು ಸ್ಥಳೀಯ ಕೃಷಿಕರಿಂದಲೇ ಕೊಂಡುಕೊಳ್ಳಿ. ಸ್ಥಳೀಯ ಮಂಡಿಗಳಿಂದ ಅಥವಾ ಚಿಲ್ಲರೆ ವ್ಯಾಪಾರಿಗಳ ಬಳಿ ಖರೀದಿಸುವುದಕ್ಕಿಂತ ಎಫ್‌ಪಿಒಗಳಿಂದ ನೇರವಾಗಿ ಖರೀದಿಸಲು ಪ್ರಾರಂಭಿಸಿ’ ಎಂದಿದ್ದಾರೆ. ಇದೇ ವೇಳೆ ಅವರು ‘ಕೃಷಿಕರೊಂದಿಗಿನ ನೇರ ಪಾಲುದಾರಿಕೆಯು ಬೆಲೆ ಅಂತರವನ್ನು ಕಡಿಮೆ ಮಾಡುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತವು ಸದ್ಯ ದೇಶದಲ್ಲಿ ಸರ್ಕಾರಿ ಯೋಜನೆಯಿಂದ ಸ್ಥಾಪಿಸಿರುವ 10,000 ಸೇರಿದಂತೆ ದೇಶಾದ್ಯಂತ 35,000 ಎಫ್‌ಪಿಒಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೇಂದ್ರ ಎಫ್‌ಪಿಒಗಳ ಪ್ರೋತ್ಸಾಹಕ್ಕೆ ಮುಂದಾಗಿದೆ. ಹೀಗಾಗಿ ಸರ್ಕಾರ ವೆಬ್ ಅಧಾರಿತ ಪ್ಲಾಟ್‌ಫಾರ್ಮ್ ಸ್ಥಾಪನೆಗೆ ನಿರ್ಧರಿಸಿದ್ದು ಅಲ್ಲಿ ಎಫ್‌ಪಿಒಗಳು ತಮ್ಮ ಹೆಚ್ಚುವರಿ ಉತ್ಪನ್ನಗಳನ್ನು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮಾರಾಟಕ್ಕೆ ನೋಂದಾಯಿಸಿ ಮಾರಾಟ ಮಾಡಬಹುದು.