ಸಿಎಎ ಅಡಿ 14 ವಿದೇಶಿಗರಿಗೆ ಭಾರತ ಪೌರತ್ವ

KannadaprabhaNewsNetwork |  
Published : May 16, 2024, 01:50 AM ISTUpdated : May 16, 2024, 06:27 AM IST
ಪ್ರಮಾಣಪತ್ರ ವಿತರಣೆ | Kannada Prabha

ಸಾರಾಂಶ

ಸಿಎಎ ಜಾರಿಯ ಬಳಿಕ ಇದೇ ಮೊದಲು ಪೌರತ್ವ ಸರ್ಟಿಫಿಕೆಟ್‌ ವಿತರಣೆ ಮಾಡಿದ್ದು, ಇನ್ನೂ ನೂರಾರು ಜನರಿಗೆ ಇ-ಮೇಲಲ್ಲಿ ಡಿಜಿಟಲ್‌ ಪ್ರಮಾಣಪತ್ರ ರವಾನೆ ಮಾಡಲಾಗಿದೆ. ದೆಹಲಿಯಲ್ಲಿ ವಿದೇಶಿ ಪ್ರಜೆಗೆ ಸಿಎಎ ಅಡಿ ಭಾರತದ ಪೌರತ್ವ ಸರ್ಟಿಫಿಕೆಟ್‌ ನೀಡಿದ ಅಜಯ್‌ ಭಲ್ಲಾ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ.

  ನವದೆಹಲಿ :  ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿದ್ದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ನಾಗರಿಕತ್ವ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಬುಧವಾರ ಅಧಿಕೃತವಾಗಿ ಆರಂಭಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಅಧಿಸೂಚನೆ ಪ್ರಕಟವಾದ 2 ತಿಂಗಳ ಬಳಿಕ ಮೊದಲ ಬಾರಿ 14 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಅಲ್ಲದೆ ಇತರೆ ನೂರಾರು ಜನರಿಗೆ ಇ-ಮೇಲ್‌ ಮೂಲಕವೂ ಡಿಜಿಟಲ್‌ ಪ್ರಮಾಣ ಪತ್ರ ರವಾನಿಸಲಾಗಿದೆ.

ಸಿಎಎ ಅಡಿ 2014ರ ಡಿ.31ಕ್ಕಿಂತ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲಾಗುತ್ತಿದೆ. ಈ ಮುಂಚೆ ಭಾರತಕ್ಕೆ ಬಂದು 11 ವರ್ಷ ಆದವರಿಗೆ ಮಾತ್ರ ಪೌರತ್ವ ನೀಡುವ ಕಾನೂನಿತ್ತು. ಆದರೆ ತಿದ್ದುಪಡಿ ಕಾಯ್ದೆಯಲ್ಲಿ ಅದನ್ನು 5 ವರ್ಷಕ್ಕೆ ಇಳಿಸಲಾಗಿದೆ ಹಾಗೂ ಪೌರತ್ವ ನೀಡಿಕೆ ಷರತ್ತುಗಳನ್ನು ಹಿಂದಿಗಿಂತ ಸರಳೀಕರಣಗೊಳಿಸಲಾಗಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ದೆಹಲಿಯಲ್ಲಿ ಅರ್ಜಿದಾರರಿಗೆ ಸಿಎಎ ಅಡಿ ಪೌರತ್ವ ಪ್ರಮಾಣಪತ್ರಗಳನ್ನು ಬುಧವಾರ ಮಧ್ಯಾಹ್ನ ಹಸ್ತಾಂತರಿಸಿದರು ಮತ್ತು ಫಲಾನುಭವಿಗಳ ಜತೆ ಸಂವಾದ ನಡೆಸಿ ಕಾಯ್ದೆಯ ಪ್ರಮುಖ ಲಕ್ಷಣ ವಿವರಿಸಿದರು. ಈ ವೇಳೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವ್ಯಾಪಕ ವಿರೋಧದ ಬಳಿಕ ಜಾರಿ:

ಸಿಎಎ ಬಿಜೆಪಿಯ 2019ರ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭಾಗವಾಗಿತ್ತು. ಆ ಪ್ರಕಾರ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ನಾಗರಿಕತ್ವ ನೀಡಲು 2019ರ ಡಿಸೆಂಬರ್‌ನಲ್ಲಿ ಸಿಎಎಗೆ ಸಂಸತ್ತು ಅಂಗೀಕಾರ ನೀಡಿತ್ತು, ಇವರಲ್ಲಿ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದ್ದಾರೆ. ಕಾಯ್ದೆಗೆ ಬಳಿಕ ರಾಷ್ಟ್ರಪತಿಗಳ ಒಪ್ಪಿಗೆ ದೊರಕಿತ್ತು.

ಈ ನಡುವೆ, ಕಾಯ್ದೆ ಜಾರಿ ವಿರುದ್ಧ ದಿಲ್ಲಿ ಹಾಗೂ ದೇಶದ ಹಲವೆಡೆ ಹಲವು ತಿಂಗಳು ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದವು. ಮುಸ್ಲಿಮರ ಪೌರತ್ವ ಕಿತ್ತುಕೊಳ್ಳಲು ಈ ಯೋಜನೆ ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದವು.

ಆದರೆ ಕಾಯ್ದೆಯ ನಿಯಮಗಳನ್ನು ರೂಪಿಸಿ ಈ ವರ್ಷದ ಮಾ.11ರಂದು ಸಿಎಎ ಅಧಿಸೂಚನೆ ಹೊರಬಿತ್ತು, ಈ ಮೂಲಕ ಅಧಿಕೃತವಾಗಿ ಜಾರಿಗೆ ಬಂತು. ಬಳಿಕ ಇದಕ್ಕೆ ಒಂದು ಹೊಸ ನಿರ್ದಿಷ್ಟ ವೆಬ್‌ಸೈಟ್ ಸ್ಥಾಪಿಸಿ ಆನ್‌ಲೈನ್‌ನಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಸಿಎಎ ಎಂದರೇನು?ದೌರ್ಜನ್ಯ ಮತ್ತಿತರೆ ಕಾರಣಗಳಿಂದಾಗಿ 2014ರ ಡಿ.31ಕ್ಕಿಂತ ಮೊದಲು ಭಾರತಕ್ಕೆ ವಲಸೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವುದೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ). 2019ರಲ್ಲಿ ಇದು ಅಂಗೀಕಾರವಾಗಿತ್ತು.ವಿವಾದ ಏನಾಗಿತ್ತು?ಈ ಕಾಯ್ದೆ ಜಾರಿ ಮೂಲಕ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಕೆಲ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಆರೋಪ ಮಾಡಿದ ಕಾರಣ ಇದರ ಜಾರಿ ವಿರುದ್ಧ ದೇಶವ್ಯಾಪಿ ಹೋರಾಟ ನಡೆದಿತ್ತು. ಹೀಗಾಗಿ ಕಾಯ್ದೆ ಜಾರಿಯನ್ನು ಸರ್ಕಾರ ತಡೆಹಿಡಿದಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ