ವಾರದೊಳಗೆ ಪೌರತ್ವ ಕಾಯ್ದೆ ಜಾರಿ: ಕೇಂದ್ರ ಸಚಿವ ಶಂತನು ಠಾಕೂರ್‌

KannadaprabhaNewsNetwork | Updated : Jan 30 2024, 12:30 PM IST

ಸಾರಾಂಶ

ಮೂರು ವರ್ಷಗಳ ಹಿಂದೆ ದೇಶದಲ್ಲಿ ಭಾರಿ ವಿವಾದ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಮತ್ತೆ ಜಾರಿಗೊಳಿಸಲು ಮುಂದಾಗಿದೆ ಎಂಬ ಸುಳಿವು ಲಭಿಸಿದೆ.

ಪಿಟಿಐ ಕೋಲ್ಕತಾ

ಮೂರು ವರ್ಷಗಳ ಹಿಂದೆ ದೇಶದಲ್ಲಿ ಭಾರಿ ವಿವಾದ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಮತ್ತೆ ಜಾರಿಗೊಳಿಸಲು ಮುಂದಾಗಿದೆ ಎಂಬ ಸುಳಿವು ಲಭಿಸಿದೆ. 

ಸ್ವತಃ ಕೇಂದ್ರ ಸಚಿವ ಶಂತನು ಠಾಕೂರ್‌ ಈ ಕುರಿತು ಮಾಹಿತಿ ನೀಡಿದ್ದಾರೆ.ಪಶ್ಚಿಮ ಬಂಗಾಳದ ಬಿಜೆಪಿ ಸಂಸದರಾಗಿರುವ ಸಚಿವ ಠಾಕೂರ್‌ ಸೋಮವಾರ ಇಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿ, ‘ಇನ್ನೊಂದು ವಾರದೊಳಗೆ ಸಿಎಎ ಜಾರಿಗೊಳಿಸಲಾಗುವುದು’ ಎಂದು ಹೇಳಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನ ಮಾತಿಗೆ ಬದ್ಧನಾಗಿದ್ದೇನೆ. ಇನ್ನು ಏಳು ದಿನದಲ್ಲಿ ಸಿಎಎ ಜಾರಿಗೆ ಬರುತ್ತದೆ. ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಜಾರಿಗೆ ಬರುತ್ತದೆ. 

ಇದು ನನ್ನ ಗ್ಯಾರಂಟಿ’ ಎಂದು ತಿಳಿಸಿದರು.ಠಾಕೂರ್‌ ಅವರು ಮತುವಾ ಸಮುದಾಯದ ಸಂಸದರಾಗಿದ್ದಾರೆ. ಅವರ ಜಾತಿಯವರು ಹಿಂದಿನ ಪೂರ್ವ ಪಾಕಿಸ್ತಾದಿಂದ (ಈಗಿನ ಬಾಂಗ್ಲಾದೇಶ) ನರಮೇಧ ತಪ್ಪಿಸಿಕೊಳ್ಳಲು ಪಶ್ಚಿಮ ಬಂಗಾಳಕ್ಕೆ 1950ರ ಬಳಿಕ ನಿರಂತರವಾಗಿ ವಲಸೆ ಬಂದಿದ್ದಾರೆ. 

ಅವರಿಗೆ ಬಂಗಾಳದಲ್ಲಿ ಪರಿಶಿಷ್ಟ ಜಾತಿಯ ಮಾನ್ಯತೆಯಿದೆ. ಸಿಎಎ ಜಾರಿಯಿಂದ ಈ ಸಮುದಾಯಕ್ಕೆ ಸಾಕಷ್ಟು ಲಾಭವಾಗಲಿದೆ.

ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಸಿಎಎ ಈ ನೆಲದ ಕಾಯ್ದೆಯಾಗಿದ್ದು, ಅದನ್ನು ಜಾರಿಗೆ ತರುವುದು ಶತಃಸಿದ್ಧ ಎಂದು ಹೇಳಿದ್ದರು.

ತೃಣಮೂಲ ಕಾಂಗ್ರೆಸ್‌ ವಿರೋಧ: ಠಾಕೂರ್‌ ಮಾತಿಗೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷ, ‘ಚುನಾವಣೆ ಹಿನ್ನೆಲೆಯಲ್ಲಿ ವೋಟ್‌ಬ್ಯಾಂಕ್‌ ರಾಜಕಾರಣಕ್ಕಾಗಿ ಬಿಜೆಪಿಯವರು ಈ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಯಾಗಲು ನಾವು ಅವಕಾಶ ನೀಡುವುದಿಲ್ಲ’ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಬಿಜೆಪಿಯವರು ಚುನಾವಣಾ ಲಾಭಕ್ಕಾಗಿ ಈಗ ಮತ್ತೆ ಸಿಎಎ ಜಪ ಮಾಡುತ್ತಿದ್ದಾರೆ. ಸಿಎಎಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕು’ ಎಂದು ತಿಳಿಸಿದ್ದಾರೆ.

ಏನಿದು ಪೌರತ್ವ ಕಾಯ್ದೆ?
2019ರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಿಎಎ ಕಾಯ್ದೆ ಪಾಸು ಮಾಡಿತ್ತು. ಅದರಡಿ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಿಂದ 2014ರ ಡಿ.31ಕ್ಕಿಂತ ಮೊದಲು ತಮ್ಮ ದೇಶದಲ್ಲಿ ನರಮೇಧದಿಂದ ತಪ್ಪಿಸಿಕೊಂಡು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ಸಿಗಲಿದೆ.

ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಈ ಕಾಯ್ದೆಯಡಿ ಭಾರತದ ಪೌರತ್ವ ನೀಡಲಾಗುತ್ತದೆ.

Share this article