ಸಿಎಎ ಅಡಿ ಪೌರತ್ವ ನೀಡುವಲ್ಲಿ ರಾಜ್ಯಗಳ ಪಾತ್ರವೇ ಇಲ್ಲ!

KannadaprabhaNewsNetwork |  
Published : Mar 14, 2024, 02:05 AM IST
ಸಿಎಎ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಇಲ್ಲಿನ ಪೌರತ್ವ ನೀಡುವ ವಿಚಾರದಲ್ಲಿ ರಾಜ್ಯಗಳಿಗೆ ಯಾವ ಅಧಿಕಾರವೂ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಇಲ್ಲಿನ ಪೌರತ್ವ ನೀಡುವ ವಿಚಾರದಲ್ಲಿ ರಾಜ್ಯಗಳಿಗೆ ಯಾವ ಅಧಿಕಾರವೂ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಹೀಗಾಗಿ, ತಮ್ಮ ರಾಜ್ಯದಲ್ಲಿ ಸಿಎಎ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳದ ಮುಖ್ಯಮಂತ್ರಿಗಳು ಹೇಳಿರುವುದಕ್ಕೆ ಯಾವುದೇ ಬೆಲೆ ಇಲ್ಲವಾಗಿದೆ!

ಸಿಎಎ ಅಡಿ ಭಾರತದ ಪೌರತ್ವ ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಪರಿಶೀಲಿಸಿ, ನಿರ್ಧರಿಸಿ, ಅಂತಿಮವಾಗಿ ಪೌರತ್ವ ನೀಡುವವರೆಗೆ ಎಲ್ಲಾ ಹಂತದಲ್ಲೂ ಕೇಂದ್ರ ಸರ್ಕಾರದ ಅಧಿಕಾರಿಗಳೇ ನಿರ್ಣಾಯಕ ಸ್ಥಾನಗಳಲ್ಲಿ ಇರುತ್ತಾರೆ. ರಾಜ್ಯಗಳ ಅಧಿಕಾರಿಗಳಿಗೆ ಸ್ಥಾನ ಇದೆಯಾದರೂ ಅದು ನಾಮ್‌ಕೆವಾಸ್ತೆ ಎಂಬಂತಿದೆ. ಅವರು ವಿರೋಧಿಸಿದರೂ ಅಥವಾ ಸಭೆಗೆ ಗೈರಾದರೂ ಬಹುಮತದ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ ಎಂದು ತಿಳಿದುಬಂದಿದೆ.

ಪೌರತ್ವ ಸಂಬಂಧಿ ಅಧಿಕಾರ ಕೇಂದ್ರಕ್ಕೆ:

ಪೌರತ್ವಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳೂ ಸಂವಿಧಾನದ ಕೇಂದ್ರ ಪಟ್ಟಿಯಲ್ಲಿವೆ. ಜೊತೆಗೆ ಸಿಎಎ ಅರ್ಜಿಗಳನ್ನು ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸ್ವೀಕರಿಸಿ, ಪರಿಶೀಲಿಸಿ, ಅಂತಿಮ ನಿರ್ಧಾರ ಕೈಗೊಳ್ಳುವ ಸಮಿತಿಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳೇ ಇದ್ದಾರೆ. ಪ್ರತಿ ಸಮಿತಿಯಲ್ಲೂ ರಾಜ್ಯದ ಒಬ್ಬ ಅಧಿಕಾರಿ ಆಹ್ವಾನಿತರಾಗಿರುತ್ತಾರೆ. ರಾಜ್ಯದ ಪ್ರತಿನಿಧಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆಯೇ ನಿರ್ಧಾರ ಕೈಗೊಳ್ಳುವ ಅಧಿಕಾರ ಸಮಿತಿಗೆ ಇರುತ್ತದೆ ಎಂದು ತಿಳಿದುಬಂದಿದೆ.

ಕೇಂದ್ರದ ಅಧಿಕಾರಿಗಳೇ ನಿರ್ಣಾಯಕ:

ಅರ್ಜಿಗಳನ್ನು ಬೇರೆ ಬೇರೆ ಹಂತದಲ್ಲಿ ಸ್ವೀಕರಿಸಿ, ಪರಿಶೀಲಿಸಿ, ನಿರ್ಧರಿಸುವ ಜಾಗದಲ್ಲಿ ಗಣತಿ ಅಧಿಕಾರಿ, ಅಂಚೆ ಇಲಾಖೆ ಸುಪರಿಂಟೆಂಡೆಂಟ್‌, ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ, ಗುಪ್ತಚರ ಅಧಿಕಾರಿ, ವಿದೇಶಿಗರ ನೋಂದಣಿ ಅಧಿಕಾರಿ, ಪೋಸ್ಟ್‌ ಮಾಸ್ಟರ್‌ ಜನರಲ್‌, ವಿಭಾಗೀಯ ರೈಲ್ವೆ ಮ್ಯಾನೇಜರ್‌ ಮುಂತಾದವರಿದ್ದಾರೆ. ಇವರೆಲ್ಲರೂ ಕೇಂದ್ರ ಸರ್ಕಾರದ ಅಧಿಕಾರಿಗಳಾಗಿದ್ದಾರೆ.

ಸಮಿತಿಗಳಲ್ಲಿ ರಾಜ್ಯದಿಂದ ಆಹ್ವಾನಿತರಾಗಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಉಪ ತಹಸೀಲ್ದಾರ್‌ ಮಟ್ಟದ ಅಧಿಕಾರಿ ಇರುತ್ತಾರೆ. ಇವರ ಪಾತ್ರ ಸೀಮಿತ ಅಥವಾ ನಗಣ್ಯವಾಗಿರುತ್ತದೆ ಎಂದು ಮೂಲಗಳು ಹೇಳಿವೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ