ಮಧುಮೇಹ ಗುಣ ಸಾಧ್ಯ: ಚೀನಾ ವೈದ್ಯರ ಘೋಷಣೆ!

KannadaprabhaNewsNetwork | Updated : May 29 2024, 07:11 AM IST

ಸಾರಾಂಶ

ಒಮ್ಮೆ ಮಧುಮೇಹ ಬಂತೆಂದರೆ ಮುಗಿಯಿತು.. ಅದು ಗುಣವಾಗುವುದಿಲ್ಲ. ಜೀವನ ಪರ್ಯಂತ ಕಾಡುತ್ತದೆ. ಆದರೆ ಸುಖೀ ಜೀವನ ನಡೆಸಲು ಅದನ್ನು ನಿಯಂತ್ರಿಸಬೇಕಷ್ಟೇ.

ಬೀಜಿಂಗ್‌: ಒಮ್ಮೆ ಮಧುಮೇಹ ಬಂತೆಂದರೆ ಮುಗಿಯಿತು.. ಅದು ಗುಣವಾಗುವುದಿಲ್ಲ. ಜೀವನ ಪರ್ಯಂತ ಕಾಡುತ್ತದೆ. ಆದರೆ ಸುಖೀ ಜೀವನ ನಡೆಸಲು ಅದನ್ನು ನಿಯಂತ್ರಿಸಬೇಕಷ್ಟೇ.

ಆದರೆ ಚೀನಾದ ಸಂಶೋಧಕರು ಮಧುಮೇಹಕ್ಕೆ ಸಂಬಂಧಿಸಿದಂತೆ ತಾವು ಅದ್ಭುತ ಸಂಶೋಧನೆ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ‘ಸೆಲ್‌ ಥೆರಪಿ’ ಮೂಲಕ ಮೊಟ್ಟಮೊದಲ ಬಾರಿ ಮಧುಮೇಹ ಚಿಕಿತ್ಸೆ ನೀಡಿ ರೋಗಿಯೊಬ್ಬನನ್ನು ಸಂಪೂರ್ಣ ಗುಣಮುಖ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

2021ರಲ್ಲಿ ವ್ಯಕ್ತಿಯೊಬ್ಬನಿಗೆ ‘ಕೋಶಗಳ ಕಸಿ’ (ಸೆಲ್‌ ಟ್ರಾನ್ಸ್‌ಪ್ಲಾಂಟ್‌) ಮಾಡಲಾಗಿತ್ತು. ಒಂದೇ ವರ್ಷದಲ್ಲಿ, ಅಂದರೆ 2022ರಿಂದ ಆತ ‘ಔಷಧ ಮುಕ್ತ’ ವ್ಯಕ್ತಿ ಆಗಿಬಿಟ್ಟಿದ್ದಾನೆ. ಮಧುಮೇಹಕ್ಕೆ ಈ ರೀತಿ ಸೆಲ್ ಕಸಿ ರಾಮಬಾಣದಂತಿದ್ದು, ಸಂಪೂರ್ಣ ಗುಣಪಡಿಸಬಹುದು ಎಂದು ಸಾಬೀತಾಗಿದೆ ಎಂದು ಸಂಶೋಧಕರನ್ನು ಉಲ್ಲೇಖಿಸಿ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

ಸೆಲ್‌ ಕಸಿ ಹೇಗೆ?:

ಮೇದೋಜ್ಜೀರಕ ಗ್ರಂಥಿಯಲ್ಲಿ ಕಂಡುಬರುವ ಇನ್ಸುಲಿನ್-ಉತ್ಪಾದಿಸುವ ಕೋಶಗಳನ್ನು ಕೃತಕವಾಗಿ ಉತ್ಪಾದಿಸಿ ಅದನ್ನು ಕೋಶ ಕಸಿ ಮಾಡಲಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರಾಯೋಗಿಕವಾಗಿ ಇದು ಯಶ ಕಂಡಿದೆ ಎಂದು ಸಂಶೋಧಕರು ಹೇಳಿದ್ದಾರೆ.ರೋಗಿಯು 25 ವರ್ಷಗಳಿಂದ ಟೈಪ್-2 ಡಯಾಬಿಟಿಸ್‌ನಿಂದ ಬಳಲುತ್ತಿದ್ದ. ಆತನ ಐಲೆಟ್‌ ಕೋಶಗಳು ಕೆಲಸ ನಿಲ್ಲಿಸಿದ್ದವು. ಆತ ಹೈ-ರಿಸ್ಕ್‌ನಲ್ಲಿದ್ದ. 

ಆತನಿಗೆ ನಿತ್ಯ ಇನ್ಸುಲಿನ್ ಚುಚ್ಚುಮದ್ದುಗಳ ಅಗತ್ಯವಿತ್ತು. ಆದರೆ 2021ರ ಜುಲೈರಲ್ಲಿ ಕೋಶ ಕಸಿ ಚಿಕಿತ್ಸೆ ಪಡೆದ ನಂತರ, ರೋಗಿಯು 11 ವಾರಗಳಲ್ಲಿ ಬಾಹ್ಯ ಇನ್ಸುಲಿನ್‌ನಿಂದ ಮುಕ್ತನಾದ ಮತ್ತು ನಂತರದ 1 ವರ್ಷದಲ್ಲಿ ಕ್ರಮೇಣ ಔಷಧ ಡೋಸೇಜ್‌ ಕಡಿಮೆ ಮಾಡಿ ಬಳಕ ಸಂಪೂರ್ಣ ನಿಲ್ಲಿಸಲಾಯಿತು. ಬಳಿಕ ಪರೀಕ್ಷೆ ನಡೆಸಿದಾಗ ರೋಗಿಯ ಪ್ಯಾಂಕ್ರಿಯಾಟಿಕ್ ಐಲೆಟ್ ಮತ್ತೆ ಪರಿಣಾಮಕಾರಿಯಾಗಿ ಕಾರ್ಯಾರಂಭ ಮಾಡಿದೆ ಎಂದು ಕಂಡುಬಂದಿದೆ. ರೋಗಿಯು ಈಗ 33 ತಿಂಗಳುಗಳಿಂದ ಇನ್ಸುಲಿನ್ ಮುಕ್ತನಾಗಿದ್ದಾನೆ ಎಂದು ಶಾಂಘೈ ಚಾಂಗ್‌ಜೆಂಗ್ ಆಸ್ಪತ್ರೆಯ ಪ್ರಮುಖ ಸಂಶೋಧಕ ಯಿನ್ ಹಾವೊ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

Share this article