ಭಾರತದ ವಿರುದ್ಧ ಕೆನಡಾ ಮತ್ತೊಂದು ಕಿರಿಕ್‌ : ಜೈಶಂಕರ್‌ ಸಂದರ್ಶನದ ಪುಟಗಳಿಗೆ ನಿರ್ಬಂಧ

KannadaprabhaNewsNetwork |  
Published : Nov 07, 2024, 11:46 PM ISTUpdated : Nov 08, 2024, 05:20 AM IST
S Jaishankar

ಸಾರಾಂಶ

  ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರ ಪತ್ರಿಕಾಗೋಷ್ಠಿ ಮತ್ತು ಭಾರತೀಯ ಸಚಿವರ ಸಂದರ್ಶನ ಇದ್ದ ಆಸ್ಟ್ರೇಲಿಯಾ ಟೀವಿ ಚಾನೆಲ್‌ ಒಂದರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಪುಟಗಳಿಗೆ ಕೆನಡಾ ನಿರ್ಬಂಧ ಹೇರಿದೆ.

ನವದೆಹಲಿ: ಭಾರತದ ವಿರುದ್ಧ ತೊಡೆತಟ್ಟಿರುವ ಕೆನಡಾ ಮತ್ತೊಂದು ಕಿರಿಕ್‌ ಮಾಡಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರ ಪತ್ರಿಕಾಗೋಷ್ಠಿ ಮತ್ತು ಭಾರತೀಯ ಸಚಿವರ ಸಂದರ್ಶನ ಇದ್ದ ಆಸ್ಟ್ರೇಲಿಯಾ ಟೀವಿ ಚಾನೆಲ್‌ ಒಂದರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಪುಟಗಳಿಗೆ ಅದು ನಿರ್ಬಂಧ ಹೇರಿದೆ.

ಇದನ್ನು ಬಲವಾಗಿ ವಿರೋಧಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಇಂತಹ ಕ್ರಮಗಳು ವಾಕ್ ಸ್ವಾತಂತ್ರ್ಯದ ಕಡೆಗೆ ಕೆನಡಾದ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದೆ.

ಜೈಶಂಕರ್ ಗುರುವಾರದವರೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು.

ಕೆನಡಾ: ಭದ್ರತೆ ನೀಡದ್ದಕ್ಕೆ ಭಾರತೀಯ ದೂತಾವಾಸದ ಕಾನ್ಸುಲರ್‌ ಕ್ಯಾಂಪ್‌ ರದ್ದು

ಟೊರಂಟೋ: ಇಲ್ಲಿನ ಭಾರತೀಯ ದೂತಾವಾಸ ಆಯೋಜಿಸಲಿದ್ದ ಕಾನ್ಸುಲರ್‌ ಕ್ಯಾಂಪ್‌ಗೆ ಭದ್ರತೆ ಒದಗಿಸಲು ಕೆನಡಾದ ಭದ್ರತಾ ಅಧಿಕಾರಿಗಳು ನಿರಾಕರಿಸಿದ ಕಾರಣ ಅವುಗಳನ್ನು ರದ್ದುಗೊಳಿಸಿರುವುದಾಗಿ ರಾಯಭಾರ ಕಚೇರಿ ತಿಳಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಭಾರತೀಯ ರಾಯಭಾರ ಕಚೇರಿ, ‘ಕ್ಯಾಂಪ್‌ ಆಯೋಜಕರಿಗೆ ರಕ್ಷಣೆ ಒದಗಿಸುವಲ್ಲಿ ಭದ್ರತಾ ಸಂಸ್ಥೆಗಳು ಅಸಮರ್ಥವಾಗಿರುವ ಕಾರಣ, ಕೆಲ ನಿಗದಿತ ಕಾನ್ಸುಲರ್‌ ಕ್ಯಾಂಪ್‌ಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದೆ. ಇತ್ತೀಚೆಗೆ ಬ್ರಾಂಪ್ಟನ್‌ನಲ್ಲಿ ಹಿಂದೂ ಸಭಾ ದೇವಸ್ಥಾನ ಹಾಗೂ ದೂತಾವಾಸ ಒಟ್ಟಾಗಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಖಲಿಸ್ತಾನಿ ಉಗ್ರರು ದಾಳಿ ಮಾಡಿದ್ದರು.

ಹಿಂದೂಗಳೇ ಒಂದಾಗಿ ಎಂದು ಕರೆಕೊಟ್ಟ ಕೆನಡಾ ಪುರೋಹಿತ ದೇಗುಲದಿಂದ ಅಮಾನತು!

ಒಟ್ಟಾವಾ: ಇತ್ತೀಚೆಗೆ ಕೆನಡಾದ ಬ್ರಾಂಪ್ಟನ್‌ನಲ್ಲಿ ಹಿಂದೂಗಳ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿ ವೇಳೆ, ಹಿಂದೂಗಳೆಲ್ಲಾ ತಮ್ಮ ಭಿನ್ನಮತ ಮರೆತು ಒಂದಾಗಬೇಕು ಎಂದು ಕರೆ ನೀಡಿದ್ದ ಅರ್ಚಕರೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಬ್ರಾಂಪ್ಟನ್‌ನ ಹಿಂದೂ ಸಭಾ ದೇಗುಲದ ಬಳಿ ಹಿಂದೂಗಳ ಮೇಲೆ ನಡೆದ ದಾಳಿ ಬಳಿಕ ಮಾತನಾಡಿದ್ದ ಅರ್ಚಕ ಹಿಂದೂಗಳು ನಮ್ಮ ಜಾತಿ, ಸಿದ್ಧಾಂತ ಮರೆತು ಒಂದಾಗಬೇಕು ಎಂದು ಕರೆ ನೀಡಿದ್ದರು. ಈ ಮಾತು ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅದರ ಬೆನ್ನಲ್ಲೇ, ಹಿಂಸೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅರ್ಚಕರನ್ನು ದೇಗುಲದ ಆಡಳಿತ ಮಂಡಳಿ ಸಸ್ಪೆಂಡ್‌ ಮಾಡಿದೆ.

ಈ ಬಗ್ಗೆ ಮಾತನಾಡಿರುವ ಬ್ರಾಂಪ್ಟನ್‌ ಮೇಯರ್‌ ಪ್ಯಾಟ್ರಿಕ್‌ ಬ್ರೌನ್‌, ‘ಕೆನಡಾದ ಸಿಖ್ಖರು ಹಾಗೂ ಹಿಂದೂ ಕೆನಡಿಯನ್ನರು ಸಹಬಾಳ್ವೆ ನಡೆಸಬಯಸುತ್ತಾರೆ. ನಮ್ಮಲ್ಲಿ ಭಿನ್ನತೆಗಳಿಗಿಂತ ಅಧಿಕ ಸಾಮ್ಯತೆಗಳಿವೆ’ ಎನ್ನುತ್ತಾ ಪ್ರತಿಭಟನೆಗಳಿಂದ ಪ್ರಚೋದಿತರಾಗಬಾರದು ಎಂದು ಸಲಹೆ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ