;Resize=(412,232))
ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಿಂದಾಗಿ ದೇಶದ ಅತಿ ದೊಡ್ಡ ಸಗಟು ವ್ಯಾಪಾರ ಮಾರುಕಟ್ಟೆಯಾಗಿರುವ ಚಾಂದನಿ ಚೌಕಕ್ಕೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದ್ದು, ಸುಮಾರು 300-400 ಕೋಟಿ ರು. ನಷ್ಟವಾಗಿದೆ ಎಂದು ವರದಿಯಾಗಿದೆ. ಚಾಂದನಿ ಚೌಕ ಮಾರುಕಟ್ಟೆಗೆ ಪ್ರತಿನಿತ್ಯ ಸುಮಾರು 4 ಲಕ್ಷ ಜನ ಭೇಟಿ ನೀಡುತ್ತಾರೆ. 450-500 ಕೋಟಿ ರು. ವಹಿವಾಟು ನಡೆಯುತ್ತದೆ. ಆದರೆ ಸ್ಫೋಟದಿಂದಾಗಿ ಭೀತಗೊಂಡಿರುವ ಜನ ಮಾರುಕಟ್ಟೆಯತ್ತ ಮುಖ ಹಾಕುತ್ತಿಲ್ಲ. ಹಾಗಾಗಿ ಸುಮಾರು 300-400 ಕೋಟಿ ರು. ನಷ್ಟವಾಗಿದೆ ಎಂದು ಸಂಸದ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.
ಫರೀದಾಬಾದ್: ದೆಹಲಿ ಸ್ಫೋಟದ ಹಿಂದೆ ತನ್ನ ಇಬ್ಬರು ವೈದ್ಯರ ಪಾತ್ರ ಬೆಳಕಿಗೆ ಬಂದ ಬೆನ್ನಲ್ಲೇ, ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮೊಂದಿಗೆ ವೈದ್ಯರ ಸಂಬಂಧ ಕೇವಲ ಕೆಲಸಕ್ಕೆ ಸಂಬಂಧಿಸಿದ್ದು ಎಂದು ಫರೀದಾಬಾದಾದ್‌ನ ಅಲ್ ಫಲಾ ವೈದ್ಯಕೀಯ ವಿವಿ ಸ್ಪಷ್ಟಪಡಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಈ ಬಗ್ಗೆ ವಿವಿಯ ಉಪಕುಲಪತಿ ಪ್ರೊ.ಡಾ.ಭೂಪಿಂದರ್ ಕೌರ್ ಆನಂದ್, ‘ದೆಹಲಿಯಲ್ಲಿ ನಡೆದ ಭೀಕರ ಸ್ಫೋಟದಿಂದ ದುಃಖಿತವಾಗಿದ್ದು ಘಟನೆಯನ್ನು ಖಂಡಿಸುತ್ತೇವೆ. ವಿವಿಯ ಇಬ್ಬರೂ ವೈದ್ಯರನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ. ಇವರು ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದರು. ಅದನ್ನು ಬಿಟ್ಟರೆ ಬೇರೆ ಯಾವುದೇ ಸಂಪರ್ಕವಿರಲಿಲ್ಲ. ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ಭದ್ರತೆ ವಿಚಾರದಲ್ಲಿ ನಡೆಯುತ್ತಿರುವ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೀನಗರದ : ದೆಹಲಿ ಸ್ಫೋಟದ ಬೆನ್ನಲ್ಲೇ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಕಾಶ್ಮೀರ ಪೊಲೀಸರು, ನಿಷೇಧಿತ ಜಮಾತ್- ಇ- ಇಸ್ಲಾಮಿ (ಜೆಇಐ) ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಸೇರಿದ 300ಕ್ಕೂ ಹೆಚ್ಚು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ. ಜೆಇಐ ಉಗ್ರ ಸಂಘಟನೆ ನಂಟಿರುವವರು ರಾಜ್ಯದಲ್ಲಿ ತಮ್ಮ ಜಾಲ ವಿಸ್ತರಣೆಗೆ ಮುಂದಾಗಿದ್ದಾರೆ ಎನ್ನುವ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ಕುಲ್ಗಾಮ್, ಪುಲ್ವಾಮ, ಶೋಪಿಯಾನ್, ಬಾರಾಮುಲ್ಲಾ, ಗಂಡೇರ್ಬಲ್ಲಾ ಜಿಲ್ಲೆಗಳಲ್ಲಿ ಜೆಇಐ ಸದಸ್ಯರು, ಅವರ ಸಹಚರರ ಮನೆಗಳು ಹಾಗೂ ಸೇರಿದ ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ. ದಾಳಿ ವೇಳೆ ಶಸ್ತ್ರಾಸ್ತ್ರ, ಡಿಜಿಟಲ್ ಸಾಧನ ವಶಪಡಿಸಿಕೊಂಡಿದ್ದಾರೆ.
ಏರಿಂಡಿಯಾ, ಇಂಡಿಗೋಗೆ ಬಾಂಬ್ ಬೆದರಿಕೆ: 5 ಏರ್ಪೋರ್ಟ್‌ಗಳಲ್ಲಿ ಅಲರ್ಟ್
ನವದೆಹಲಿ: ದೆಹಲಿಯ ಸ್ಫೋಟ ದುರಂತದ ಆತಂಕದ ನಡುವೆಯೇ ಬುಧವಾರ ದೇಶದ ಪ್ರಮುಖ ವಿಮಾನ ಸಂಸ್ಥೆಗಳಾದ ಏರಿಂಡಿಯಾ, ಇಂಡಿಗೋಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಅದರಲ್ಲಿ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ತಿರುವನಂತಪುರಂನಲ್ಲಿ 24 ಗಂಟೆಯೊಳಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ 5 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್ ಘೋಷಣೆಯಾಗಿದೆ. ಆದರೆ ತಪಾಸಣೆ ಬಳಿಕ ಅವು ಹುಸಿ ಕರೆ ಎಂದು ಖಚಿತಪಟ್ಟಿದೆ.