ಶತಮಾನದ ಬಳಿಕ ಮತ್ತೆ ಜಾತಿಗಣತಿ : ಏಕೆ? ಏನು? ಗಣತಿಯ ಇತಿಹಾಸ

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ಜನಗಣತಿ ಜೊತೆಗೆ ಜಾತಿಗಣತಿಯನ್ನೂ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ

 ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ಜನಗಣತಿ ಜೊತೆಗೆ ಜಾತಿಗಣತಿಯನ್ನೂ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇದರೊಂದಿಗೆ ಸುಮಾರು 1931ರ ಬಳಿಕ ದೇಶದಲ್ಲಿ ಮತ್ತೊಮ್ಮೆ ದೇಶದಲ್ಲಿನ ಎಲ್ಲಾ ಜನರ ಜಾತಿಯ ಕುರಿತ ಮಾಹಿತಿಯನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಬಿಹಾರ, ತೆಲಂಗಾಣದಲ್ಲಿ ಜಾತಿಗಣತಿ ನಡೆಸಿ ಹಿಂದುಳಿದ ಸಮುದಾಯಕ್ಕೆ ಹೆಚ್ಚಿನ ಮೀಸಲು ನೀಡಿದ ಮತ್ತು ಕರ್ನಾಟಕದಲ್ಲಿ ನಡೆಸಲಾದ ಜಾತಿಗಣತಿ ವರದಿ ಭಾರೀ ವಿವಾದಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ತಾನೂ ಕೂಡಾ ಜಾತಿಗಣತಿ ನಡೆಸುವ ನಿರ್ಧಾರ ಪ್ರಕಟಿಸಿದೆ.

ಸರ್ಕಾರದ ನಿರ್ಧಾರವನ್ನು ಕೇಂದ್ರದ ಎನ್‌ಡಿಎ ಸರ್ಕಾರದ ಎಲ್ಲಾ ಮಿತ್ರಪಕ್ಷಗಳು ಮತ್ತು ಕಾಂಗ್ರೆಸ್‌ ಆದಿಯಾಗಿ ವಿಪಕ್ಷಗಳು ಸ್ವಾಗತಿಸಿವೆ.

ಜಾತಿಗಣತಿ:

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಭೆಯಲ್ಲಿ ಜನಗಣತಿ ಜಾತಿಗಣತಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್‌, ‘ಕೇಂದ್ರ ಸರ್ಕಾರ ನಡೆಸಲಿರುವ ಜನಸಂಖ್ಯಾಗಣತಿಯಲ್ಲಿ ಜಾತಿ ಗಣತಿಯನ್ನೂ ಸೇರ್ಪಡೆ ಮಾಡಲಾಗುವುದು. ಇದು ದೇಶ ಮತ್ತು ಸಮಾಜದ ಕುರಿತು ಕೇಂದ್ರ ಸರ್ಕಾರಕ್ಕಿರುವ ಬದ್ಧತೆ ಪ್ರದರ್ಶಿಸುತ್ತದೆ. ಕೆಲ ರಾಜ್ಯಗಳು ಈಗಾಗಲೇ ರಾಜಕೀಯ ಪ್ರೇರಿತ ಜಾತಿಗಣತಿ ನಡೆಸಿದ್ದು, ನಾವು ಪಾರದರ್ಶಕವಾಗಿ ಜನಸಂಖ್ಯಾ ಗಣತಿ ಜತೆಗೆ ಜಾತಿ ಗಣತಿಯನ್ನೂ ಮಾಡಲಿದ್ದೇವೆ ಎಂದು ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ.

ರಾಜಕೀಯ ದಾಳ:

ಜಾತಿಗಣತಿ ವಿಚಾರವಾಗಿ ವಿಪಕ್ಷಗಳ ವಿರುದ್ಧ ಕಿಡಿಕಾರಿದ ಅಶ್ವಿನಿ ವೈಷ್ಣವ್‌, ಪ್ರತಿಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳು ಈಗಾಗಲೇ ಸಮೀಕ್ಷೆ ಹೆಸರಿನಲ್ಲಿ ರಾಜಕೀಯ ಉದ್ದೇಶಕ್ಕಾಗಿ ಜಾತಿಗಣತಿ ನಡೆಸಿವೆ. ಸಮೀಕ್ಷೆ ನಡೆಸಲಾದವುಗಳ ಪೈಕಿ ಕೆಲ ರಾಜ್ಯಗಳು ಚೆನ್ನಾಗಿ ನಡೆಸಿವೆ, ಮತ್ತೆ ಕೆಲವು ರಾಜ್ಯಗಳು ರಾಜಕೀಯ ಉದ್ದೇಶಕ್ಕಾಗಿ ಪಾರದರ್ಶಕವಲ್ಲದ ರೀತಿ ಗಣತಿ ನಡೆಸಿವೆ. ಕಾಂಗ್ರೆಸ್‌, ಜಾತಿಗಣತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಈ ರೀತಿಯ ಸರ್ವೆಗಳು ಸಮಾಜದಲ್ಲಿ ಅನುಮಾನಗಳನ್ನು ಸೃಷ್ಟಿಸಿವೆ. ನಮ್ಮ ಸಾಮಾಜಿಕ ವ್ಯವಸ್ಥೆ ರಾಜಕೀಯದಿಂದ ಹಾಳಾಗಬಾರದು ಎನ್ನುವ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರವೇ ಮುಂಬರುವ ರಾಷ್ಟ್ರೀಯ ಜನಸಂಖ್ಯಾ ಗಣತಿ ಜತೆಗೆ ಜಾತಿ ಗಣತಿಯನ್ನೂ ನಡೆಸಲು ನಿರ್ಧರಿಸಿದೆ. ಈ ಮೂಲಕ ಪಾರದರ್ಶಕವಾಗಿ ಜಾತಿಗಣತಿ ನಡೆಸಲಿದೆ ಎಂದರು.

ರಾಷ್ಟ್ರೀಯ ಜನಸಂಖ್ಯಾ ಗಣತಿಯು 2020ರಲ್ಲೇ ನಡೆಯಬೇಕಿತ್ತಾದರೂ ಕೊರೋನಾ ಸೇರಿ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತ್ತು.

ರಾಹುಲ್‌ ಆಗ್ರಹ:

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಜಾತಿಗಣತಿ ಬಗ್ಗೆ ದೊಡ್ಡ ಮಟ್ಟದಲ್ಲಿ ಹೇಳಿಕೆ ನೀಡಿದ್ದಾರೆ. ಜಿತನಿ ಅಬಾದಿ, ಉತನಾ ಹಕ್‌ (ಜನಸಂಖ್ಯೆ ಎಷ್ಟಿದೆಯೋ ಅಷ್ಟು ಅವರ ಹಕ್ಕು). ದೇಶವ್ಯಾಪಿ ಜಾತಿ ಗಣತಿ ನಡೆಸಬೇಕು. ಅದರ ಆದಾರದಲ್ಲಿ ಎಸ್‌ಸಿ, ಎಸ್ಟಿ, ಒಬಿಸಿ ಸಮುದಾಯಕ್ಕೆ ಮೀಸಲು ನೀಡಬೇಕು ಎಂದು ಆಗ್ರಹ ಮಾಡಿದ್ದರು. ಜೊತೆಗೆ 2024ರ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸುವ ಮತ್ತು ಗಣತಿ ಆಧಾರದಲ್ಲಿ ಮೀಸಲು ಪ್ರಮಾಣ ಹೆಚ್ಚಿಸುವ ಭರವಸೆ ನೀಡಿದ್ದರು.

ಎನ್‌ಡಿಎ ಮಾಸ್ಟರ್‌ಸ್ಟ್ರೋಕ್‌:

ಜನಗಣತಿ ಜೊತೆಗೆ ಜಾತಿಗಣತಿ ಘೋಷಿಸುವ ಮೂಲಕ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಬಳಿ ಇದ್ದ ದೊಡ್ಡ ಅಸ್ತ್ರವನ್ನು ಎನ್‌ಡಿಎ ಕಸಿದುಕೊಂಡಿದೆ. ಜೊತೆಗೆ ವರ್ಷಾಂತ್ಯಕ್ಕೆ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಇದು ಎನ್‌ಡಿಎ ಪಾಲಿಗೆ ಬಹುದೊಡ್ಡ ಅಸ್ತ್ರವಾಗಲಿದೆ ಎಂದು ಹೇಳಲಾಗಿದೆ.

ಜಾತಿಗಣತಿ

ನವದೆಹಲಿ: ಜಾತಿ ಗಣತಿ ಎಂದರೆ, ಜಾತಿಯ ಆಧಾರದಲ್ಲಿ ದೇಶದ ಸಮಸ್ತ ಪ್ರಜೆಗಳ ಅಂಕಿಅಂಶವನ್ನು ಸಂಗ್ರಹಿಸುವುದು. ಇದು ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ತಾಕತ್ತು ಹೊಂದಿದ್ದು, ಜನಸಂಖ್ಯಾ ವಿತರಣೆ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಮತ್ತು ವಿವಿಧ ಜಾತಿಗಳ ಪ್ರಾತಿನಿಧ್ಯದ ಬಗೆಗಿನ ಮಾಹಿತಿಯನ್ನು ಒದಗಿಸುತ್ತದೆ. ಇದು ಸಕಾರಾತ್ಮಕ ಕ್ರಮ ಕೈಗೊಳ್ಳಲು, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಕುರಿತು ನೀತಿಗಳನ್ನು ರೂಪಿಸಲು ಸಹಕಾರಿ.

ಜಾತಿ ಗಣತಿಯ ಇತಿಹಾಸ:

ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಇದ್ದ ಸಮಯದಲ್ಲೇ (1881ರಿಂದ 1931), 10 ವರ್ಷಕ್ಕೊಮ್ಮೆ ಎಲ್ಲಾ ಜಾತಿಗಳ ಗಣತಿ ಮಾಡಲಾಗುತ್ತಿತ್ತು. ಆದರೆ ಸ್ವತಂತ್ರ ಭಾರತದಲ್ಲಿ 1951ರಲ್ಲಿ ನಡೆದ ಗಣತಿಯಲ್ಲಿ ಕೊಂಚ ಮಾರ್ಪಾಡು ಮಾಡಿದ ಜವಾಹರಲಾಲ್‌ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಹೊರತುಪಡಿಸಿ ಉಳಿದ ಜಾತಿಯವರ ಗಣತಿಯನ್ನು ನಿಲ್ಲಿಸಿತು. ಜಾತಿ ಕಡೆ ಹೆಚ್ಚು ಗಮನ ಹರಿಸುವುದರಿಂದ ದೇಶದ ಏಕತೆಗೆ ಧಕ್ಕೆಯಾದೀತು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು.

ಬಳಿಕ 1961ರಲ್ಲಿ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಒಬಿಸಿಗಳ ರಾಜ್ಯವಾರು ಪಟ್ಟಿಯನ್ನು ತಯಾರಿಸುವ ಅವಕಾಶವನ್ನೂ ನೀಡಿತು. ಕಾರಣ, ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಅನ್ಯ ಗುಂಪುಗಳಿಗೆ ಸಹಾಯವಾಗುವ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹ ಆಗ ಕೇಳಿಬಂದಿತ್ತು.

1980ರಲ್ಲಿ ಮಂಡಲ್‌ ಆಯೋಗ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ, ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಒಬಿಸಿ ವರ್ಗಕ್ಕೆ ಶೇ.27ರಷ್ಟು ಮೀಸಲಾತಿ ನೀಡಲು ಸೂಚಿಸಲಾಗಿದ್ದು, ದೇಶದಲ್ಲಿ ಮತ್ತೆ ಜಾತಿಗಣತಿಯ ಆಗ್ರಹ ಶುರುವಾಯಿತು.

2011ರಲ್ಲಿ ಯುಪಿಎ ಸರ್ಕಾರ ಜಾತಿಗಣತಿ ನಡೆಸಿದ್ದು, ಅದರ ಅಂಕಿಅಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿರಲಿಲ್ಲ. ಇದು ವಿಪಕ್ಷಗಳು ಮತ್ತು ಜಾತಿ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಅಗತ್ಯವೇನು?:

ಮೀಸಲಾತಿ ನೀತಿಗಳು, ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಜಾತಿ ಗಣತಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಸಾಮಾಜಿಕವಾಗಿ ಅಷ್ಟೇ ಅಲ್ಲದೆ, ರಾಜಕಾರಣದಲ್ಲೂ ಅತ್ಯಗತ್ಯ. ಚುನಾವಣಾ ಸಂದರ್ಭದಲ್ಲಿ ತಂತ್ರಗಳನ್ನು ರೂಪಿಸುವಲ್ಲಿ ಜಾತಿಗಳು ಸಹಕಾರಿ. ಇದು ಪಕ್ಷಗಳಿಗೆ ನಿರ್ದಿಷ್ಟ ಜಾತಿಗಳತ್ತ ಗಮನಹರಿಸಲು ಅನುಕೂಲ ಮಾಡಿಕೊಡುತ್ತದೆ.

ಇದರ ಹೊರತಾಗಿ, ಶೈಕ್ಷಣಿಕ. ಆರೋಗ್ಯ, ಸಾಮಾಜಿಕ ಅಸಮಾನತೆಗಳನ್ನು ಬಹಿರಂಗಪಡಿಸಲು, ಸಮಾನ ಮತ್ತು ಎಲ್ಲರನ್ನೂ ಒಳಗೊಳ್ಳುವ ನೀತಿ, ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಜಾತಿಗಣತಿಯು ಅಗತ್ಯ. ಜೊತೆಗೆ, ಹಿಂದುಳಿದ ವರ್ಗಗಳನ್ನು ವಿವಿಧ ಆಯಾಮಗಳಲ್ಲಿ ಮೇಲೆತ್ತಲೂ ಸಹಕಾರಿ.

ಜಾತಿ ಗಣತಿ ಮತ್ತೆ ಮುನ್ನೆಲೆಗೆ:

ಇದೀಗ ಸರಿಸುಮಾರು ಒಂದು ಶತಮಾನದ ಬಳಿಕ ಮತ್ತೆ ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸಲು ಕೇಂದ್ರ ಮುಂದಾಗಿದೆ. ಇದರ ದತ್ತಾಂಶವು ಆಡಳಿತ, ಚುನಾವಣಾ ರಾಜಕೀಯ ಮತ್ತು ಅಸಮಾನತೆಯ ವಿರುದ್ಧದ ಹೋರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Share this article