1931ರ ಬಳಿಕ ಇದೇ ಮೊದಲ ಬಾರಿಗೆ ದೇಶವ್ಯಾಪಿ ಜನಗಣತಿ ಜೊತೆಗೆ ಜಾತಿಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಣೆ
ನವದೆಹಲಿ : 1931ರ ಬಳಿಕ ಇದೇ ಮೊದಲ ಬಾರಿಗೆ ದೇಶವ್ಯಾಪಿ ಜನಗಣತಿ ಜೊತೆಗೆ ಜಾತಿಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಆ ಕುರಿತ ಚರ್ಚೆಗಳು ಆರಂಭವಾಗಿವೆ. ಆದರೆ ಜಾತಿಗಣತಿ ಸುಲಭದ ಕೆಲಸವಲ್ಲ. ಏಕಕಾಲಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ನಡೆಸುವ ಈ ಬೃಹತ್ ಕಾರ್ಯಾಚರಣೆಗೆ ಭಾರೀ ಸಿದ್ಧತೆ ಅಗತ್ಯ. ಸರ್ಕಾರ ಇಂಥದ್ದೊಂದು ಜನಗಣತಿಗೆ ಸಿದ್ಧತೆ ನಡೆಸಲೇ ಕನಿಷ್ಠ 6 ತಿಂಗಳು ಬೇಕು. ಜೊತೆಗೆ 2020ರಲ್ಲಿ ಗಣತಿಗೆ ಮಾಡಿಕೊಂಡಿದ್ದ ಸಿದ್ಧತೆಗೆ ಒಂದಷ್ಟು ಬದಲಾವಣೆ ಆಗಬೇಕು. ಆ ಕುರಿತು ಮಾಹಿತಿ ಇಲ್ಲಿದೆ.
ಕಾನೂನು ಬದಲಾವಣೆ ಬೇಕೇ? : ಜನಗಣತಿಯ ಜತೆ ಜಾತಿಗಣತಿಯನ್ನು ನಡೆಸಲು ಗಣತಿ ಕಾಯ್ದೆಯಲ್ಲಿ ಯಾವುದೇ ತಿದ್ದುಪಡಿಯ ಅವಶ್ಯಕತೆ ಇಲ್ಲ. ಈಗಿರುವ ಕಾನೂನಿನಡಿಯಲ್ಲಿ ನೋಂದಣಿ ಅಧಿಕಾರಿ ಮತ್ತು ಗಣತಿ ಆಯುಕ್ತರಿಗೆ, ಸಾಮನ್ಯ, ಪರಿಶಿಷ್ಟ ಜಾತಿ, ಪಂಗಡದ ಜೊತೆಗೆ ಹಿಂದುಳಿದ ವರ್ಗದ ಆಯ್ಕೆಯನ್ನೂ ನೀಡಿ, ಅದರಡಿ ನಿರ್ದಿಷ್ಟ ವರ್ಗಗಳನ್ನು ಹೆಸರಿಸುವ ಅಧಿಕಾರವಿದೆ.
ಒಬಿಸಿ ಗಣತಿಗೆ ಯಾವ ಪಟ್ಟಿ ಪರಿಗಣನೆ? :
1951ರಿಂದ ನಡೆದ ಗಣತಿಗಳಲ್ಲಿ ಎಸ್‌ಸಿ, ಎಸ್‌ಟಿ ಹೊರತುಪಡಿಸಿ, ಉಳಿದ ಹಿಂದುಳಿದ ವರ್ಗದವರ(ಒಬಿಸಿ) ಲೆಕ್ಕವಿಡಲಾಗಿಲ್ಲ. ಸರ್ಕಾರಿ ನೌಕರಿ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಬಳಿ ಒಬಿಸಿಗಳ ಅಂಕಿಅಂಶವಿದೆ. ಅಂತೆಯೇ, ಪ್ರತಿ ರಾಜ್ಯ ಸರ್ಕಾರಗಳ ಬಳಿಯೂ ಒಬಿಸಿಗಳ ಪಟ್ಟಿಯಿದ್ದು, ಇದು ಕೇಂದ್ರದ ಲೆಕ್ಕಕ್ಕಿಂತ ಭಿನ್ನವಾಗಿವೆ. ಆದ್ದರಿಂದ ಆ ವರ್ಗದ ವಿಷಯದಲ್ಲಿ ಯಾವ ಪಟ್ಟಿಯನ್ನು ಪರಿಗಣಿಸಬೇಕು ಎಂಬುದನ್ನು ಸರ್ಕಾರವೇ ಆಯ್ಕೆ ಮಾಡಬೇಕಿದೆ.
ತಯಾರಿಗೆ ಎಷ್ಟು ಸಮಯ ಬೇಕು?:
ಈಗ ಘೋಷಿಸಲಾಗಿರುವ ಗಣತಿ ನಡೆಸುವ ಮುನ್ನದ ತಯಾರಿಗೆ ಸರ್ಕಾರಕ್ಕೆ ಕನಿಷ್ಠ 6 ತಿಂಗಳ ಕಾಲಾವಕಾಶ ಬೇಕೇಬೇಕು. ಮೊದಲಿಗೆ ಕೇಂದ್ರವು ಅಧಿಕೃತ ಪತ್ರಿಕೆಗಳಲ್ಲಿ ಗಣತಿ ನಡೆಸುವ ಬಗ್ಗೆ ಅಧಿಸೂಚನೆ ಪ್ರಕಟಿಸಬೇಕು. ಬಳಿಕ ರಾಜ್ಯ ಸರ್ಕಾರಗಳೂ ಇದನ್ನು ಅನುಸರಿಸಬೇಕು. ಇದಕ್ಕೆ 2 ತಿಂಗಳು ಬೇಕು. ಇದಾದ ಬಳಿಕ ಮನೆಗಳ ಪಟ್ಟಿ ಮತ್ತು ಜನಸಂಖ್ಯಾ ಎಣಿಕೆ ಹಂತಗಳ ಬಗ್ಗೆ ಮಾಹಿತಿ ನೀಡಬೇಕು.
2021ರಲ್ಲಿ ಡಿಜಿಟಲ್ ಗಣತಿಯನ್ನು ನಡೆಸುವ ಯೋಜನೆ ಇದ್ದ ಕಾರಣ, ಅದರ ಸಾಫ್ಟ್‌ವೇರ್‌ಗೆ ಒಬಿಸಿ ವರ್ಗವನ್ನೂ ಸೇರಿಸಿ ಅಪ್‌ಡೇಟ್ ಮಾಡಬೇಕು.
ಅತ್ತ ಗಣತಿ ನಡೆಸುವವರಿಗೆ ತರಬೇತಿ ನೀಡುವ ಅವಶ್ಯಕತೆಯಿದ್ದು, ಅದಕ್ಕೆ 2 ತಿಂಗಳಾಗುತ್ತದೆ. ಬಳಿಕ ಗಣತಿಯ ವಿಧಾನಗಳ ಪರೀಕ್ಷೆಯನ್ನು ನಡೆಸಬೇಕು.
ಸವಾಲುಗಳೇನು?:
ಈ ಬಾರಿ ಗಣತಿ ಡಿಜಿಟಲೀಕೃತವಾಗಿರುವ ಕಾರಣ, ಮಾಹಿತಿ ಸಂಗ್ರಹದ ವೇಳೆ ಕೆಲ ಸವಾಲುಗಳು ಎದುರಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆದರೆ ಸಿಬ್ಬಂದಿಗೆ ತರಬೇತಿ ನೀಡುವುದರಿಂದ ಇದನ್ನು ನಿವಾರಿಸಲು ಸಾಧ್ಯ. ಇದಕ್ಕಿಂತಲೂ ದೊಡ್ಡ ಸವಾಲೆಂದರೆ, ಗಣತಿಗೂ ಮುನ್ನ ಸುಳ್ಳುಸುದ್ದಿ ಹಬ್ಬುವುದನ್ನು ತಡೆಯುವ ಸಲುವಾಗಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು. ಇದಕ್ಕಾಗಿ ಜಾಗೃತಿ ಅಭಿಯಾನಗಳ ಆಯೋಜನೆ ಅಗತ್ಯ.
ಅತ್ತ ರಾಜಕೀಯ ಸವಾಲುಗಳು ಎದುರಾಗುವುದು ಜಾತಿಗಣತಿಯ ಅಂಕಿಅಂಶ ಪ್ರಕಟವಾದ ಬಳಿಕ. ಆ ದತ್ತಾಂಶವು ಹೊಸ ಒಬಿಸಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಕೋಟಾಗಳನ್ನು ಮರು ನಿಗದಿ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಅಂತೆಯೇ, ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮೀಸಲಾತಿ ಮೇಲಿನ ಶೇ.51ರ ಮಿತಿಯನ್ನು ತೆರವುಗೊಳಿಸುವ ಆಗ್ರಹಕ್ಕೂ ಎಡೆಮಾಡಿಕೊಡಬಹುದು.
ಜಾತಿಗಣತಿಗೆ ಡೆಡ್‌ಲೈನ್ ಎಲ್ಲಿದೆ : ಕಾಂಗ್ರೆಸ್ ಪ್ರಶ್ನೆ
-ಜಾತಿಗಣತಿ ಬಗ್ಗೆ ಚರ್ಚಿಸಲು ಇಂದು ಸಿಡಬ್ಲ್ಯುಸಿ ಸಭೆ-ಗಣತಿಯ ಮಾರ್ಗಸೂಚಿ ಬಹಿರಂಗಪಡಿಸಿ: ಆಗ್ರಹ
₹575 ಕೋಟಿಯಲ್ಲಿ ಎಂತಹ ಗಣತಿ ನಡೆಸುತ್ತೀರಿ?
ನವದೆಹಲಿ: ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದ ಕಾಂಗ್ರೆಸ್, ‘ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿ ಮಾಡಿದರೇ ಹೊರತು ಅದನ್ನು ಯಾವತ್ತು ಮಾಡುತ್ತಾರೆ ಎಂಬುದನ್ನೇ ಹೇಳಿಲ್ಲ’ ಎಂದು ಟೀಕಿಸಿದೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘2019ರ ಡಿಸೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯ ಪತ್ರಿಕಾಪ್ರಕಟಣೆಯಲ್ಲಿ, 2021ರಲ್ಲಿ ಗಣತಿ ನಡೆಸಲು ಕೇಂದ್ರ ಒಪ್ಪಿಗೆ ನೀಡಿದೆ ಎನ್ನಲಾಗಿತ್ತು. ಆದರೆ ಕೋವಿಡ್ ಕಾರಣ ನೀಡಿ ನಡೆಸಿರಲಿಲ್ಲ. ಇದಾಗಿ 6 ವರ್ಷ ಕಳೆದ ಬಳಿಕ ಈಗ ಗಣತಿಯ ಪ್ರಸ್ತಾಪ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ’ ಎಂದರು. ಜೊತೆಗೆ, ‘ಆದಷ್ಟು ಬೇಗ ಗಣತಿ ಮಾಡಬೇಕು. ಇದರ ಮಾರ್ಗಸೂಚಿಯನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.ಸಿಡಬ್ಲ್ಯುಸಿ ಸಭೆ:
‘ಶುಕ್ರವಾರ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಇದರಲ್ಲಿ ಪಹಲ್ಗಾಂ ಉಗ್ರದಾಳಿ ಮತ್ತು ಜಾತಿಗಣತಿಯ ಬಗ್ಗೆ ಚರ್ಚಿಸಲಾಗುವುದು. ಈ ವೇಳೆ, ಶೇ.50ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕುವ ಬಗ್ಗೆಯೂ ಮಾತುಕತೆ ನಡೆಸಲಾಗುವುದುದು’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.