ಸಿಬಿಎಸ್‌ಇ ಶಾಲೆಗಳಲ್ಲಿನ್ನು ಶುಗರ್‌ ಬೋರ್ಡ್‌

KannadaprabhaNewsNetwork |  
Published : May 18, 2025, 01:29 AM ISTUpdated : May 18, 2025, 05:05 AM IST
ಸಿಬಿಎಸ್‌ಇ | Kannada Prabha

ಸಾರಾಂಶ

  ಸಿಬಿಎಸ್‌ಇ (ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ) ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲ ಸಿಬಿಎಸ್‌ಇ ಶಾಲೆಗಳಲ್ಲಿ ಶುಗರ್‌ ಬೋರ್ಡ್‌ (ಸಕ್ಕರೆ ಕುರಿತ ಮಾಹಿತಿ ಬೋರ್ಡ್‌) ಸ್ಥಾಪಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

 ನವದೆಹಲಿ: ಅತಿಯಾದ ಸಿಹಿತಿಂಡಿ, ಫಿಜ್ಜಾ, ಬರ್ಗರ್‌ನಂಥ ಕುರುಕಲು ಆಹಾರ, ತಂಪು ಪಾನೀಯದಂಥ ಅನಾರೋಗ್ಯಕರ ಆಹಾರ ಸೇವನೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿರುವ ಟೈಪ್‌-2 ಮಧುಮೇಹವನ್ನು ನಿಯಂತ್ರಿಸಲು ಸಿಬಿಎಸ್‌ಇ (ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ) ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲ ಸಿಬಿಎಸ್‌ಇ ಶಾಲೆಗಳಲ್ಲಿ ಶುಗರ್‌ ಬೋರ್ಡ್‌ (ಸಕ್ಕರೆ ಕುರಿತ ಮಾಹಿತಿ ಬೋರ್ಡ್‌) ಸ್ಥಾಪಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಮಕ್ಕಳಲ್ಲಿ ಸಕ್ಕರೆ ಸೇವನೆ ಪ್ರಮಾಣ ಇಳಿಸಲು ಮತ್ತು ಹೆಚ್ಚಿನ ಸಕ್ಕರೆ ಸೇವನೆಯಿಂದಾಗುವ ಅಡ್ಡಪರಿಣಾಮಗಳ ಕುರಿತು ಮಾಹಿತಿ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಹಿರಿಯರಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಟೈಪ್‌-2 ಮಧುಮೇಹ ಇದೀಗ ಮಕ್ಕಳಲ್ಲೂ ಹೆಚ್ಚುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಹೆಚ್ಚುತ್ತಿರುವ ಸಕ್ಕರೆ ಸೇವನೆಯಿಂದ ಈ ಸಮಸ್ಯೆ ಉಂಟಾಗುತ್ತಿದೆ. ಸಕ್ಕರೆ ಮಿಶ್ರಿತ ತಿಂಡಿ-ತಿನಿಸುಗಳು, ತಂಪು ಪಾನೀಯಗಳು ಮತ್ತು ಸಂಸ್ಕರಿತ ಆಹಾರಗಳು ಶಾಲಾ ಆವರಣದಲ್ಲಿ ಸುಲಭವಾಗಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಮಧುಮೇಹದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ಸೇವನೆ ಮಧುಮೇಹವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮಕ್ಕಳಲ್ಲಿ ಬೊಜ್ಜು, ಹಲ್ಲು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಅಂತಿಮವಾಗಿ ಮಕ್ಕಳ ದೀರ್ಘಕಾಲದ ಆರೋಗ್ಯ ಮತ್ತು ಶೈಕ್ಷಣಿಕ ಸಾಧನೆ ಮೇಲೂ ಇದು ಅಡ್ಡಪರಿಣಾಮ ಬೀರುತ್ತದೆ ಎಂದು ಸಿಬಿಎಸ್‌ಇಯು ಪ್ರಾಂಶುಪಾಲರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದೆ.

ಅಧ್ಯಯನ ಪ್ರಕಾರ 4ರಿಂದ 10 ವರ್ಷದೊಳಗಿನ ಮಕ್ಕಳ ನಿತ್ಯದ ಶೇ.13 ಮತ್ತು 11ರಿಂದ 18 ವರ್ಷದೊಳಗಿನ ನಡುವಿನ ಮಕ್ಕಳ ಶೇ.15ರಷ್ಟು ಕ್ಯಾಲೊರಿಗೆ ಸಕ್ಕರೆ ಸೇವನೆಯೇ ಮೂಲವಾಗಿದೆ. ಆದರೆ, ಮಕ್ಕಳಿಗೆ ಈ ಪ್ರಮಾಣ ಶೇ.5ರಷ್ಟು ಮಾತ್ರ ಇರಬೇಕು.

ಸಿಹಿ ತಿಂಡಿಗಳು, ಪಾನೀಯಗಳು ಮತ್ತು ಸಂಸ್ಕರಿತ ಆಹಾರಗಳು ಶಾಲಾ ಪರಿಸರದಲ್ಲೇ ಸಿಗುತ್ತಿರುವ ಕಾರಣ ಮಕ್ಕಳ ಕ್ಯಾಲೊರಿ ಪ್ರಮಾಣ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರತಿ ಶಾಲೆಗಳು ಶುಗರ್‌ ಬೋರ್ಡ್‌ಗಳನ್ನು ಹಾಕಬೇಕು. ಹೆಚ್ಚಿನ ಸಕ್ಕರೆ ಸೇವನೆಯಿಂದ ಆಗುವ ಅಡ್ಡಪರಿಣಾಮಗಳ ಕುರಿತು ಆ ಬೋರ್ಡ್‌ನಲ್ಲಿ ಮಾಹಿತಿಗಳನ್ನು ಪ್ರಕಟಿಸುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಿಬಿಎಸ್‌ಇಯು ಪ್ರಾಂಶುಪಾಲರಿಗೆ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ಏನೇನು ಮಾಹಿತಿ?:

ನಿತ್ಯದ ಸಕ್ಕರೆ ಸೇವನೆ ಪ್ರಮಾಣ ಎಷ್ಟಿರಬೇಕು।? ಸಾಮಾನ್ಯವಾಗಿ ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರಗಳು(ಜಂಕ್‌ ಆಹಾರ, ತಂಪು ಪಾನೀಯದಂಥ ಅನಾರೋಗ್ಯಕರ ಊಟ), ಹೆಚ್ಚಿನ ಸಕ್ಕರೆ ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆಗಳು, ಆರೋಗ್ಯಕರ ಪರ್ಯಾಯ ಆಹಾರಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಈ ಬೋರ್ಡ್‌ಗಳು ಒಳಗೊಂಡಿರಬೇಕು. ಇವು ಮಕ್ಕಳಲ್ಲಿ ಆಹಾರದ ಆಯ್ಕೆಗಳ ಕುರಿತು ಅರಿವು ಮೂಡಿಸುವುದಲ್ಲದೆ, ದೀರ್ಘಕಾಲೀನ ಆರೋಗ್ಯ ಲಾಭಗಳನ್ನೂ ತಂದುಕೊಡುತ್ತದೆ ಎಂದು ಹೇಳಲಾಗಿದೆ.

ಇದರ ಜತೆಗೆ, ಮಕ್ಕಳಲ್ಲಿ ಸಕ್ಕರೆ ಸೇವನೆಗೆ ಸಂಬಂಧಿಸಿದ ಜಾಗೃತಿ ಉಪನ್ಯಾಸಗಳು ಮತ್ತು ಕಾರ್ಯಾಗಾರಗಳನ್ನೂ ಆಯೋಜಿಸುವಂತೆಯೂ ಶಾಲೆಗಳಿಗೆ ಸೂಚಿಸಲಾಗಿದೆ.

PREV
Read more Articles on

Recommended Stories

ದಿಲ್ಲಿ ಬೀದಿ ನಾಯಿ ಶೆಡ್‌ಗೆ : ಇಂದು ಸುಪ್ರೀಂನಲ್ಲಿ ತೀರ್ಪು
ಹೊಡೆದಿದ್ದಕ್ಕೆ ಗನ್‌ ತಂದು ಶಿಕ್ಷಕರ ಮೇಲೆ ವಿದ್ಯಾರ್ಥಿ ಗುಂಡಿನ ದಾಳಿ