ಜೈಲಲ್ಲಿ ಉಗ್ರವಾದ ಮೇಲೆ ನಿಗಾಕ್ಕೆ ಕೇಂದ್ರ ಸೂಚನೆ

Published : Jul 14, 2025, 06:06 AM IST
criminal escape from jail

ಸಾರಾಂಶ

ಜೈಲಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು ಹಾಗೂ ಆಂತರಿಕ ಭದ್ರತೆ ಹೆಚ್ಚಿಸಬೇಕು’ ಎಂದು ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.

ನವದೆಹಲಿ : ‘ದೇಶದ ಜೈಲುಗಳಲ್ಲಿ ತೀವ್ರವಾದ ಹಾಗೂ ಉಗ್ರವಾದಕ್ಕೆ ಪ್ರೇರಣೆ ನೀಡುವ ಚಟುವಟಿಕೆ ಹೆಚ್ಚುತ್ತಿದೆ. ಇದು ಸವಾಲಿನ ವಿಷಯ. ಹೀಗಾಗಿ ಜೈಲಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು ಹಾಗೂ ಆಂತರಿಕ ಭದ್ರತೆ ಹೆಚ್ಚಿಸಬೇಕು’ ಎಂದು ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.

‘ಬೆಂಗಳೂರಿನಲ್ಲಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇತ್ತೀಚೆಗೆ ಜೈಲಿನ ವೈದ್ಯನೊಬ್ಬ ಶಂಕಿತ ಉಗ್ರರಿಗೆ ಹಾಗೂ ಇತರ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ. ಜೈಲಿನಲ್ಲಿನ ಉಗ್ರರ ಜತೆ ಪೊಲೀಸ್ ಅಧಿಕಾರಿಯೊಬ್ಬ ನಂಟು ಹೊಂದಿದ್ದ. ಪರಾರಿಯಾದ ಶಂಕಿತ ಉಗ್ರನ ತಾಯಿಯೊಬ್ಬಳು ಜೈಲಲ್ಲಿರುವ ಶಂಕಿತರ ಜತೆ ನಂಟು ಹೊಂದಿದ್ದಳು’ ಎಂಬ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ವೈದ್ಯ, ಪೊಲೀಸ್ ಅಧಿಕಾರಿ ಸೇರಿ ಮೂವರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಈ ಸೂಚನೆಗಳನ್ನು ಕೇಂದ್ರ ಈ ಸೂಚನೆ ನೀಡಿದೆ.

‘ಸೆರೆವಾಸದಲ್ಲಿರುವವರು ಸಮಾಜದಿಂದ ದೂರವಾಗಿ, ಪ್ರತ್ಯೇಕವಾಗಿ ಬಂಧಿಯಾಗಿರುವುದರಿಂದ ಅವರು ವಿಪರೀತಕ್ಕೆ ಹೋಗಿ, ಹಲವು ಅಪರಾಧಗಳಿಗೆ ಮುಂದಾಗಬಹುದು. ಇದನ್ನು ತಡೆಯುವ ಸಲುವಾಗಿ ಕೈದಿಗಳ ನಿಯಮಿತ ತಪಾಸಣೆ ಮಾಡಬೇಕು. ಅಪಾಯಕಾರಿ ಕೈದಿಗಳ ಮೇಲೆ ನಿಗಾ ಇರಿಸಬೇಕು. ಅವರನ್ನು ಇತರ ಕೈದಿಗಳಿಂದ ಪ್ರತ್ಯೇಕವಾಗಿ ಇರಿಸಬೇಕು’ ಎಂದು ಸೂಚಿಸಲಾಗಿದೆ.

ಕೈದಿಯನ್ನು ಜೈಲಿಗೆ ಕರೆದೊಯ್ಯುವ ಸಮಯದಲ್ಲಿ ಮತ್ತು ಸೆರೆವಾಸದ ಅವಧಿಯಲ್ಲಿ ನಿಯಮಿತವಾಗಿ ಅವರಿಂದ ಉಂಟಾಗಬಹುದಾದ ಅಪಾಯದ ಮೌಲ್ಯಮಾಪನ ನಡೆಸಬೇಕು. ಅಂತಹವರ ಗುರುತಿಸುವಿಕೆಗೆ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆ ಘಟಕಗಳ ಸಹಕಾರ ಪಡೆಯಬಹುದು ಎಂದು ತಿಳಿಸಲಾಗಿದೆ.

ಇದೇ ವೇಳೆ, ತಮ್ಮ ಪರಿವಾರದವರನ್ನು ಭೇಟಿ ಮಾಡಿಸುವುದು ಕೈದಿಗಳಲ್ಲಿ ಭಾವನಾತ್ಮಕ ಸ್ಥಿರತೆಗೆ ಸಹಕಾರಿ ಎಂದೂ ಸಲಹೆ ನೀಡಲಾಗಿದೆ.

PREV
Read more Articles on