ನವದೆಹಲಿ: ನೌಕರರು ನಿವೃತ್ತಿಯಾದ 10 ವರ್ಷದ ಬಳಿಕ ಒಂದೇ ಬಾರಿಗೆ ಪೂರ್ತಿ ಹಣ ಅಥವಾ ಪ್ರತಿ 10 ವರ್ಷಕ್ಕೊಮ್ಮೆ ಹಣ ಹಿಂಪಡೆಯಲು ಅವಕಾಶ ಸಿಗುವ ರೀತಿ ಕಾರ್ಮಿಕರ ಭವಿಷ್ಯ ನಿಧಿ(ಪಿಎಫ್) ನಿಯಮಗಳಿಗೆ ಬದಲಾವಣೆ ತರುವ ಕುರಿತು ಪಿಎಫ್ ಮಂಡಳಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರಸ್ತುತ ಇರುವ ನಿಯಮ ಪ್ರಕಾರ, ಉದ್ಯೋಗಿಗೆ 58 ವರ್ಷ ತುಂಬಿ ಅವರು ನಿವೃತ್ತರಾದಾಗ ಅಥವಾ ಕೆಲಸ ಬಿಟ್ಟ 2 ತಿಂಗಳಾದರೂ ನಿರುದ್ಯೋಗಿಯಾಗಿ ಉಳಿದಾಗ ಮಾತ್ರ ಪಿಎಫ್ ಹಣ ಪಡೆಯಬಹುದಿತ್ತು. ಆದರೆ ಆ ನಿಯಮಕ್ಕೆ ಬದಲಾವಣೆ ತರುವ ಪ್ರಸ್ತಾಪ ಮುಂದಿಡಲಾಗಿದೆ. ಇದರಿಂದ, ಬೇಗ ನಿವೃತ್ತಿ ಪಡೆಯಲು ಇಚ್ಛಿಸುವವರು ಸೇರಿದಂತೆ, ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿರುವ 7 ಕೋಟಿ ಜನರಿಗೆ ಅನುಕೂಲವಾಗುವ ಅಂದಾಜಿದೆ. ಇತ್ತೀಚೆಗಷ್ಟೇ, ಪಿಎಫ್ ಖಾತೆಯಿಂದ ಯುಪಿಐ ಅಥವಾ ಎಟಿಎಂ ಮೂಲಕ 1 ಲಕ್ಷ ರು. ವರೆಗೆ ಹಣವನ್ನು ಪಡೆಯಲು ಅನುವು ಮಾಡಿಕೊಡಲಾಗಿತ್ತು.