‘ಸೂಪರ್‌ 6’ ಭರವಸೆ ಈಡೇರಿಕೆಯೇ ನಾಯ್ಡುಗೆ ಸವಾಲು

KannadaprabhaNewsNetwork | Updated : Jun 11 2024, 08:21 AM IST

ಸಾರಾಂಶ

ಮಹಿಳೆಯರಿಗೆ ಉಚಿತ ಬಸ್‌, ಉಚಿತ ಸಿಲಿಂಡರ್‌, 4000 ರು. ಮಾಸಿಕ ಪಿಂಚಣಿ, ರೈತರಿಗೆ ವರ್ಷಕ್ಕೆ 20 ಸಾವಿರ ರು., ಪ್ರತಿ ವಿದ್ಯಾರ್ಥಿಗೆ 15 ಸಾವಿರ ರು. ನೀಡುವುದಾಗಿ ಟಿಡಿಪಿ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದು, ಜಾರಿಗೆ ಸಂಪನ್ಮೂಲ ಹೊಂದಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ.

ಅಮರಾವತಿ: ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಟಿಡಿಪಿ ನಾಯಕ ಹಾಗೂ ನಿಯೋಜಿತ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಈಗ ಕಾಂಗ್ರೆಸ್‌ನ ಗ್ಯಾರಂಟಿ ಮಾದರಿಗಳ ತಮ್ಮ ‘ಸೂಪರ್ 6’ ಭರವಸೆಗಳನ್ನು ಈಡೇರಿಸುವ ಒತ್ತಡಕ್ಕೆ ಸಿಲುಕಲಿದ್ದಾರೆ. ಏಕೆಂದರೆ ರಾಜ್ಯದ ಬೊಕ್ಕಸಕ್ಕೆ ಇಷ್ಟು ಹಣ ನೀಡಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.

ಸಾಮಾಜಿಕ ಪಿಂಚಣಿ ಯೋಜನೆಯಡಿ, ನಾಯ್ಡು ಅವರು ಮಾಸಿಕ ಪಿಂಚಣಿಯನ್ನು ಈಗಿರುವ 3,000 ರು.ಗಳಿಂದ 4,000 ರು.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಏಪ್ರಿಲ್, ಮೇ ಮತ್ತು ಜೂನ್‌ನ ತಲಾ 1000 ರು. ಹಿಂಬಾಕಿಯನ್ನೂ 65 ಲಕ್ಷ ಫಲಾನುಭವಿಗಳಿಗೆ ತಿಳಿಸಿದ್ದರು.

 ಇದನ್ನು ಭರಿಸಲು ಈಗ ಜುಲೈ ಒಳಗೆ 4500 ಕೋಟಿ ರು. ಬೇಕು.ಕರ್ನಾಟಕ ರೀತಿ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್‌ ಪ್ರಯಾಣದ ಭರವಸೆ 2ನೇ ಭರವಸೆಯಾಗಿದೆ. ಇದಕ್ಕೆ ಆಂಧ್ರಪ್ರದೇಶ ಸಾರಿಗೆ ನಿಗಮಕ್ಕೆ ಮಾಸಿಕ 450-500 ಕೋಟಿ ರು.ಗಳನ್ನು ಸರ್ಕಾರ ನೀಡಬೇಕು. ಆದರೆ ರಾಜ್ಯದಲ್ಲಿ ಮಾಸಿಕ ಎಷ್ಟು ಮಹಿಳೆಯರು ಸಂಚರಿಸುತ್ತಾರೆ ಎಂಬ ಅಧ್ಯಯನವೇ ಈವರೆಗೂ ಆಗಿಲ್ಲ.‘ಸೂಪರ್ ಸಿಕ್ಸ್’ ಅಡಿಯಲ್ಲಿ, ಟಿಡಿಪಿಯು ಪ್ರತಿ ವರ್ಷ ಶಾಲೆಗೆ ಹೋಗುವ ಮಗುವಿಗೆ 15,000 ರು. ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು, 

ಇನ್ನು ರಾಜ್ಯದಲ್ಲಿ ಪ್ರತಿ ಮನೆಗೆ ಇಂತಿಷ್ಟು ಉಚಿತ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌, ಪ್ರತಿ ರೈತನಿಗೆ ವಾರ್ಷಿಕ 20 ಸಾವಿರ ರು. ನೀಡುವ ಭರವಸೆಯನ್ನೂ ನಾಯ್ಡು ನೀಡಿದ್ದರು.ಆದರೆ ಈ ಸೂಪರ್‌ 6 ಗ್ಯಾರಂಟಿಗಳನ್ನು ಭರಿಸಲು ವರ್ಷಕ್ಕೆ 1.21 ಲಕ್ಷ ಕೋಟಿ ರು. ಬೇಕು. ಇದು ಬೆಚ್ಚಿ ಬೀಳಿಸುವಂಥ ಮೊತ್ತ ಈ ಭರವಸೆಗಳನ್ನು ಟೀಕಿಸಿದ್ದ ನಿರ್ಗಮಿತ ಮುಖ್ಯಮಂತ್ರಿ, ವೈಎಸ್ಸಾರ್‌ ಕಾಂಗ್ರೆಸ್ ನಾಯಕ ಜಗನ್ಮೋಹನ ರೆಡ್ಡಿ ಹೇಳದ್ದರು.

Share this article