ನಮೀಬಿಯಾದಿಂದ ತರಲಾಗಿದ್ದ ಗಂಡು ಚೀತಾ ಶೌರ್ಯ ಸಾವು

KannadaprabhaNewsNetwork |  
Published : Jan 17, 2024, 02:01 AM ISTUpdated : Jan 17, 2024, 02:16 PM IST
ಚೀತಾ | Kannada Prabha

ಸಾರಾಂಶ

ಕುನೋ ಅರಣ್ಯ ವಲಯದಲ್ಲಿ ಈವರೆಗೆ 10 ಚೀತಾ ಬಲಿಯಾಗಿದ್ದು, 3 ಮರಿಗಳು ಮತ್ತು 7 ಹಿರಿಯ ಚೀತಾಗಳು ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಬಲಿಯಾಗಿವೆ. ಇದರೊಂದಿಗೆ ಪ್ರಾಜೆಕ್ಟ್‌ ಚೀತಾ ಅಡಿಯಲ್ಲಿ ಭಾರತದಲ್ಲಿ ಚೀತಾ ಪುನರುಜ್ಜೀವನ ಕಾರ್ಯ ದುರ್ಗಮ ಹಾದಿಯಲ್ಲಿ ಸಾಗುವ ಗೋಚರ ಕಾಣಿಸಿದೆ.

ಭೋಪಾಲ್‌: ಪ್ರಾಜೆಕ್ಟ್‌ ಚೀತಾದಡಿಯಲ್ಲಿ ನಮೀಬಿಯಾದಿಂದ ಭಾರತಕ್ಕೆ ತಂದಿದ್ದ ಗಂಡು ಚೀತಾ ‘ಶೌರ್ಯ’ ಮಂಗಳವಾರ ಸಾವನ್ನಪ್ಪಿದೆ. ಇದರೊಂದಿಗೆ ಕುನೋ ಅರಣ್ಯದಲ್ಲಿ 10ನೇ ಚೀತಾ ಸಾವನ್ನಪ್ಪಿದಂತಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕುನೋ ಅರಣ್ಯ ಸಿಬ್ಬಂದಿ, ‘ಬೆಳಗ್ಗೆ 11 ರಿಂದಲೇ ಅದರ ನಡಿಗೆಯಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಲಾಗಿತ್ತು. ನಂತರ ಅದನ್ನು ಪ್ರತ್ಯೇಕ ಸ್ಥಳಕ್ಕೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದಾಗ ತುಸು ಚೇತರಿಕೆ ಕಂಡಿತು. 

ಆದರೆ ಮುಂದೆ ನಿಶ್ಶಕ್ತಿ ಹೆಚ್ಚಾಗಿ ದೇಹಸ್ಥಿತಿ ಉಲ್ಬಣಗೊಂಡು ಚಿಕಿತ್ಸೆಗೆ ಸ್ಪಂದಿಸಲಾಗದೆ ಮಧ್ಯಾಹ್ನ 3:30ರ ಸುಮಾರಿಗೆ ಸಾವನ್ನಪ್ಪಿತು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ವರದಿ ಬಂದ ನಂತರ ತಿಳಿಯಲಿದೆ’ ಎಂದಿದ್ದಾರೆ. 

ನಮಿಬಿಯಾದಲ್ಲಿ ಫ್ರೆಡ್ಡಿ ಎಂಬ ಹೆಸರುಳ್ಳ ‘ಚೀತಾ’ವನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ‘ಶೌರ್ಯ’ ಎಂದು ಮರುನಾಮಕರಣ ಮಾಡಲಾಗಿತ್ತು.

ಭಾರತದಲ್ಲಿ 18 ಚೀತಾ ಜೀವಂತ: ಪ್ರಾಜೆಕ್ಟ್‌ ಚೀತಾದಡಿಯಲ್ಲಿ 2022ರಲ್ಲಿ 8 ಚೀತಾಗಳನ್ನು ನಮಿಬಿಯಾದಿಂದಲೂ, 2023ರಲ್ಲಿ 12 ಚೀತಾಗಳನ್ನು ದ.ಆಫ್ರಿಕಾದಿಂದಲೂ ತರಲಾಗಿತ್ತು. ಈ ನಡುವೆ ಜ್ವಾಲಾ ಎಂಬ ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. 

ಇದರಲ್ಲಿ 3 ಮರಿಗಳು ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಸಾವನ್ನಪ್ಪಿದರೆ, 6 ದೊಡ್ಡ ಚೀತಾಗಳೂ ವಿವಿಧ ಕಾರಣಗಳಿಗೆ ಸಾವನ್ನಪ್ಪಿದ್ದವು. ನಂತರ ಜ.3, 2024ರಂದು ಆಶಾ ಚಿರತೆ 3 ಮರಿಗಳಿಗೆ ಜನ್ಮ ನೀಡಿತ್ತು. 

ಮಂಗಳವಾರ ಶೌರ್ಯ ಚೀತಾ ಸಾವನ್ನಪ್ಪಿದ್ದರಿಂದ ಈವರೆಗೆ ಭಾರತದಲ್ಲಿ ಒಟ್ಟು 10 ಚೀತಾಗಳು ಸಾವನ್ನಪ್ಪಿದಂತಾಗಿದೆ. ಚೀತಾಗಳ ಸಂಖ್ಯೆ 18ಕ್ಕೆ ಕುಸಿದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿಂದೂರದ ವೇಳೆ ಅಡಗಲು ಸೂಚನೆ ಇತ್ತು: ಜರ್ದಾರಿ
2025 ಸಾರ್ಥಕ ವರ್ಷ: ಮನ್‌ ಕಿ ಬಾತ್‌ನಲ್ಲಿ ಮೋದಿ