ನವದೆಹಲಿ: ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರುವ ಮತ್ತು ಅದನ್ನು ಇನ್ನಷ್ಟು ವಿಸ್ತರಿಸುವ ಅಮೆರಿಕದ ನಡೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಚೀನಾ ಹೇಳಿದೆ. ಈ ಮೂಲಕ ಟ್ರಂಪ್ ತೆರಿಗೆ ದಾಳಿಯ ವಿರುದ್ಧ ರಷ್ಯಾ ಬಳಿಕ ಇದೀಗ ಚೀನಾ ಕೂಡಾ ನೆರ ಬೆಂಬಲ ಘೋಷಿಸಿದಂತಾಗಿದೆ.
ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರ ಭಾರತ ಭೇಟಿ ಹಾಗೂ ಯಶಸ್ವಿ ಗಡಿ ಮಾತುಕತೆಯ ಬೆನ್ನಲ್ಲೇ , ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ಭಾರತದ ಮೇಲೆ ತೆರಿಗೆ ಹೇರುತ್ತಿರುವ ಅಮೆರಿಕದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಭಾರತ-ಚೀನಾ ನಡುವಿನ ಆಪ್ತ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಫೀಹಾಂಗ್, ‘ಅಮೆರಿಕ ಭಾರತದ ಮೇಲೆ ಶೇ.50ರವರೆಗೆ ತೆರಿಗೆ ಹೇರಿದೆ. ಚೀನಾ ಖಡಾಖಂಡಿತವಾಗಿ ಇದನ್ನು ವಿರೋಧಿಸುತ್ತದೆ ಹಾಗೂ ಭಾರತದೊಂದಿದೆ ದೃಢವಾಗಿ ನಿಲ್ಲುತ್ತದೆ. ವ್ಯಾಪಾರ ಯುದ್ಧವು ಜಾಗತಿಕ ಆರ್ಥಿಕತೆ ಮತ್ತು ವ್ಯಾವಾರ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ. ಭಾರತ ಮತ್ತು ಚೀನಾ ಸ್ನೇಹ ಏಷ್ಯಾಕ್ಕೆ ಪ್ರಯೋಜನ ನೀಡುತ್ತದೆ. ಏಷ್ಯಾದ ಆರ್ಥಿಕ ಪ್ರಗತಿಗೆ ನಾವು ಡಬಲ್ ಇಂಜಿನ್‌ಗಳು. ನಮ್ಮ ಏಕತೆ ಜಗತ್ತಿಗೆ ಬಹುದೊಡ್ಡ ಲಾಭ ತರುತ್ತದೆ’ ಎಂದರು.
ಗಲ್ವಾನ್ ಸಂಘರ್ಷದ ಬಳಿಕ ಹದಗೆಟ್ಟಿದ್ದ ಭಾರತ ಹಾಗೂ ಚೀನಾ ಸಂಬಂಧ ಪುನಃ ಸುಧಾರಿಸುತ್ತಿರುವ ಹೊತ್ತಿನಲ್ಲೇ ಈ ಮಹತ್ವದ ಹೇಳಿಕೆ ಬಂದಿದೆ.
ರಷ್ಯಾ ತೈಲ ಖರೀದಿ: ಟ್ರಂಪ್‌ಗೆ ಜೈಶಂಕರ್ ತಿರುಗೇಟು
ನವದೆಹಲಿ: ಭಾರತ ರಷ್ಯಾ ತೈಲದ ಅತಿದೊಡ್ಡ ಗ್ರಾಹಕನೂ ಅಲ್ಲ, 2022ರ ನಂತರ ರಷ್ಯಾ ಜೊತೆಗಿನ ವ್ಯಾಪಾರದಲ್ಲಿ ಅತಿದೊಡ್ಡ ಏರಿಕೆಯೂ ಆಗಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ರಷ್ಯಾದಿಂದ ಭಾರತ ಭಾರೀ ಪ್ರಮಾಣದಲ್ಲಿ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಹೇರಿದ ಬಳಿಕ ಇದೇ ಮೊದಲ ಬಾರಿ ಸರ್ಕಾರದ ಉನ್ನತ ವ್ಯಕ್ತಿಯೊಬ್ಬರು ಸ್ಪಷ್ಟ ಮಾತುಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.3 ದಿನಗಳ ಮಾಸ್ಕೋ ಪ್ರವಾಸದಲ್ಲಿರುವ ಜೈಶಂಕರ್, ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ನಾವು ರಷ್ಯಾ ತೈಲದ ಅತಿದೊಡ್ಡ ಗ್ರಾಹಕರಲ್ಲ. ಅದು ಚೀನಾ. ದ್ರವ ನೈಸರ್ಗಿಕ ಅನಿಲದ (ಎಲ್‌ಎನ್‌ಜಿ) ಅತಿದೊಡ್ಡ ಗ್ರಾಹಕರೂ ನಾವಲ್ಲ. 2022ರ ನಂತರ ರಷ್ಯಾದೊಂದಿಗೆ ಅತಿದೊಡ್ಡ ವ್ಯಾಪಾರ ಏರಿಕೆ ಹೊಂದಿರುವ ದೇಶ ನಮ್ಮದಲ್ಲ. ದಕ್ಷಿಣದ ಕೆಲವು ದೇಶಗಳು ಎಂದು ಭಾವಿಸುತ್ತೇನೆ. ನಾವು ಅಮೆರಿಕದಿಂದಲೂ ತೈಲ ಖರೀದಿಸುತ್ತಿದ್ದೇವೆ ಮತ್ತು ಅದರ ಪ್ರಮಾಣ ಏರಿಕೆಯಾಗುತ್ತಲೇ ಇದೆ’ ಎಂದರು.