ಸಿಂದೂರದ ಕುರಿತು ಪಾಕ್‌ಗೆ ಚೀನಾದಿಂದ ರಹಸ್ಯ ಮಾಹಿತಿ

KannadaprabhaNewsNetwork |  
Published : Jun 27, 2025, 12:48 AM ISTUpdated : Jun 27, 2025, 04:40 AM IST
ಪಾಕ್ | Kannada Prabha

ಸಾರಾಂಶ

ಭಾರತದ ವಾಯುರಕ್ಷಣಾ ವ್ಯವಸ್ಥೆ, ಕ್ಷಿಪಣಿ, ವಿಮಾನ ಮಾರ್ಗಗಳು ಇತ್ಯಾದಿ ಕುರಿತ ರಹಸ್ಯ ಮಾಹಿತಿಯನ್ನು ಚೀನಾ ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ.

ಇಸ್ಲಾಮಾಬಾದ್: ಭಾರತದ ವಾಯುರಕ್ಷಣಾ ವ್ಯವಸ್ಥೆ, ಕ್ಷಿಪಣಿ, ವಿಮಾನ ಮಾರ್ಗಗಳು ಇತ್ಯಾದಿ ಕುರಿತ ರಹಸ್ಯ ಮಾಹಿತಿಯನ್ನು ಚೀನಾ ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ‘ಅರಬ್ ನ್ಯೂಸ್’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ಸಂದರ್ಶಕಿ, ‘ಸಂಘರ್ಷದ (ಆಪರೇಷನ್ ಸಿಂದೂರ) ನಂತರದ ಗುಪ್ತಚರ ಮಾಹಿತಿ ಹಂಚಿಕೆಯ ಬಗ್ಗೆ ಏನು ಹೇಳುತ್ತೀರಿ? ನಿಮಗೆ ಗೊತ್ತಾ, ಇದು ಚೀನಾಕ್ಕೆ ಬಹಳ ಶ್ರೀಮಂತವಾದ ಸುಗ್ಗಿ’ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಆಸಿಫ್‌, ‘ಈ ದಿನಗಳಲ್ಲಿ ಪರಸ್ಪರ ಹತ್ತಿರವಿರುವ ದೇಶಗಳು ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುತ್ತವೆ. ನಿರ್ದಿಷ್ಟವಾಗಿ, ಭಾರತದ ವಾಯುರಕ್ಷಣಾ ವ್ಯವಸ್ಥೆ, ಕ್ಷಿಪಣಿ, ವಿಮಾನ ಮಾರ್ಗಗಳ ಕುರಿತಾದ ರಹಸ್ಯ ಮಾಹಿತಿಗಳನ್ನು ಚೀನಾ ನಮ್ಮೊಂದಿಗೆ ಹಂಚಿಕೊಂಡಿದೆ. ನಮ್ಮಂತೆಯೇ ಚೀನಾವೂ ಭಾರತದೊಂದಿಗೆ ಸಮಸ್ಯೆ ಹೊಂದಿದೆ. ಹಾಗಾಗಿ ನಾವು ರಹಸ್ಯ ಮಾಹಿತಿ ಹಂಚಿಕೊಳ್ಳುವುದು ಸಾಮಾನ್ಯ’ ಎಂದಿದ್ದಾರೆ.

ಪಾಕ್‌ಗೆ ಸಿಂದೂರದ ಮಾಹಿತಿ ಸೋರಿಕೆ: ನೌಕಾ ಸಿಬ್ಬಂದಿ ಸೆರೆ

ಜೈಪುರ: ಆಪರೇಷನ್ ಸಿಂದೂರ ಸೇರಿದಂತೆ ಸೂಕ್ಷ್ಮ ಕಾರ್ಯಾಚರಣೆಗಳ ಸಮಯದಲ್ಲಿ ಭಾರತದ ರಕ್ಷಣಾ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದ ಮೇಲೆ ದೆಹಲಿಯ ನೌಕಾ ಕಚೇರಿಯ ಗುಮಾಸ್ತನೊಬ್ಬನನ್ನು ಬಂಧಿಸಲಾಗಿದೆ.

ಹರ್ಯಾಣದ ರೆವಾರಿ ಮೂಲದ ವಿಶಾಲ್ ಯಾದವ್ ಬಂಧಿತ. ಈತ ದೆಹಲಿಯ ನೌಕಾಸೇನಾ ಭವನದಲ್ಲಿರುವ ಡಾಕ್‌ಯಾರ್ಡ್ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದ. ‘ಪ್ರಿಯಾ ಶರ್ಮಾ’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಮಹಿಳಾ ಹ್ಯಾಂಡ್ಲರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಆಕೆಯೊಂದಿಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂವಹನ ನಡೆಸುತ್ತಿದ್ದ. ಈತ ಆನ್‌ಲೈನ್ ಗೇಮಿಂಗ್‌ ವ್ಯಸನಿಯಾಗಿದ್ದು, ಅದಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. 

ಹಣದ ಆಸೆಗಾಗಿ ಸೂಕ್ಷ್ಮ ರಕ್ಷಣಾ ಮಾಹಿತಿಗಳನ್ನು ಪಾಕಿಸ್ತಾನಿ ಮಹಿಳೆಗೆ ಸೋರಿಕೆ ಮಾಡುತ್ತಿದ್ದ. ಆಪರೇಷನ್ ಸಿಂದೂರದ ಮಾಹಿತಿಗಳನ್ನೂ ಆಕೆಗೆ ತಿಳಿಸಿದ್ದ. ಕ್ರಿಪ್ಟೋಕರೆನ್ಸಿ ಹಾಗೂ ಇನ್ನಿತರ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ಹಣ ಪಡೆಯುತ್ತಿದ್ದ ಎಂದು ಗುಪ್ತಚರ ಅಧಿಕಾರಿಗಳು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ