ತೆಲುಗು ನಟ ಚಿರಂಜೀವಿಗೆ ಗಿನ್ನೆಸ್ ದಾಖಲೆ : ಭಾರತೀಯ ಚಿತ್ರರಂಗದ 45 ವರ್ಷಗಳ ಸುದೀರ್ಘ ವೃತ್ತಿ ಜೀವನದ ‘ಸಮೃದ್ಧ ತಾರೆ’

KannadaprabhaNewsNetwork |  
Published : Sep 23, 2024, 01:17 AM ISTUpdated : Sep 23, 2024, 05:12 AM IST
ನಟ ಚಿರಂಜೀವಿ | Kannada Prabha

ಸಾರಾಂಶ

ತೆಲುಗು ನಟ ಚಿರಂಜೀವಿ ಅವರು 156 ಚಿತ್ರಗಳಲ್ಲಿ 537 ಹಾಡುಗಳಿಗೆ 24,000 ಬಗೆಯ ಹೆಜ್ಜೆ ಹಾಕಿ ಭಾರತೀಯ ಚಿತ್ರರಂಗದ ಅತ್ಯಂತ ‘ಪ್ರೊಲಿಫಿಕ್‌ ತಾರೆ’ ಎಂಬ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 45 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಈ ಸಾಧನೆ ಮಾಡಿದ್ದಾರೆ.

ಹೈದರಾಬಾದ್‌: ತೆಲುಗು ನಟ ಚಿರಂಜೀವಿ ಅವರು ಭಾರತೀಯ ಚಿತ್ರರಂಗದ ಅತ್ಯಂತ ‘ಪ್ರೊಲಿಫಿಕ್‌ ತಾರೆ’ (ಸಮೃದ್ಧ ನಟ) ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.

1978ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಚಿರಂಜೀವಿ, ಸುದೀರ್ಘ 45 ವರ್ಷಗಳ ವೃತ್ತಿಯಲ್ಲಿ 156 ಚಿತ್ರಗಳ 537 ಹಾಡುಗಳಿಗೆ 24,000 ಬಗೆಯ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಅವರಿಗೆ ದಾಖಲೆ ಸಂದಿದೆ.

ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಅವರು, ‘ನಾನು ಗಿನ್ನೆಸ್‌ ದಾಖಲೆ ನಿರ್ಮಿಸುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಚಿತ್ರವೃತ್ತಿಯಲ್ಲಿ ನೃತ್ಯ ನನ್ನ ಜೀವನದ ಭಾಗವೇ ಆಗಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ, ಚಿರಂಜೀವಿಯವರನ್ನು ಅಭಿನಂದಿಸಿದ್ದಾರೆ.

==

10, 20, 50 ರು. ಕೊರತೆ ನೀಗಿಸಿ: ನಿರ್ಮಲಾಗೆ ಕಾಂಗ್ರೆಸ್ಸಿಗನ ಪತ್ರ

ನವದೆಹಲಿ: ‘ದಿಢೀರನೆ ಇತ್ತೀಚಿನಿಂದ 10, 20, 50 ರು. ನೋಟುಗಳ ಕೊರತೆ ಉಂಟಾಗಿದೆ. ಸಣ್ಣ ಉದ್ದಿಮೆದಾರರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ,ದಿನಗೂಲಿ ನೌಕರರಿಗೆ ತೊಂದರೆಯಾಗಿದೆ. ಇದನ್ನು ಪರಿಹರಿಸಿ’ ಎಂದು ಲೋಕಸಭೆಯ ಕಾಂಗ್ರೆಸ್‌ ಸಚೇತಕ ಮಾಣಿಕ್ಯಂ ಟ್ಯಾಗೋರ್‌ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದಾರೆ.‘ಸಣ್ಣ ಪ್ರಮಾಣದ ಕರೆನ್ಸಿ ನೋಟುಗಳ ಕೊರತೆ ಲಕ್ಷಾಂತರ ಜನರಿಗೆ ಅದರಲ್ಲಿಯೂ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ತೊಂದರೆಯಾಗಿದೆ. 10,20, 50 ರು. ನೋಟುಗಳ ಕೊರತೆ ಅನಾಕೂಲತೆ ಉಂಟು ಮಾಡಿದೆ. ಯುಪಿಐ ಮತ್ತು ನಗದು ರಹಿತ ವಹಿವಾಟು ಹೆಚ್ಚಿಸಲು ಆರ್‌ಬಿಐ ಈ ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿದೆ. ಇದರಿಂದ ಜನರಿಗೆ ಅನಾನೂಕಲವಾಗಿದೆ. ಹೀಗಾಗಿ ಆರ್‌ಬಿಐಗೆ ನೋಟುಗಳ ಮುದ್ರಣ ಮತ್ತು ವಿತರಣೆಯನ್ನು ಮರು ಪ್ರಾರಂಭಿಸಲು ಸೂಚಿಸಬೇಕು’ ಎಂದು ಪತ್ರದಲ್ಲಿ ಬರೆದಿದ್ದಾರೆ.

==

ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಅವಧಿ ಅಂತ್ಯ

ನವದೆಹಲಿ: ಭಾರತೀಯ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಕರ್ನಾಟಕ ಮೂಲದ ಬಿ.ವಿ.ಶ್ರೀನಿವಾಸ್ ಅವರ ಅವಧಿ ಮುಕ್ತಾಯ ಆಗಿದೆ. ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರಾಗಿ ಉದಯ್‌ ಭಾನು ಚಿಬ್ ಅವರನ್ನು ನೇಮಕ ಮಾಡಲಾಗಿದೆ.ಚಿಬ್‌ ಅವರು ಜಮ್ಮು ಕಾಶ್ಮೀರದ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ, ಭಾರತೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹೀಗಾಗಿ ಇವರನ್ನೇ ನೂತನ ಅಧ್ಯಕ್ಷರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇಮಿಸಿದ್ದಾರೆ. ಇದೇ ವೇಳೆ ನಿರ್ಗಮಿತ ಅಧ್ಯಕ್ಷ ಶ್ರೀನಿವಾಸ್‌ ಅವರು ಪಕ್ಷಕ್ಕೆ ನೀಡಿದ ಕೊಡುಗೆಗಳನ್ನು ಕಾಂಗ್ರೆಸ್‌ ಸ್ಮರಿಸಿದೆ.

==

ಕಮ್ಯುನಿಸ್ಟ್‌ ನಾಯಕ ಅನುರ ಲಂಕಾ ನೂತನ ಅಧ್ಯಕ್ಷ

ಕೊಲಂಬೋ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಜನತಾ ವಿಮುಕ್ತಿ ಪೆರುಮುನ ಪಕ್ಷದ ಅನುರ ಕುಮಾರ ದಿಸ್ಸನಾಯಕೆ ಆಯ್ಕೆಯಾಗಿದ್ದಾರೆ. ಸೋಮವಾರ ಅನುರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಶನಿವಾರ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದ್ದು, ಭಾನುವಾರ ಮತ ಎಣಿಕೆ ನಡೆಯಿತು. ಈ ವೇಳೆ ಶೇ.42.31ರಷ್ಟು ಮತ ಪಡೆದು ಅನುರಾ ಆಯ್ಕೆಯಾಗಿದ್ದಾರೆ. ಸಮಗಿ ಜನ ಬಲವೇಗಯಾ ಪಕ್ಷದ ಸಜಿತಾ ಪ್ರೇಮದಾಸಗೆ ಶೇ.32.76ರಷ್ಟು ಮತ್ತು ಮಾಜಿ ಅಧ್ಯಕ್ಷ ಅನಿಲ್‌ ವಿಕ್ರಮಸಿಂಘೆ ಶೇ.17.27ರಷ್ಟು ಮತ ಪಡೆದರು.

ಕಮ್ಯುನಿಸ್ಟ್‌ ನಾಯಕರಾಗಿರುವ ಅನುರ, 1970 ಮತ್ತು 1980ರಲ್ಲಿ ನಡೆಸಿದ ಎರಡು ದಂಗೆಗಳು ದೇಶದಲ್ಲಿ 80000 ಜನರ ಸಾವಿಗೆ ಕಾರಣವಾಗಿದ್ದವು. 2020ರಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಅನುರ ಅವರ ಪಕ್ಷ ಕೇವಲ ಶೇ.4ರಷ್ಟು ಮತ ಪಡೆದಿತ್ತು. 2022ರಲ್ಲಿ ದೇಶ ಆರ್ಥಿಕವಾಗಿ ಪತನಗೊಂಡಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಲಾಗಿತ್ತು.

==

ಅಯೋಧ್ಯೆಗೆ ಹೋದರೂ ರಾಮಮಂದಿರಕ್ಕೆ ಹೋಗದ ಬದರಿ ಶಂಕರಾಚಾರ್ಯ

ಅಯೋಧ್ಯೆ: ಉತ್ತರಾಖಂಡ ಬದರಿ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅಯೋಧ್ಯೆಗೆ ಭಾನುವಾರ ಭೇಟಿ ನೀಡಿದ್ದು, ಈ ವೇಳೆ ರಾಮಮಂದಿರಕ್ಕೆ ಭೇಟಿ ನೀಡಲು ನಿರಾಕರಿಸಿದ್ದಾರೆ.‘ಅರ್ಧಂಬರ್ಧ ನಿರ್ಮಾಣವಾಗಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಿಲ್ಲ. ರಾಮಮಂದಿರದ ಶಿಖರದ ನಿರ್ಮಾಣ ಪೂರ್ಣವಾದ ನಂತರ ಅಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚಿನೇಶ್ವರನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸ್ವಾಮಿಗಳು ನಂತರ ರಾಮ ಜನ್ಮಭೂಮಿ ಸಂಕೀರ್ಣದ ಸುತ್ತ ಪ್ರದಕ್ಷಿಣೆ ಮಾತ್ರ ಹಾಕಿದ್ದಾರೆ.

ಈ ಮೊದಲು ಇವರು ಅಪೂರ್ಣ ರಾಮಮಂದಿರದಲ್ಲಿ ಬಾಲರಾಮರ ಪ್ರಣಪ್ರತಿಷ್ಠಾಪನೆ ನಡೆಸುವುದನ್ನೂ ಶ್ರೀಗಳು ವಿರೋಧಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ