ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅಂಕಗಳ ವಿವರಗಳನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶನಿವಾರ ಬಿಡುಗಡೆ ಮಾಡಿದೆ. ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದ ಶಕ್ತಿ ದುಬೆ ಶೇ.51.5 ಅಂಕ ಗಳಿಸಿದ್ದಾರೆ.
ಒಟ್ಟು 2,025 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಅವುಗಳ ಪೈಕಿ ಲಿಖಿತ ಪರೀಕ್ಷೆಗೆ 1,750 ಮತ್ತು ಸಂದರ್ಶನಕ್ಕೆ 275 ಅಂಕಗಳಿರುತ್ತವೆ. ಶಕ್ತಿ ದುಬೆ ಒಟ್ಟು 1,043 ಅಂಕಗಳನ್ನು ಪಡೆದಿದ್ದು, ಲಿಖಿತ ಪರೀಕ್ಷೆಯಲ್ಲಿ 843 ಮತ್ತು ಮೌಖಿಕ ಪರೀಕ್ಷೆಯಲ್ಲಿ 200 ಅಂಕಗಳನ್ನು ಗಳಿಸಿದ್ದಾರೆ. ಅವರು ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ಐಚ್ಛಿಕ ವಿಷಯವಾಗಿಟ್ಟುಕೊಂಡಿದ್ದರು. ತಮ್ಮ 5ನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ 2ನೇ ರ್‍ಯಾಂಕ್ ಪಡೆದ ಹರ್ಷಿತಾ ಗೋಯೆಲ್ 1038 ಅಂಕ, 3ನೇ ರ್‍ಯಾಂಕ್ ಪಡೆದ ಡೋಂಗ್ರೆ ಅರ್ಚಿತ್ ಪರಾಗ್ 1,038, 4ನೇ ರ್‍ಯಾಂಕ್ ಪಡೆದ ಶಾ ಮಾರ್ಗಿ ಚಿರಾಗ್ 1,035 ಅಂಕ ಮತ್ತು 5ನೇ ಸ್ಥಾನ ಪಡೆದ ಆಕಾಶ್ ಗರ್ಗ್ 1,032 ಅಂಕ ಪಡೆದುಕೊಂಡಿದ್ದಾರೆ.
ಸ್ವಚ್ಛತಾ ಕಾರ್ಮಿಕರ ಮೇಲೆ ಹರಿದ ಟ್ರಕ್: 7 ಜನ ಸಾವು
ಗುರುಗಾಂವ್: ನೂಹ್ ಜಿಲ್ಲೆಯ ದೆಹಲಿ- ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ನೈರ್ಮಲ್ಯ ಕಾರ್ಮಿಕರ ಮೇಲೆ ವೇಗವಾಗಿ ಬಂದ ಟ್ರಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಆರು ಮಹಿಳೆಯರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದರೆ, ಐದು ಮಂದಿ ಗಂಭೀರ ಗಾಯಗೊಂಡ ಘಟನೆ ಶನಿವಾರ ನಡೆದಿದೆ. 11 ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗ ಟ್ರಕ್ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಪಂಚಾಯತ್ ಅಭ್ಯರ್ಥಿಗಳೂ ಬಾಕಿ ಪ್ರಕರಣದ ಮಾಹಿತಿ ನೀಡೋದು ಕಡ್ಡಾಯ: ಸುಪ್ರೀಂ
ನವದೆಹಲಿ: ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಪ್ರಕರಣವೊಂದರಲ್ಲಿ ಅರುಣಾಚಲ ಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.ಅರುಣಾಚಲದ ಮಂಡಿ ಜಿಲ್ಲೆಯ ಪಾಂಗನಾ ಪಂಚಾಯಿತಿಯ ಅಧ್ಯಕ್ಷ ಬಸಂತ್ ಲಾಲ್ ಎಂಬುವರು ತಮ್ಮ ಮೇಲಿದ್ದ ಕ್ರಿಮಿನಲ್ ಪ್ರಕರಣವನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿರದ ಕಾರಣ ಅವರ ಆಯ್ಕೆಯನ್ನು ಅಸಿಂಧು ಎಂದು ಹೈಕೋರ್ಟ್ 2024ರ ಅ.16ರಂದು ಘೋಷಿಸಿತ್ತು.
ಅಂತೆಯೇ, 6 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಳಿಸಿತ್ತು.ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ। ಸೂರ್ಯಕಾಂತ್ ಹಾಗೂ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠ, ‘ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವವರು ತಮ್ಮ ಮೇಲಿರುವ ಪ್ರಕರಣಗಳ ಮಾಹಿತಿಯನ್ನು ಬಹಿರಂಗಪಡಿಸುವುದು ಕಡ್ಡಾಯ’ ಎಂದು ಹೈಕೋರ್ಟ್ ಆದೇಶವನ್ನು ಬೆಂಬಲಿಸಿದೆ.
ಮಾನಸ ಸರೋವರ ಯಾತ್ರೆಜೂನ್‌ನಿಂದ ಪುನರಾರಂಭನವದೆಹಲಿ: ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಜೂನ್‌ನಿಂದ ಪುನರಾರಂಭ ಮಾಡಲು ಭಾರತ ಮತ್ತು ಚೀನಾ ನಿರ್ಧರಿಸಿದೆ. 2020ರ ಕೋವಿಡ್ ಬಳಿಕಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆ ಸ್ಥಗಿತಗೊಂಡಿತ್ತು.
ಆದರೆ ಇದೀಗ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ಸಲುವಾಗಿ ಕಳೆದ ಅಕ್ಟೋಬರ್ 21 ರಂದು ಮಾಡಿಕೊಂಡ ಒಪ್ಪಂದದ ಪ್ರಕಾರ ಯಾತ್ರೆ ಪುನರಾರಂಭಗೊಳ್ಳಲಿದೆ.ಈ ಬಗ್ಗೆ ವಿದೇಶಾಂಗ ಇಲಾಖೆಯು ಶನಿವಾರ ಮಾಹಿತಿ ನೀಡಿದ್ದು, ‘ಯಾತ್ರೆಯು ಜೂನ್‌ನಿಂದ ಆಗಸ್ಟ್ ತಿಂಗಳ ತನಕ ನಡೆಯಲಿದ್ದು ಉತ್ತರಾಖಂಡದ ಲಿಪುಲೇಖ್ ಪಾಸ್ ಮತ್ತು ಸಿಕ್ಕಿಂನ ನಾಥು ಲಾ ಮಾರ್ಗದಲ್ಲಿ ನಡೆಯಲಿದೆ. ತಲಾ 50 ಯಾತ್ರಿಗಳನ್ನು ಒಳಗೊಂಡ 5 ಬ್ಯಾಚ್‌ಗಳು ಮತ್ತು 50 ಯಾತ್ರಿಗಳನ್ನು ಒಳಗೊಂಡ 10 ಬ್ಯಾಚ್‌ಗಳು ಪ್ರತ್ಯೇಕವಾಗಿ ಎರಡು ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ’ ಎಂದಿದೆ. ಯಾತ್ರೆಗೆ ಅರ್ಜಿಗಳನ್ನು kmy.gov.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.