ಸಚಿವ ಕುಮಾರಸ್ವಾಮಿ, ಲೋಕಾಯುಕ್ತ ವಿಶೇಷ ತನಿಖಾ ದಳದ ಐಪಿಎಸ್‌ ಅಧಿಕಾರಿ ನಡುವೆ ಜಟಾಪಟಿ

KannadaprabhaNewsNetwork |  
Published : Sep 29, 2024, 01:41 AM ISTUpdated : Sep 29, 2024, 04:58 AM IST
HDK 1A | Kannada Prabha

ಸಾರಾಂಶ

ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ಭ್ರಷ್ಟ ಅಧಿಕಾರಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ತಮ್ಮ ವಿರುದ್ಧದ ಪ್ರಕರಣದಲ್ಲಿ ರಾಜ್ಯಪಾಲರ ಪತ್ರ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.  

  ಬೆಂಗಳೂರು : ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಎಂ.ಚಂದ್ರಶೇಖರ್ ಭ್ರಷ್ಟ ಅಧಿಕಾರಿಯಾಗಿದ್ದು, ಆತನ ಮೂಲಕ ರಾಜ್ಯಪಾಲರ ಕಚೇರಿ ಸಿಬ್ಬಂದಿಯ ತನಿಖೆಗೆ ಕಾಂಗ್ರೆಸ್‌ ಸರ್ಕಾರ ಅನುಮತಿಯನ್ನು ಕೇಳಿಸಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.

ಶನಿವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್‌ನಂತಹ ದರೋಡೆಕೋರ ಅಧಿಕಾರಿಗಳನ್ನಿಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ. ಈತನಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಪೂರ್ಣ ಕೃಪಾಕಟಾಕ್ಷವಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವ ತನಿಖೆಯೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜಕೀಯ ಸೇಡಿಗಾಗಿ ತನಿಖೆ ನಡೆಸಲಾಗುತ್ತಿದೆ. ಅದಕ್ಕಾಗಿ ಚಂದ್ರಶೇಖರ್‌ನಂತಹ ಕಳಂಕಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲಾಗುವುದು ಎಂದು ವಾಗ್ದಾಳಿ ನಡೆಸಿದರು.

ನನ್ನ ವಿರುದ್ಧದ ಪ್ರಕರಣ ಸಂಬಂಧ ರಾಜ್ಯಪಾಲರು ಲೋಕಾಯುಕ್ತಕ್ಕೆ ಬರೆದಿದ್ದ ಅತಿ ಗೌಪ್ಯ ಪತ್ರವೊಂದು ಸೋರಿಕೆಯಾಗಿದ್ದು, ಚಂದ್ರಶೇಖರ್ ಅವರಿಂದಲೇ ಸೋರಿಕೆಯಾಗಿದೆ. ಆದರೆ, ಅದೇ ಅಧಿಕಾರಿ ರಾಜ್ಯಪಾಲರ ಕಚೇರಿಯಿಂದಲೇ ಪತ್ರ ಸೋರಿಕೆ ಆಗಿದೆ ಎಂದು ಕಥೆ ಕಟ್ಟಿ ರಾಜ್ಯಪಾಲರ ಕಾರ್ಯಾಲಯದ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲು ಅನುಮತಿ ಕೊಡುವಂತೆ ಲೋಕಾಯುಕ್ತ ತನಿಖಾ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪತ್ರ ಸೋರಿಕೆ ಬಗ್ಗೆ ರಾಜ್ಯಪಾಲರ ಸಿಬ್ಬಂದಿ ವಿಚಾರಣೆಗೆ ಚಂದ್ರಶೇಖರ್ ಪತ್ರ ಬರೆದು ಉದ್ಧಟತನ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಮಾಚಲ ಪ್ರದೇಶ ಕೇಡರ್‌ ಅಧಿಕಾರಿ:

ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶದ ಕೇಡರ್ ಐಪಿಎಸ್ ಅಧಿಕಾರಿ. ಐದು ವರ್ಷಗಳ ಅವಧಿಗೆ ನಿಯೋಜನೆ ಮೇಲೆ ಕರ್ನಾಟಕಕ್ಕೆ ಬಂದರು. ಹಿಮಾಚಲ ಪ್ರದೇಶದಲ್ಲಿ ಹವಾಮಾನ ಸರಿಯಾಗಿಲ್ಲ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ರಾಜ್ಯದಲ್ಲಿಯೇ ಮುಂದುವರೆದಿದ್ದಾರೆ. ನಿಯೋಜನೆ ಮೇಲೆ ಬಂದು ರಾಜ್ಯದ ಕೇಡರ್ ಅಧಿಕಾರಿಯಾಗುತ್ತಾರೆ. ಅದಕ್ಕಾಗಿ ಮಾಡಿರುವ ಅಕ್ರಮಗಳನ್ನು ಹೇಳುವಂತಿಲ್ಲ. ಅವೆಲ್ಲಾ ಬಹಳ ಸೂಕ್ಷ್ಮ ವಿಚಾರಗಳು ಎಂದರು.

ಇದೇ ಚಂದ್ರಶೇಖರ್ ತನ್ನ ಪತ್ನಿ ಹೆಸರಿನಲ್ಲಿ ಮಾನ್ಯತಾ ಟೆಕ್‌ ಪಾರ್ಕ್‌ ಬಳಿ 38 ಮಹಡಿಯ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ. ಅದು ರಾಜಾಕಾಲುವೆ ಮೇಲೆ ಇದೆ. ಅಲ್ಲದೆ, ಕೆರೆಯನ್ನು ಕೂಡ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಇತರರು ಉಪಸ್ಥಿತರಿದ್ದರು.

---------------

ರೌಡಿ ದೂರಿನಿಂದ ಸಿಕ್ಕಿಬಿದ್ದ ಚಂದ್ರಶೇಖರ್

ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್ ಅಕ್ರಮಗಳನ್ನು ಎಸಗಿದ್ದಾರೆ ಎಂದು ಹಲವು ಆರೋಪಗಳನ್ನು ಮಾಡಿದ ಎಚ್‌.ಡಿ.ಕುಮಾರಸ್ವಾಮಿ, ರೌಡಿ ದೂರಿನಿಂದಾಗಿ ಚಂದ್ರಶೇಖರ್‌ ಸಿಕ್ಕಿ ಹಾಕಿಕೊಂಡ ಎಂದು ಹೇಳಿದರು.

ವಿಜಯ್ ತಾತಾ ಎಂಬಾತನ ಕುಮ್ಮಕ್ಕಿನಿಂದಾಗಿ ಸಾಕಷ್ಟು ಅಕ್ರಮಗಳನ್ನು ಎಸಗಿದ್ದಾರೆ. ಶ್ರೀಧರ್ ಎಂಬ ರೌಡಿ ನೀಡಿರುವ ದೂರಿನಲ್ಲಿ ವಿಜಯ್‌ ತಾತಾ ಮತ್ತು ಚಂದ್ರಶೇಖರ್‌ ಅಕ್ರಮಗಳು ಬಯಲಾಗುತ್ತವೆ. ಅಲ್ಲದೇ, ಕಿಶೋರ್ ಎಂಬ ಇನ್ಸ್‌ಪೆಕ್ಟರೊಬ್ಬರನ್ನು ಬ್ಲಾಕ್ ಮೇಲ್ ಮಾಡಿ 20 ಕೋಟಿ ರು.ಗೆ ಬೇಡಿಕೆ ಇಡಲಾಗುತ್ತದೆ. ಇಂತಹ ಭ್ರಷ್ಟ ಅಧಿಕಾರಿಯ ಬೆನ್ನಿಗೆ ಸರ್ಕಾರ ಇದೆ ಎಂದು ಕಿಡಿಕಾರಿದರು.

ಪಿಎಸಿಲ್‌ ಕಂಪನಿಯನ್ನು ಬೆದರಿಸಿ 10 ಕೋಟಿ ರು. ವಸೂಲಿ, ಆಂಬಿಡೆಂಟ್‌ ಕಂಪನಿಯಿಂದ 30 ಕೋಟಿ ರು. ಸೇರಿದಂತೆ ಇದೇ ರೀತಿ ಕೋಟ್ಯಂತರ ರು. ವಸೂಲಿ ಮಾಡಿರುವ ಇತಿಹಾಸ ಚಂದ್ರಶೇಖರ್‌ಗೆ ಇದೆ ಎಂದು ಹೇಳಿದರು.

==

ಹಂದಿಗಳ ಜೊತೆಗೆ ಕುಸ್ತಿ ಆಡಲ್ಲ: ಎಚ್‌ಡಿಕೆಗೆ ಚಂದ್ರಶೇಖರ್‌ ತಿವಿತ

 ಬೆಂಗಳೂರು : ‘ಹಂದಿಗಳೊಂದಿಗೆ ಎಂದಿಗೂ ಕುಸ್ತಿಯಾಡಬೇಡಿ. ನೀವಿಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿಯು ಅದನ್ನು ಇಷ್ಟಪಡುತ್ತದೆ.’ಹೀಗೆ ಇಂಗ್ಲೀಷ್‌ ದಾರ್ಶನಿಕ ಜಾರ್ಜ್ ಬರ್ನಾರ್ಡ್ ಷಾ ಅವರ ಪದಗಳನ್ನು ಉಲ್ಲೇಖಿಸಿ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್‌ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ವಿರುದ್ಧ ತಮ್ಮ ಸಹೋದ್ಯೋಗಿಗಳಿಗೆ ಪತ್ರ ಬರೆದಿರುವ ಚಂದ್ರಶೇಖರ್‌ ಅವರು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಆರೋಪಿ ಎಂದೇ ಉಲ್ಲೇಖಿಸಿ ಟೀಕಾಪ್ರಹಾರ ನಡೆಸಿದ್ದಾರೆ.ಎಸ್‌ಐಟಿಯ ಕ್ರೈಂ ನಂಬರ್16/14ರಲ್ಲಿ ಆರೋಪಿಯಾಗಿರುವ ಎಚ್.ಡಿ.ಕುಮಾರಸ್ವಾಮಿ, ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮತ್ತು ಬೆದರಿಕೆಗಳನ್ನು ಮಾಡಿದ್ದಾರೆ. ತಮಗೆ ತಿಳಿದಿರುವಂತೆ ಎಸ್‌ಐಟಿ, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರಿತ್ತು. ಜಾಮೀನಿನ ಮೇಲಿರುವ ಆರೋಪಿ ಎಚ್.ಡಿ. ಕುಮಾರಸ್ವಾಮಿ, ನಮ್ಮ ಕರ್ತವ್ಯಗಳನ್ನು ನಿರ್ವಹಿಸದಂತೆ ಮತ್ತು ನಮ್ಮನ್ನು ತಡೆಯಲು ನಡೆಸಿರುವ ಕುತಂತ್ರ ಎಂಬುದು ತೋರುತ್ತದೆ ಎಂದು ಕಿಡಿಕಾರಿದ್ದಾರೆ.

ನನ್ನ ಮೇಲೆ ದಾಳಿ ಮಾಡುವ ಮೂಲಕ ಎಸ್‌ಐಟಿ ಅಧಿಕಾರಿಗಳ ಮನಸ್ಸಿನಲ್ಲಿ ಭಯ ಮೂಡಿಸುವುದು ಉದ್ದೇಶವಾಗಿದೆ. ಆದರೆ, ಒಬ್ಬ ಆರೋಪಿ, ಅವನು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಮತ್ತು ಶಕ್ತಿಶಾಲಿಯಾಗಿದ್ದರೂ, ಅವನು ಆರೋಪಿಯೇ ಆಗಿರುತ್ತಾನೆ. ಇಂತಹ ಆರೋಪಗಳು ಮತ್ತು ಬೆದರಿಕೆಗಳಿಂದ ನಾವು ಹಿಂಜರಿಯಬೇಕಾಗಿಲ್ಲ. ನಾನು ಎಸ್‌ಐಟಿ ಮುಖ್ಯಸ್ಥನಾಗಿ ಭಯವಿಲ್ಲದೆ ಕೆಲಸ ಮಾಡುತ್ತೇನೆ ಮತ್ತು ಎಲ್ಲರಿಗೂ ನ್ಯಾಯ ಕೊಡಿಸುತ್ತೇನೆ ಎಂಬುದಾಗಿ ಭರವಸೆ ನೀಡುತ್ತೇನೆ ಎಂದಿದ್ದಾರೆ.

ನಮ್ಮ ಪ್ರಕರಣಗಳಲ್ಲಿ ಅಪರಾಧಿಗಳು ಮತ್ತು ಆರೋಪಿಗಳಿಂದ ನಿಮ್ಮನ್ನು ರಕ್ಷಿಸುತ್ತೇನೆ ಎಂಬ ಭರವಸೆಯನ್ನೂ ನೀಡುತ್ತೇನೆ. ಯಾವುದೇ ಬಾಹ್ಯ ಪ್ರಭಾವಗಳು ಎದುರಾದರೂ ಎದೆಗುಂದುವುದಿಲ್ಲ ಎಂದು ತಿಳಿಸಿದ್ದಾರೆ.

ಕೊನೆಯಲ್ಲಿ ಇಂಗ್ಲೀಷ್‌ ದಾರ್ಶನಿಕ ಜಾರ್ಜ್ ಬರ್ನಾರ್ಡ್ ಷಾ ಅವರ ಮಾತುಗಳನ್ನು ಉಲ್ಲೇಖಿಸಿ, ‘ಹಂದಿಗಳೊಂದಿಗೆ ಎಂದಿಗೂ ಕುಸ್ತಿಯಾಡಬೇಡಿ. ನೀವಿಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿಯು ಅದನ್ನು ಇಷ್ಟಪಡುತ್ತದೆ.’ ಅದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!