ಕೆನಡಾ ಹಿಂದೂಗಳ ಮೇಲೆ ಖಲಿಸ್ತಾನಿ ಗೂಂಡಾಗಿರಿ

KannadaprabhaNewsNetwork |  
Published : Nov 05, 2024, 12:34 AM IST
ಕೆನಡಾ | Kannada Prabha

ಸಾರಾಂಶ

ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ಮತ್ತಷ್ಟು ಎಲ್ಲೆ ಮೀರಿದ್ದು, ಇದೀಗ ಕಾರ್ಯಕ್ರಮವೊಂದರ ಸಂಬಂಧ ದೇಗುಲದ ಹೊರಗೆ ನೆರೆದಿದ್ದ ಹಿಂದೂಗಳ ಮೇಲೆ ಖಲಿಸ್ತಾನಿಗಳು ವಿನಾಕಾರಣ ಹಲ್ಲೆ ನಡೆಸಿದ್ದಾರೆ.

ಒಟ್ಟಾವ: ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ಮತ್ತಷ್ಟು ಎಲ್ಲೆ ಮೀರಿದ್ದು, ಇದೀಗ ಕಾರ್ಯಕ್ರಮವೊಂದರ ಸಂಬಂಧ ದೇಗುಲದ ಹೊರಗೆ ನೆರೆದಿದ್ದ ಹಿಂದೂಗಳ ಮೇಲೆ ಖಲಿಸ್ತಾನಿಗಳು ವಿನಾಕಾರಣ ಹಲ್ಲೆ ನಡೆಸಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ಪರಸ್ಪರ ಹೊಯ್‌ ಕೈ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಈ ನಡುವೆ, ಘಟನಾ ಸ್ಥಳದಲ್ಲಿ ಪೊಲೀಸರು ಏಕಾಏಕಿ ಹಿಂದೂ ಯುವಕನೊಬ್ಬನನ್ನು ವಶಕ್ಕೆ ಪಡೆದು ಕರೆದೊಯ್ದ ವಿಡಿಯೋಗಳು ಜಾಲತಾಣದಲ್ಲಿ ವೈರಲ್‌ ಆಗಿದೆ. ಇದಾದ ಬಳಿಕ ಖಲಿಸ್ತಾನಿ ಗೂಂಡಾಗಿರಿ ವಿರುದ್ಧ ಪ್ರತಿಭಟನೆ ನಡೆಸಿದ 3 ಹಿಂದೂ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೆನಡಾ ಪೊಲೀಸರ ಈ ನಡೆಗೆ ಭಾರೀ ಖಂಡನೆ ವ್ಯಕ್ತವಾಗಿದೆ. ಹಲ್ಲೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವಾಲಯ ಹಾಗೂ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಖಂಡಿಸಿವೆ.

ಇದರ ನಡುವೆಯೇ ಹಿಂದೂಗಳ ಮೇಲಿನ ದಾಳಿಯನ್ನು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಡೋ ಖಂಡಿಸಿದ್ದು, ಪ್ರತಿ ಕೆನಡಾ ಪ್ರಜೆಗೂ ತನ್ನ ಧರ್ಮವನ್ನು ಮುಕ್ತವಾಗಿ ಆಚರಿಸುವ ಎಲ್ಲಾ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಿಸಿದರು ಎಂದು ಶ್ಲಾಘಿಸಿದ್ದಾರೆ. ಆದರೆ ಖಲಿಸ್ತಾನಿಗಳ ವಿರುದ್ಧ ಒಂದೂ ಮಾತು ಆಡಿಲ್ಲ.

ಏನಾಯ್ತು?:

ಟೊರಂಟೋ ಸಮೀಪದ ಬ್ರಾಂಪ್ಟನ್‌ನಲ್ಲಿ ಭಾನುವಾರ ಹಿಂದೂ ಮಹಾಸಭಾ ಮಂದಿರವು ದೇಗುಲದ ಹೊರಭಾಗದಲ್ಲಿ ಸ್ಥಳೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳು ನೆರೆದಿದ್ದರು. ಈ ವೇಳೆ ಖಲಿಸ್ತಾನಿ ಧ್ವಜ, ಬ್ಯಾನರ್‌ ಹಿಡಿದು ಘೋಷಣೆ ಕೂಗುತ್ತಾ ಬಂದ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಗುಂಪು ಹಿಂದೂಗಳ ಮೇಲೆ ದಾಳಿ ನಡೆಸಿ ಅವರನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವೇಳೆ ಎರಡೂ ಗುಂಪುಗಳ ನಡುವೆ ಕಾದಾಟ ನಡೆದಿದೆ.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ನಡುವೆ ಹಲ್ಲೆ ಖಂಡಿಸಿ ನಿಂತಿದ್ದ ಹಿಂದೂಗಳ ಗುಂಪಿನಲ್ಲಿದ್ದ ಯುವಕನೊಬ್ಬನನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ತಮ್ಮೊಂದಿಗೆ ಕರೆದೊಯ್ದ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡಿವೆ. ಈ ಕುರಿತು ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಆದರೆ ದಾಳಿಕೋರರನ್ನು ಬಿಟ್ಟು ಹಿಂದೂ ಯುವಕರ ಮೇಲೇ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಖಂಡನೆ:

ಹಿಂದೂಗಳ ಮೇಲಿನ ದಾಳಿಯನ್ನು ಪೀಲ್‌ನ ಪ್ರಾಂತೀಯ ಪೊಲೀಸ್‌ ಪಡೆ, ಸ್ಥಳೀಯ ಮೇಯರ್‌ ಕೂಡ ಖಂಡಿಸಿದ್ದಾರೆ. ‘ಶಾಂತಿಯುತ ಪ್ರತಿಭಟನೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಿಂಸೆ ಮತ್ತು ಕ್ರಿಮಿನಲ್‌ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಇಂಥ ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು’ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಭಯ ಆಗುತ್ತಿದೆ- ಅರ್ಚಕ ಬ್ರಹ್ಮಭಟ್:ಸ್ಥಳೀಯ ದೇಗುಲವೊಂದರ ಅರ್ಚಕ ನಯನ್‌ ಬ್ರಹ್ಮಭಟ್ ಮಾತನಾಡಿ, ‘ಈ ಪ್ರದೇಶದಲ್ಲಿ ಪೊಲೀಸರು ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಮತ್ತು ಭದ್ರತೆ ನೀಡುವಲ್ಲಿ ವಿಫಲರಾಗಿದ್ದಾರೆ, ಇದರಿಂದಾಗಿ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಮುದಾಯವು ಈಗ ದೇವಾಲಯಗಳಿಗೆ ಭೇಟಿ ನೀಡಲು ಹೆದರುತ್ತಿದೆ’ ಎಂದಿದ್ದಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ