ಪಟನಾ: ಬಿಹಾರದಲ್ಲಿ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ತನಿಖೆ ನಡೆಸುತ್ತಿರುವ ಬಿಹಾರ ಸರ್ಕಾರದ ಆರ್ಥಿಕ ಅಪರಾಧಗಳ ಘಟಕ (ಇಒಯು) ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ, ‘ನೀಟ್-ಯುಜಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದು ಸ್ಪಷ್ಟವಾಗಿದೆ. ಇದರ ಹಿಂದೆ ಸಂಘಟಿತ ಜಾಲದ ಕೈವಾಡವಿದೆ’ ಎಂದು ತಿಳಿಸಲಾಗಿದೆ.
ಮೇ 5ರಂದು ನಡೆದಿದ್ದ ನೀಟ್ ಪರೀಕ್ಷೆ ವೇಳೆ ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆದ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಬಿಹಾರ ಆರ್ಥಿಕ ಅಪರಾಧ ಘಟಕ ತನಿಖೆ ವಹಿಸಿಕೊಂಡು ಈವರೆಗೆ 13 ಜನರನ್ನು ಬಂಧಿಸಿದೆ. ಈಗ ತಾನು ಈವರೆಗೆ ನಡೆಸಿದ ತನಿಖೆಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ವರದಿ ರೂಪದಲ್ಲಿ ನೀಡಿದೆ.
‘ತನಿಖೆಯಲ್ಲಿ ನಮಗೆ 3 ಅಂಶ ಸ್ಪಷ್ಟವಾಗಿವೆ. ಇದುವರೆಗಿನ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಶ್ನೆಪತ್ರಿಕೆ ಸೋರಿಕೆ ಸ್ಪಷ್ಟವಾಗಿದೆ. ಈ ಹಗರಣದಲ್ಲಿ ಅಂತಾರಾಜ್ಯ ಗ್ಯಾಂಗ್ ಶಾಮೀಲಾಗಿದೆ. ಅಲ್ಲದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಉತ್ತರ ರವಾನಿಸುವಲ್ಲಿ ಕುಖ್ಯಾತವಾಗಿರುವ ಬಿಹಾರದ ‘ಸಾಲ್ವರ್ಸ್ ಗ್ಯಾಂಗ್’ನ ಪಾತ್ರವಿದೆ’ ಎಂದು 6 ಪುಟದ ವರದಿಯಲ್ಲಿ ಬಿಹಾರ ಪೊಲೀಸರು ಹೇಳಿದ್ದಾರೆ.
‘ಬಂಧಿತರು ಸೋರಿಕೆ ಆದ ಪ್ರಶ್ನೆಪತ್ರಿಕೆಯ ಜೆರಾಕ್ಸ್ ಪ್ರತಿ ಸುಟ್ಟಿದ್ದು, ಅದರ ಭಾಗಶಃ ಪ್ರತಿ ಜಪ್ತಿ ಮಾಡಲಾಗಿದೆ, ವಿಚಾರಣೆ ಮತ್ತು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಸೋರಿಕೆ ಆಗಿದ್ದು ಸ್ಪಷ್ಟವಾಗಿದೆ. ಇದಲ್ಲದೆ ಜಾರ್ಖಂಡ್‌ನಲ್ಲಿ ಕೆಲವರನ್ನು ಬಂಧಿಸಲಾಗಿದೆ. ಹೀಗಾಗಿ ‘ಸಾಲ್ವರ್ ಗ್ಯಾಂಗ್’ ಹೆಸರಿನ ಪ್ರಶ್ನೆಪ್ರತ್ರಿಕೆ ಸೋರಿಕೆಯ ಅಂತಾರಾಜ್ಯ ಜಾಲ ಇದರಲ್ಲಿ ಭಾಗಿಯಾಗಿದ್ದು ಸ್ಪಷ್ಟವಾಗಿದೆ’ ಎಂದು ವರದಿ ವಿವರಿಸಿದೆ.
ಎನ್‌ಟಿಎ ವೆಬ್ ಹ್ಯಾಕ್ ಆಗಿಲ್ಲನವದೆಹಲಿ: ನೀಟ್-ಯುಜಿ, ಯುಜಿಸಿ-ನೆಟ್ ಪರೀಕ್ಷಾ ಅಕ್ರಮದ ಆರೋಪಗಳು ಇರುವ ಹೊತ್ತಿನಲ್ಲಿ ಹರಿದಾಡುತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವೆಬ್‌ಸೈಟ್ ಹ್ಯಾಕ್ ಸುದ್ದಿಯನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಎನ್‌ಟಿಎ ವೆಬ್‌ಸೈಟ್ ಹಾಗು ವೆಬ್ ಪೋರ್ಟಲ್ ಸುರಕ್ಷಿತವಾಗಿವೆ. ಅವುಗಳು ಹ್ಯಾಕ್ ಆಗಿವೆ ಎನ್ನುವುದು ಸುಳ್ಳು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ಪರೀಕ್ಷಾ ಸುಧಾರಣೆಗಳನ್ನು ಶಿಫಾರಸು ಮಾಡಲು ಮತ್ತು ಡೇಟಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವಾಲಯ ಶನಿವಾರ ಸಮಿತಿಯನ್ನು ಸ್ಥಾಪಿಸಿದೆ.
ಸಿಬಿಐ ತನಿಖೆ ಸ್ವಾಗತಿಸಿ ಐಎಂಎ
ನವದೆಹಲಿ: ನೀಟ್-ಯುಜಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘ ಸ್ವಾಗತಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆಯಾಗಿದ್ದು ಪ್ರಕರಣದ ಕುರಿತು ಸಿಬಿಐ ಭಾನುವಾರ ಎಫ್‌ಐಆರ್ ದಾಖಲಿಸಿದೆ.
‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಕಟ್ಟುನಿಟ್ಟು ಕ್ರಮಗಳನ್ನು ಕೈಗೊಂಡ ಸರ್ಕಾರದ ನಿರ್ಧಾರ ಶ್ಲಾಘನೀಯ. ಸಂಘಟಿತ ಅಪರಾಧಗಳಲ್ಲಿ ಭಾಗವಾಗಿರುವ ಪರೀಕ್ಷಾ ಅಧಿಕಾರಿಗಳು, ಸೇವಾ ಪೂರೈಕೆದಾರರು ಅಥವಾ ಸಂಸ್ಥೆಗಳಿಗೆ 10 ವರ್ಷ ಜೈಲು ಹಾಗೂ 1 ಕೋಟಿ ದಂಡ ವಿಧಿಸಬಹುದು’ ಎಂದು ಐಎಮ್‌ಎ ಮಾಹಿತಿ ನೀಡಿದೆ.