ಸಾರಾಂಶ
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮತಾಂತರದ ಬಗ್ಗೆ ಪ್ರತಿಕ್ರಿಯಿಸಿ, ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು. ಅಸ್ಪೃಶ್ಯತೆ ಏಕೆ ಬಂತು? ಅದನ್ನು ನಾವು ಹುಟ್ಟು ಹಾಕಿದ್ದೇವೆಯೇ? ಎಂದು ಪ್ರಶ್ನಿಸಿದರು.
ಅಸಮಾನತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲಾ ಧರ್ಮದಲ್ಲಿ ಇದ್ದರೂ, ಮತಾಂತರ ಆಗಿ ಎಂದು ಹೇಳಿಲ್ಲ. ಆದರೂ ಮತಾಂತರವಾಗಿದ್ದಾರೆ. ಅದು ಅವರ ಹಕ್ಕು ಎಂದು ಹೇಳಿದರು.ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಜಾತಿಗಣತಿಯಲ್ಲಿ ಹೊಸ ಜಾತಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಕೈಗೊಂಡಿರುವ ಜಾತಿ ಗಣತಿ ಬಗ್ಗೆ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಯಾರಾದರೂ ಮತಾಂತರಗೊಂಡಿದ್ದರೆ ಅವರ ಈಗಿನ ಜಾತಿಯನ್ನೇ ಮುಂಬರುವ ಜನಗಣತಿ ವೇಳೆ ಪರಿಗಣಿಸಲಾಗುವುದು. ಮತಾಂತರವಾಗುವುದು ಬೇಡ ಎಂದರೂ ವ್ಯವಸ್ಥೆಯ ಪರಿಣಾಮವಾಗಿ ಜನ ಮತಾಂತರಗೊಳ್ಳುತ್ತಾರೆ. ನಾನು ಮುಸ್ಲಿಂ ಆಗಿ ಮತಾಂತರ ಆದರೆ ನನ್ನ ಜಾತಿಯೂ ಆ ಧರ್ಮದ ಜೊತೆ ಸೇರುತ್ತೆ ಅಲ್ವಾ? ನಾನೇನು ಮುಸ್ಲಿಂ ಆಗಿ ಮತಾಂತರ ಆಗಲ್ಲ. ಸುಮ್ಮನೆ ಉದಾಹರಣೆ ಆಗಿ ಹೇಳಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.ನಾನೂ ಕೂಡ ಹಿಂದೂ:‘ನಾನೂ ಕೂಡ ಒಬ್ಬ ಹಿಂದೂ. ನನ್ನ ಹೆಸರಿನಲ್ಲಿಯೇ ಹಿಂದೂ ದೇವರಿದ್ದಾರೆ. ಸಿದ್ದ ಎಂದರೇ ಈಶ್ವರ ಮತ್ತು ರಾಮ ಎಂದರೇ ವಿಷ್ಣು. ಎರಡೂ ದೇವರ ಹೆಸರಿದೆ’ ಎಂದು ಹೇಳಿದರು.